ADVERTISEMENT

‘ಆರೋಗ್ಯ ಸಮೀಕ್ಷೆ ಫಲಿತಾಂಶ ಉತ್ತೇಜನಕಾರಿ’

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2020, 12:26 IST
Last Updated 2 ಏಪ್ರಿಲ್ 2020, 12:26 IST
ಡಾ.ಕೆ.ಹರೀಶಕುಮಾರ್
ಡಾ.ಕೆ.ಹರೀಶಕುಮಾರ್   

ಕಾರವಾರ:ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾದ ಆರೋಗ್ಯ ಸಮೀಕ್ಷೆಯ ಫಲಿತಾಂಶ ಉತ್ತೇಜನಕಾರಿಯಾಗಿದ್ದು, 16 ಲಕ್ಷ ಜನರಲ್ಲಿ ಕೇವಲ 418 ಮಂದಿಗೆ ಜ್ವರದ ಸಮಸ್ಯೆಗಳು ಪತ್ತೆಯಾಗಿವೆ. ಆದರೆ, ಅದ್ಯಾವುದೂ ಕೋವಿಡ್ 19ಗೆ ಸಂಬಂಧಿಸಿದ್ದಲ್ಲ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಹೇಳಿದ್ದಾರೆ.

ಭಟ್ಕಳದಲ್ಲಿ 8 ಸಾವಿರ ಮನೆಗಳಲ್ಲಿ ಆರೋಗ್ಯ ಸಮೀಕ್ಷೆ ಕೈಗೊಳ್ಳಲಾಗಿದೆ. 4 ಸಾವಿರ ಮನೆಗಳಲ್ಲಿ ಇನ್ನೊಂದು ಸುತ್ತಿನ ಸಮೀಕ್ಷೆ ನಡೆಸಲಾಗುತ್ತದೆ. ಈಗಿನ ವರದಿಗಳ ಪ್ರಕಾರ ಅಲ್ಲಿ ಕೇವಲ 13 ಮಂದಿ ಮಾತ್ರ ಸಾಮಾನ್ಯ ಜ್ವರದ ಲಕ್ಷಣ ಹೊಂದಿದ್ದಾರೆ. ಕೊರೊನಾ ವೈರಸ್ ಹರಡುವುದನ್ನು ತಡೆಯಲು ಜಿಲ್ಲಾಡಳಿತವು ರೂಪಿಸಿದ ನಿಯಂತ್ರಣ ತಂತ್ರಗಳು ಸಕಾರಾತ್ಮಕ ಫಲಿತಾಂಶ ತೋರಿಸುತ್ತಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಜಿಲ್ಲೆಯಲ್ಲಿ ಕೋವಿಡ್ 19 ಪೀಡಿತ ಎಂಟೂಮಂದಿಯನ್ನು ನೌಕಾಪಡೆಯ ಪತಂಜಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸುಧಾರಿಸುತ್ತಿದೆ. ಅವರೊಂದಿಗೆ ಸಂಪರ್ಕಕ್ಕೆ ಬಂದಿದ್ದ ಎಲ್ಲರೂ ಜಿಲ್ಲಾಡಳಿತದ ಕ್ವಾರಂಟೈನ್ ಕೇಂದ್ರಗಳಲ್ಲಿ ವೈದ್ಯಕೀಯ ನಿಗಾದಲ್ಲಿದ್ದಾರೆ. ಯಾವುದೇ ತುರ್ತುಪರಿಸ್ಥಿತಿಯಲ್ಲಿ ಸಹಕಾರ ನೀಡವುದಾಗಿಭಾರತೀಯ ನೌಕಾಪಡೆಯು ಅಭಯ ನೀಡಿದೆ ಎಂದೂ ತಿಳಿಸಿದ್ದಾರೆ.

ADVERTISEMENT

‘ಜೀವನಾವಶ್ಯಕ ಸಾಮಗ್ರಿಯನ್ನು ಮನೆ ಮನೆಗೆ ತಲುಪಿಸುತ್ತಿರುವ ಕಾರಣರಸ್ತೆಗಳಲ್ಲಿ ಜನರ ಸಂಚಾರ ಗಣನೀಯವಾಗಿ ಇಳಿಕೆಯಾಗಿದೆ. ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಈ ಸವಾಲನ್ನು ನಿಭಾಯಿಸುವಲ್ಲಿ ಬಹುತೇಕಯಶಸ್ವಿಯಾಗಿದ್ದೇವೆ. ಜಿಲ್ಲೆಯಲ್ಲಿ ಅಗತ್ಯ ಸಾಮಗ್ರಿಯ ಸಂಗ್ರಹ ಸಾಕಷ್ಟಿದೆ. ಆದ್ದರಿಂದ ಯಾರೂ ಗಾಬರಿಯಾಗಬೇಕಿಲ್ಲ’ ಎಂದೂ ಹೇಳಿದ್ದಾರೆ.

‘ಲಾಕ್‌ಡೌನ್ ಅವಧಿಯುದ್ದಕ್ಕೂ ನಾವು ನಿಯಮಗಳನ್ನು ಇದೇ ರೀತಿ ಪಾಲಿಸಿದರೆ, ಕೊರೊನಾ ವೈರಸ್‌ನ ಸಮಸ್ಯೆಯಿಂದ ಖಂಡಿತ ಹೊರಬರುತ್ತೇವೆ. ಆದ್ದರಿಂದ ಸಾಮಾಜಿಕ ಅಂತರವನ್ನು ತಪ್ಪದೇಕಾಯ್ದುಕೊಳ್ಳಬೇಕು’ ಎಂದು ಅವರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.