
ಜೊಯಿಡಾ: ತಾಲ್ಲೂಕಿನಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದ್ದು, ಮಳೆಗೆ ಗ್ರಾಮೀಣ ಪ್ರದೇಶದಲ್ಲಿ ಅವಾಂತರಗಳು ಸೃಷ್ಟಿಯಾಗಿದೆ.
ಮಂಗಳವಾರ ಬೆಳಿಗ್ಗೆ ತಾಲ್ಲೂಕಿನ ಶಿಂಗರಗಾಂವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾಡಾದಲ್ಲಿ ಸುವರ್ಣಾ ಸುತಾರ ಎಂಬುವರ ಮನೆಯ ಗೋಡೆಗಳು ಬಿದ್ದು ಹಾನಿಯಾಗಿದೆ.
ಮಳೆಗೆ ತಾಲ್ಲೂಕಿನ ಬಹುತೇಕ ಎಲ್ಲ ನದಿ ಹಳ್ಳಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಗ್ರಾಮೀಣ ಪ್ರದೇಶದಲ್ಲಿ ಜನರು ಸಂಚಾರಕ್ಕೆ ಪರದಾಡುವಂತಾಗಿದೆ.
ಮಂಗಳವಾರ ಅಣಶಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನುಜ್ಜಿ -ಆಜ್ಜೆ, ನವರ, ನುಜ್ಜಿ- ಪಾಟ್ನೆ - ಕುಂಬಗಾಳಿ ರಸ್ತೆಯಲ್ಲಿ ಕಿರು ಸೇತುವೆಗಳ ಮೇಲೆ ಮಳೆ ನೀರು ಹರಿದು ಸೇತುವೆ ಜೊತೆಗೆ ರಸ್ತೆಗಳಿಗೆ ಹಾನಿಯಾಗಿದೆ. ತಾಲ್ಲೂಕಿನ ತೇರಾಳಿ ಮೂಲಕ ಡಿಗ್ಗಿ ಭಾಗದ ಸಿಸೈ ಸೇರಿದಂತೆ ಹಲವು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಬಾಮಣೆ ಸಮೀಪದಲ್ಲಿ ಹಳ್ಳಕ್ಕೆ ನಿರ್ಮಿಸಿದ್ದ ತಾತ್ಕಾಲಿಕ ಸೇತುವೆ ಮಳೆ ನೀರಿಗೆ ಕೊಚ್ಚಿ ಹೋಗಿದ್ದು ಜನರು ಸಂಚಾರಕ್ಕೆ ಪರದಾಡುವಂತಾಗಿದೆ.
ಮಳೆಯ ಜೊತೆಗೆ ಆಗಾಗ್ಗೆ ಬಿಸುತ್ತಿರುವ ಗಾಳಿಗೆ ಅಲ್ಲಲ್ಲಿ ಮರಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದು ಹಾನಿಯಾಗಿದ್ದು ಅಣಶಿ, ಉಳವಿ,ಬಜಾರಕುಣಂಗ,ಗುಂದ,ಗಾಂಗೋಡಾ,ಕ್ಯಾಸಲ್ ರಾಕ್ ಭಾಗದಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಹಳ್ಳಿಗಳಲ್ಲಿ ವಿದ್ಯುತ್ ಇಲ್ಲದೆ ಜನರು ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದೆ.
ತಾಲ್ಲೂಕಿನ ಕುಂಡಲ ಭಾಗದಲ್ಲಿ ಅಧಿಕ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು ಅಪ್ಪರ ಕಾನೇರಿ ಜಲಾಶಯಕ್ಕೆ ಅಧಿಕ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು ಯಾವುದೇ ಸಂದರ್ಭದಲ್ಲಿ ಕುಂಡಲ ಸೇತುವೆ ಮುಳುಗಡೆ ಭೀತಿ ಎದುರಾಗಿದೆ, ಇದರಿಂದಾಗಿ ಕುಂಡಲ, ಕೆಲೋಲಿ ಸೇರಿದಂತೆ ಸುಮಾರು ಎಂಟು ಹಳ್ಳಿಗಳ ಜನರು ಸಂಪರ್ಕ ಕಡಿದುಕೊಳ್ಳುವ ಆತಂಕದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.