ADVERTISEMENT

ಕಾರವಾರ | ಕಲ್ಲಂಗಡಿ ಬೆಳೆಗೆ ಬಿಸಿಲ ಆಘಾತ: ರೈತರಿಗೆ ಆತಂಕ

ಮಾಡಿದ ಖರ್ಚಿನ ಅರ್ಧದಷ್ಟು ಆದಾಯ ಗಳಿಕೆಯೂ ಕಷ್ಟ

ಗಣಪತಿ ಹೆಗಡೆ
Published 28 ಮಾರ್ಚ್ 2025, 6:13 IST
Last Updated 28 ಮಾರ್ಚ್ 2025, 6:13 IST
ಕಾರವಾರ ತಾಲ್ಲೂಕಿನ ಮಾಜಾಳಿಯಲ್ಲಿ ರೈತರೊಬ್ಬರ ಜಮೀನಿನಲ್ಲಿ ಬೆಳೆಯಲಾಗಿದ್ದ ಕಲ್ಲಂಗಡಿ ನಿರೀಕ್ಷಿತ ಬೆಳವಣಿಗೆ ಕಾಣದ ಪರಿಣಾಮ ಕೊಯ್ಲು ಮಾಡದೆ ಗದ್ದೆಯಲ್ಲಿ ಒಣಗುತ್ತಿದೆ
ಕಾರವಾರ ತಾಲ್ಲೂಕಿನ ಮಾಜಾಳಿಯಲ್ಲಿ ರೈತರೊಬ್ಬರ ಜಮೀನಿನಲ್ಲಿ ಬೆಳೆಯಲಾಗಿದ್ದ ಕಲ್ಲಂಗಡಿ ನಿರೀಕ್ಷಿತ ಬೆಳವಣಿಗೆ ಕಾಣದ ಪರಿಣಾಮ ಕೊಯ್ಲು ಮಾಡದೆ ಗದ್ದೆಯಲ್ಲಿ ಒಣಗುತ್ತಿದೆ   

ಕಾರವಾರ: ಅತಿಯಾದ ಸೆಕೆ, ಬಿಸಿಲ ಝಳದ ಪರಿಣಾಮ ಕಲ್ಲಂಗಡಿ ಇಳುವರಿಗೆ ಹೊಡೆತ ಕೊಟ್ಟಿದೆ. ಬೇಸಿಗೆಯಲ್ಲಿ ಬೇಡಿಕೆ ಹೆಚ್ಚುವ ಕಾರಣಕ್ಕೆ ಉತ್ತಮ ದರ ಪಡೆಯಬಹುದು ಎಂದುಕೊಂಡಿದ್ದ ರೈತರಿಗೂ ಭಾರಿ ನಿರಾಸೆಯಾಗಿದೆ.

ಕಾರವಾರ ಗ್ರಾಮೀಣ ಪ್ರದೇಶಗಳಾದ ಮುಡಗೇರಿ, ಭೈರೆ, ಉಳಗಾ, ಹಳಗಾ, ಮೈಂಗಿಣಿ, ಅಂಕೋಲಾ ತಾಲ್ಲೂಕಿನ ಗ್ರಾಮಿಣ ಪ್ರದೇಶಗಳಲ್ಲಿ, ಶಿರಸಿ ತಾಲ್ಲೂಕಿನ ಬನವಾಸಿ ಭಾಗದಲ್ಲಿ ಸೇರಿದಂತೆ ಬೇಸಿಗೆ ಅವಧಿಯಲ್ಲಿ ಸುಮಾರು 120 ಹೆಕ್ಟೇರ್‌ನಷ್ಟು ನೀರಾವರಿ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆಯಲಾಗುತ್ತಿದೆ.

ಬೇಸಿಗೆಯಲ್ಲಿ ಕಲ್ಲಂಗಡಿಗೆ ಹೆಚ್ಚು ಬೇಡಿಕೆ ಸಿಗುವ ಲೆಕ್ಕಾಚಾರದಿಂದ ಜನವರಿ ವೇಳೆಯಲ್ಲಿ ಬಿತ್ತನೆ ಮಾಡುವ ರೈತರು ಮಾರ್ಚ್ ಕೊನೆಯ ವಾರದ ಹೊತ್ತಿಗೆ ಫಸಲು ಕೊಯ್ಲು ಮಾಡುವ ತಯಾರಿಯಲ್ಲಿದ್ದರು. ತಿಂಗಳ ಹಿಂದೆ ಕೆ.ಜಿಗೆ ಸರಾಸರಿ ₹10 ರಿಂದ 12 ದರದಲ್ಲಿ ಮಾರಾಟ ಕಂಡಿದ್ದ ಕಲ್ಲಂಗಡಿಯ ದರವು ಈಗ ₹5, ₹6ಕ್ಕೆ ಇಳಿಕೆಯಾಗಿದೆ. ಇದರಿಂದ ನಷ್ಟದ ಭೀತಿ ಎದುರಾಗಿದೆ ಎಂಬುದು ರೈತರ ಆತಂಕ.

