
ಕಾರವಾರ: ನೆರೆಯ ಮಹಾರಾಷ್ಟ್ರದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಗೀಲನ್ ಬಾ ಸಿಂಡ್ರೋಮ್ (ಜಿಬಿಎಸ್) ಜಿಲ್ಲೆಗೆ ಕಾಲಿಡದಂತೆ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ. ಪಂಢರಪುರ ಜಾತ್ರೆ ಸೇರಿದಂತೆ ನೆರೆರಾಜ್ಯದ ಜಾತ್ರೆಗಳಲ್ಲಿ ಪಾಲ್ಗೊಂಡು ಬಂದವರ ಮಾಹಿತಿ ಕಲೆಹಾಕಲಾಗುತ್ತಿದೆ.
ಫೆ.10 ರಂದು ಮಹಾರಾಷ್ಟ್ರದ ಪಂಢರಪುರ ಜಾತ್ರೆಯಿಂದ ಮರಳಿದ್ದ ಹಳಿಯಾಳ ತಾಲ್ಲೂಕಿನ ಹಾವಗಿ ಸಮೀಪದ ಗೌಳಿಗವಾಡಾ, ಯಲ್ಲಾಪುರ ತಾಲ್ಲೂಕು ಕುಂದರಗಿ ಸಮೀಪದ ರಾಜೀವಾಡ ಮತ್ತು ಮಜ್ಜಿಗೆಹಳ್ಳದ ಸುಮಾರು 88 ಜನರಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ನಿಗಾ ಹೆಚ್ಚಿಸಲಾಗಿದೆ.
ಕಲುಷಿತ ನೀರು, ಆಹಾರ ಸೇವನೆಯಿಂದ ಹರಡಬಹುದಾದ ಸೋಂಕು ತೀವೃಸ್ವರೂಪದಲ್ಲಿ ಬಾಧಿಸುವ ಕಾರಣಕ್ಕೆ ಅಸ್ವಸ್ಥಗೊಂಡವರ ಆರೋಗ್ಯ ಸ್ಥಿತಿಗತಿಯನ್ನು ನಿರಂರ ಪರಿಶೀಲಿಸಲಾಗುತ್ತಿದೆ.
‘ಜಿಲ್ಲೆಯಲ್ಲಿ ಜಿಬಿಎಸ್ ಹರಡುವ ಅಪಾಯ ಕಡಿಮೆ. ಆದರೆ, ಆರಂಭಿಕ ಹಂತದಲ್ಲೇ ಸಾಧ್ಯವಾದಷ್ಟು ಎಲ್ಲ ಮುಂಜಾಗೃತೆ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಪಂಢರಪುರದಿಂದ ಬಂದು ಅಸ್ವಸ್ಥಗೊಂಡವರ ಪೈಕಿ ಬಹುತೇಕ ಮಂದಿಗೆ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲ್ಲೂಕು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿದೆ. ಅವರ ಆರೋಗ್ಯ ಸ್ಥಿತಿ ಸುಧಾರಿಸಿದೆ. ಹಳಿಯಾಳದ ಒಬ್ಬರು, ಯಲ್ಲಾಪುರದ ಇಬ್ಬರು ಮಾತ್ರ ಧಾರವಾಡದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ನೀರಜ್ ಬಿ.ವಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಮಹಾರಾಷ್ಟ್ರದಲ್ಲಿ ಜಿಬಿಎಸ್ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿಂದ ಬಂದ ಬಳಿಕ ಅಸ್ವಸ್ಥಗೊಂಡವರ ಆರೋಗ್ಯ ಸ್ಥಿತಿಗತಿ ಪರಿಶೀಲಿಸಲು ಸೂಚಿಸಲಾಗಿದೆ. ಪ್ರತಿದಿನ ಅವರ ಮನೆಗಳಿಗೆ ತೆರಳಿ ಆಶಾ ಕಾರ್ಯಕರ್ತೆಯರು, ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ವರದಿ ಸಲ್ಲಿಸುತ್ತಿದ್ದಾರೆ. ಜಿಲ್ಲೆಯ ಉಳಿದ ತಾಲ್ಲೂಕುಗಳಲ್ಲಿಯೂ ಪಂಢರಪುರಕ್ಕೆ ಭೇಟಿ ಕೊಟ್ಟು ಬಂದವರು ಸಾಕಷ್ಟು ಸಂಖ್ಯೆಯಲ್ಲಿದ್ದು, ಅವರ ಮಾಹಿತಿ ಕಲೆಹಾಕಿದ್ದೇವೆ’ ಎಂದು ವಿವರಿಸಿದರು.
