ADVERTISEMENT

ಕಾರವಾರ: ಬಿಜೆಪಿ ಅಭ್ಯರ್ಥಿಗಳಿಗೆ ಭಾರವಾದ ‘ಮೋದಿ ಸಮಾವೇಶ’ ವೆಚ್ಚ

​ಪ್ರಜಾವಾಣಿ ವಾರ್ತೆ
Published 16 ಜೂನ್ 2023, 13:12 IST
Last Updated 16 ಜೂನ್ 2023, 13:12 IST
ಅಂಕೋಲಾದ ಹಟ್ಟಿಕೇರಿಯಲ್ಲಿ ಮೇ 3ರಂದು ನಡೆದಿದ್ದ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದ್ದ ಜನರಿಗೆ ಕೈಮುಗಿದಿದ್ದರು. ವೇದಿಕೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ, ಉತ್ತರ ಕನ್ನಡದ ಆರು ವಿಧಾನಸಭಾ ಕ್ಷೇತ್ರಗಳಿಂದ ಸ್ಪರ್ಧಿಸಿದ್ದ ಪಕ್ಷದ ಅಭ್ಯರ್ಥಿಗಳು ಇದ್ದರು (ಸಂಗ್ರಹ ಚಿತ್ರ)
ಅಂಕೋಲಾದ ಹಟ್ಟಿಕೇರಿಯಲ್ಲಿ ಮೇ 3ರಂದು ನಡೆದಿದ್ದ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದ್ದ ಜನರಿಗೆ ಕೈಮುಗಿದಿದ್ದರು. ವೇದಿಕೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ, ಉತ್ತರ ಕನ್ನಡದ ಆರು ವಿಧಾನಸಭಾ ಕ್ಷೇತ್ರಗಳಿಂದ ಸ್ಪರ್ಧಿಸಿದ್ದ ಪಕ್ಷದ ಅಭ್ಯರ್ಥಿಗಳು ಇದ್ದರು (ಸಂಗ್ರಹ ಚಿತ್ರ)   

ಕಾರವಾರ: ವಿಧಾನಸಭೆ ಚುನಾವಣೆ ವೇಳೆ ಅಂಕೋಲಾ ತಾಲ್ಲೂಕಿನ ಹಟ್ಟಿಕೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮೇ 3ರಂದು ನಡೆದ ಬಿಜೆಪಿ ಸಮಾವೇಶದ ವೆಚ್ಚ ಜಿಲ್ಲೆಯ ಆರೂ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳಿಗೆ ಭಾರವಾಗುವ ಸಾಧ್ಯತೆ ಇದೆ.

ಸಮಾವೇಶದ ವೇದಿಕೆ ಕಾರ್ಯಕ್ರಮಕ್ಕೆ ₹1.10 ಕೋಟಿ ಖರ್ಚು ತಗುಲಿರಬಹುದು ಎಂದು ಚುನಾವಣಾ ವೆಚ್ಚ ವಿಭಾಗದ ಅಧಿಕಾರಿಗಳು ಅಂದಾಜಿಸಿದ್ದಾರೆ. ಈ ವೆಚ್ಚವನ್ನು ಆರು ಅಭ್ಯರ್ಥಿಗಳಿಗೂ ಸಮನಾಗಿ ವಿಭಜಿಸಲಾಗುತ್ತದೆ. ತಲಾ ಒಬ್ಬ ಅಭ್ಯರ್ಥಿಗೆ ತಲಾ ₹18 ಲಕ್ಷ ವೆಚ್ಚ ಬರಲಿದೆ.

ಪ್ರಸಕ್ತ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿಗೆ ಗರಿಷ್ಠ ₹ 40 ಲಕ್ಷ ಮಾತ್ರ ಖರ್ಚು ಮಾಡಲು ಅವಕಾಶವಿತ್ತು. ಆರು ಅಭ್ಯರ್ಥಿಗಳ ಪೈಕಿ ನಾಲ್ವರು ಸೋತಿದ್ದು, ಇಬ್ಬರು ಶಾಸಕರಾಗಿದ್ದಾರೆ. ಒಂದು ವೇಳೆ ಚುನಾವಣೆ ವೆಚ್ಚ ಮಿತಿಗಿಂತಲೂ ಹೆಚ್ಚಾಗಿರುವುದು ಸಾಬೀತಾದರೆ ಶಾಸಕ ಸ್ಥಾನದಿಂದ ಅನರ್ಹಗೊಳ್ಳುವ ಸಾಧ್ಯತೆ ಇದೆ.

ADVERTISEMENT

‘ಮೋದಿ ಅವರ ಸಮಾವೇಶದ ವೇದಿಕೆ ಕಾರ್ಯಕ್ರಮಕ್ಕೆ ತಗುಲಿದ ವೆಚ್ಚ ಮಾತ್ರ ಅಭ್ಯರ್ಥಿಗಳ ಹೆಸರಿಗೆ ಸೇರಿಸಲಾಗುತ್ತದೆ. ಸಾರಿಗೆ ವ್ಯವಸ್ಥೆಗೆ ₹1.20 ಕೋಟಿ ವೆಚ್ಚವಾಗಿರಬಹುದು ಎಂದು ಅಂದಾಜಿಸಲಾಗಿದೆ. ಈ ವೆಚ್ಚ ತಮಗೆ ಸಂಬಂಧಿಸಿಲ್ಲ ಎಂದು ಅಭ್ಯರ್ಥಿಗಳು ಲಿಖಿತವಾಗಿ ಹೇಳಿದ್ದಾರೆ. ಹೀಗಾಗಿ ಸಾರಿಗೆ ವ್ಯವಸ್ಥೆ ಮಾಡಿದ್ದ 192 ಜನರ ವಿರುದ್ಧ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದ ಪ್ರಕರಣ ದಾಖಲಿಸಲಾಗಿದೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.