ADVERTISEMENT

‘ಕಡಿಮೆ ನೀರು ಬಳಸಿ ಬೆಳೆ ತೆಗೆಯಲು ಇಸ್ರೇಲಿ ಮಾದರಿಯಲ್ಲಿ ಮಲ್ಚಿಂಗ್ (ತೆಳುವಾದ ಪ್ಲಾಸ್ಟಿಕ್ ಹೊದಿಕೆ) ಬಳಸಿ ಕಲ್ಲಂಗಡಿ ಸಸಿಗಳನ್ನು ಬೆಳೆಸಲಾಯಿತು. ಬಿಸಿಲ ಝಳದಿಂದ ರೋಗ ಹರಡುವ ಆತಂಕದಿಂದ ಆರಂಭದಲ್ಲೇ ಔಷಧ ಸಿಂಪಡಿಸಲಾಯಿತು. ಎಕರೆಯೊಂದಕ್ಕೆ ಸುಮಾರು ₹80 ಸಾವಿರದಿಂದ ₹1ಲಕ್ಷದವರೆಗೆ ವೆಚ್ಚ ತಗುಲಿತು. ನಿರೀಕ್ಷೆಯಂತೆ ಕನಿಷ್ಠ 8 ಟನ್ ಇಳುವರಿ ಸಿಗಬಹುದು ಎಂಬ ಲೆಕ್ಕಾಚಾರ ಇಟ್ಟುಕೊಂಡಿದ್ದೆವು. ಆದರೆ ಅರ್ಧದಷ್ಟು ಇಳುವರಿಯೂ ಬಂದಿಲ್ಲ’ ಎಂದು ಮೈಂಗಿಣಿಯಲ್ಲಿ ಜಮೀನು ಗೇಣಿ ಪಡೆದು ಕೃಷಿ ಮಾಡುತ್ತಿರುವ ಭೈರೆ ಗ್ರಾಮದ ರಾಮಚಂದ್ರ ಗಾಂವಕರ್ ಬೇಸರ ವ್ಯಕ್ತಪಡಿಸಿದರು.

‘ಜನವರಿ, ಫೆಬ್ರವರಿ ತಿಂಗಳಲ್ಲಿ ಫಸಲು ಕೊಯ್ಲು ಮಾಡಿದ ರೈತರಿಗೆ ಮಾಡಿದ ವೆಚ್ಚದಷ್ಟು ಆದಾಯ ಲಭಿಸಿದೆ. ಆ ಬಳಿಕ ಕಲ್ಲಂಗಡಿ ಬೆಳೆದ ರೈತರಿಗೆ ಈ ಬಾರಿ ನಷ್ಟ ಎದುರಾಗಿದೆ. ಉಷ್ಣತೆಯ ಪ್ರಮಾಣ ಸರಾಸರಿ 40–42 ಡಿಗ್ರಿ ಸೆಲ್ಸಿಯಸ್‌ವರೆಗೆ ತಲುಪಿದ ಪರಿಣಾಮ ಪರಾಗಸ್ಪರ್ಶ ಕ್ರಿಯೆ ಸರಿಯಾಗಿಲ್ಲ. ಇದರಿಂದ ಕಲ್ಲಂಗಡಿ ಕಾಯಿಗಳ ಬೆಳವಣಿಗೆ ಕುಂಠಿತಗೊಂಡಿದೆ. ಬೆಳವಣಿಗೆ ಹಂತದಲ್ಲೇ ಕಾಯಿಗಳು ಒಣಗಿ ಹಾಳಾಗುತ್ತಿವೆ’ ಎಂದು ಮಾಜಾಳಿಯ ನಿತಿನ್ ಮೇತ್ರಿ ಹೇಳಿದರು.

ಅತಿಯಾದ ಸೆಕೆಯಿಂದ ಕಲ್ಲಂಗಡಿ ಇಳುವರಿ ಕುಂಠಿತವಾಗಿದೆ. ಆದರೆ ಬೆಳೆಯುವ ಕ್ಷೇತ್ರದ ಪ್ರಮಾಣದಲ್ಲಿ ಅಂತ ವ್ಯತ್ಯಾಸ ಆಗಿಲ್ಲ
ಸುನೀಲ್ ಅಂಕೋಲೇಕರ್ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ
ಮಹಾರಾಷ್ಟ್ರದ ಕಲ್ಲಂಗಡಿ ಮಾರುಕಟ್ಟೆಗೆ
‘ಜಿಲ್ಲೆಯಲ್ಲಿ ಬಿಸಿಲ ಝಳದಿಂದ ಕಲ್ಲಂಗಡಿ ಬೆಳೆಯ ಮೇಲೆ ಪರಿಣಾಮ ಬೀರಿದ್ದು ಒಂದೆಡೆಯಾದರೆ ಮಹಾರಾಷ್ಟ್ರದಿಂದ ವ್ಯಾಪಕ ಪ್ರಮಾಣದ ಕಲ್ಲಂಗಡಿ ಬೆಳೆ ರಾಜ್ಯದ ಮಾರುಕಟ್ಟೆಗೆ ಪ್ರವೇಶಿಸಿದೆ. ಇದರಿಂದ ಸ್ಥಳೀಯ ರೈತರು ಬೆಳೆದ ಕಲ್ಲಂಗಡಿಗೆ ದರ ಕಡಿಮೆಯಾಗಿದೆ’ ಎಂದು ವ್ಯಾಪಾರಿಯೊಬ್ಬರು ಹೇಳಿದರು. ‘ಪ್ರತಿ ಬಾರಿ ಕಲ್ಲಂಗಡಿಗೆ ಕೆಜಿಗೆ ಸರಾಸರಿ ₹12 ರಿಂದ ₹18 ದರದವರೆಗೂ ಖರೀದಿ ಮಾಡಿದ ಉದಾಹರಣೆ ಇದೆ. ಕೆಜಿಗೆ ₹15 ದರ ದೊರೆತರೆ ಮಾತ್ರ ರೈತರಿಗೆ ಲಾಭ ಸಿಗುತ್ತವೆ. ಆದರೆ ಅದರ ಅರ್ಧ ಮೊತ್ತಕ್ಕೆ ಖರೀದಿ ಮಾಡಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ನೆರೆ ರಾಜ್ಯದಿಂದ ಜಾಸ್ತಿ ಪ್ರಮಾಣದಲ್ಲಿ ಹಣ್ಣು ಪೂರೈಕೆಯಾಗಿರುವುದು ಕಾರಣ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.