ಹಳಿಯಾಳ ಯಲ್ಲಾಪುರದಲ್ಲಿ ಅಸ್ವಸ್ಥಗೊಂಡಿದ್ದವರ ಪೈಕಿ ಬಹುತೇಕ ಮಂದಿ ಚೇತರಿಸಿಕೊಂಡಿದ್ದಾರೆ. ಆದರೂ ನಾಲ್ಕು ವಾರಗಳವರೆಗೆ ಆರೋಗ್ಯ ಸ್ಥಿತಿಗತಿ ಮೇಲೆ ನಿಗಾ ಇಡಲಾಗುತ್ತದೆಡಾ.ನೀರಜ್ ಬಿ.ವಿ ಜಿಲ್ಲಾ ಆರೋಗ್ಯಾಧಿಕಾರಿ
‘ಗೀಲನ್ ಬಾ ಸಿಂಡ್ರೋಮ್‍ಗೆ ಕ್ಯಾಂಪಿಲೊಬ್ಯಾಕ್ಟರ್ ಜೆಬುನಿ ಎಂಬ ರೋಗಕಾರಕ ಬ್ಯಾಕ್ಟೀರಿಯಾ ಕಾರಣವಾಗುತ್ತದೆ. ಜಿಲ್ಲೆಯ 88 ಜನರ ಪೈಕಿ ಇನ್ನೂ ಆರೋಗ್ಯ ಸ್ಥಿತಿ ಸುಧಾರಿಸದ ಮೂವರ ಮಲದ ಮಾದರಿಯನ್ನು ಧಾರವಾಡದಲ್ಲಿ ತಪಾಸಣೆಗೆ ಒಳಪಡಿಸಲಾಗಿದೆ. ಅದರಲ್ಲಿ ಬ್ಯಾಕ್ಟೀರಿಯಾ ಪತ್ತೆಯಾಗಿಲ್ಲ ಎಂಬುದು ಖಚಿತವಾಗಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ನೀರಜ್ ಬಿ.ವಿ ತಿಳಿಸಿದರು. ‘ಬಿಸಿ ನೀರು ಮತ್ತು ಬಿಸಿಯಾದ ಆಹಾರ ಸೇವನೆಗೆ ಆದ್ಯತೆ ನೀಡಬೇಕು. ಹಣ್ಣು ತರಕಾರಿಗಳನ್ನು ಶುದ್ಧ ನೀರಿನಲ್ಲಿ ಸರಿಯಾಗಿ ತೊಳೆದು ತಿನ್ನಬೇಕು. ಕಲುಷಿತ ಸ್ಥಳಗಳಲ್ಲಿಟ್ಟ ಪದಾರ್ಥಗಳನ್ನು ಸೇವಿಸಬಾರದು. ವಾಂತಿ ಭೇದಿ ಸ್ನಾಯು ಸೆಳೆತ ಉಸಿರಾಟ ಸಮಸ್ಯೆಯ ಗುಣಲಕ್ಷಣ ಕಂಡುಬಂದರೆ ತಕ್ಷಣ ವೈದ್ಯರ ತಪಾಸಣೆಗೆ ಒಳಪಡಬೇಕು’ ಎಂದು ಅವರು ಸಹೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.