ADVERTISEMENT

ಉತ್ತರ ಕನ್ನಡ: ಹೆಸ್ಕಾಂ ನಿರ್ವಹಣಾ ವಿಭಾಗ ದುರ್ಬಲ!

ಜಿಲ್ಲೆಗೆ ಬರಲು ಹಿಂದೇಟು ಹಾಕುವ ಲೈನ್‌ಮೆನ್, ಎಂಜಿನಿಯರ್‌ಗಳು

ಗಣಪತಿ ಹೆಗಡೆ
Published 27 ಮೇ 2025, 4:59 IST
Last Updated 27 ಮೇ 2025, 4:59 IST
ಕಾರವಾರ ತಾಲ್ಲೂಕಿನ ಶಿರವಾಡ ಸಮೀಪ ವಿದ್ಯುತ್ ಕಂಬ ಏರಿ ದುರಸ್ತಿ ಕೆಲಸದಲ್ಲಿ ತೊಡಗಿರುವ ಲೈನ್‌ಮನ್
ಕಾರವಾರ ತಾಲ್ಲೂಕಿನ ಶಿರವಾಡ ಸಮೀಪ ವಿದ್ಯುತ್ ಕಂಬ ಏರಿ ದುರಸ್ತಿ ಕೆಲಸದಲ್ಲಿ ತೊಡಗಿರುವ ಲೈನ್‌ಮನ್   

ಕಾರವಾರ: ಜಲಶಕ್ತಿ ಬಳಸಿ ವಿದ್ಯುತ್ ಉತ್ಪಾದಿಸುವ ಪ್ರಕ್ರಿಯೆಯಲ್ಲಿ ರಾಜ್ಯದಲ್ಲೇ ಮುಂಚೂಣಿಯಲ್ಲಿರುವ ಜಿಲ್ಲೆಯಲ್ಲಿ ಹೆಸ್ಕಾಂನ ನಿರ್ವಹಣಾ ವಿಭಾಗದ ಶಕ್ತಿ ಕುಂದಿದೆ. ಇದರಿಂದ ಮಳೆ ಗಾಳಿಗೆ ಜಿಲ್ಲೆಯಾದ್ಯಂತ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ತಲೆದೋರುತ್ತಿದೆ.

ಗುಡ್ಡಗಾಡು ಪ್ರದೇಶ, ಅರಣ್ಯ ಭೂಮಿಯೇ ಹೆಚ್ಚಿರುವ ಈ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಲು ಲೈನ್‌ಮೆನ್‌ಗಳು ಹಿಂದೇಟು ಹಾಕುತ್ತಿದ್ದಾರೆ. ಜೊತೆಗೆ ಎಂಜಿನಿಯರ್‌ಗಳ ಹುದ್ದೆಯೂ ಖಾಲಿಯೇ ಉಳಿಯುತ್ತಿರುವುದು ವಿದ್ಯುತ್ ಮಾರ್ಗಗಳ ನಿರ್ವಹಣೆ, ದುರಸ್ತಿ ಕಾರ್ಯಕ್ಕೆ ಸವಾಲು ಎನಿಸುತ್ತಿದೆ.

ಹೆಸ್ಕಾಂ ಶಿರಸಿ ವೃತ್ತದ ನಿರ್ವಹಣಾ ವಿಭಾಗದಲ್ಲಿ ಹಿರಿಯ ಆಪರೇಟರ್‌, ಮೆಕ್ಯಾನಿಕ್‌, ಹಿರಿಯ ಲೈನ್‌ಮೆನ್‍ಗಳು, ಕಿರಿಯ ಲೈನ್‌ಮೆನ್‍, ಸ್ಟೇಶನ್ ಮೆಕ್ಯಾನಿಕ್‌ಗಳು ಸೇರಿದಂತೆ ವಿವಿಧ ಹುದ್ದೆ ಸೇರಿ 1,292 ಸಿಬ್ಬಂದಿಯ ಅಗತ್ಯವಿದೆ. ಅವುಗಳ ಪೈಕಿ 620 ಹುದ್ದೆಗಳು ಖಾಲಿ ಉಳಿದಿವೆ. 404 ಕಿರಿಯ ಪವರ್‌ಮೆನ್‌ಗಳ ಅಗತ್ಯವಿದ್ದರೂ ಕೇವಲ 80 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಿರಿಯ ಲೈನ್‌ಮೆನ್‍, ಸಹಾಯಕ ಲೈನ್‌ಮೆನ್‍ಗಳು ಸೇರಿದಂತೆ 560 ಹುದ್ದೆ ಮಂಜೂರಾಗಿದ್ದರೂ 174 ಹುದ್ದೆಗಳು ಇನ್ನೂ ಭರ್ತಿಯಾಗಿಲ್ಲ.

ADVERTISEMENT

‘ವಿದ್ಯುತ್ ಪರಿವರ್ತಕಗಳಲ್ಲಿ, ವಿದ್ಯುತ್ ಪೂರೈಕೆ ಮಾರ್ಗಗಳಲ್ಲಿ ದೋಷಗಳಾದರೆ ದುರಸ್ತಿಪಡಿಸಲು ಲೈನ್‌ಮೆನ್‍ಗಳೇ ಬೇಕಾಗುತ್ತಾರೆ. ಜಿಲ್ಲೆಯಲ್ಲಿ ಅಗತ್ಯದಷ್ಟು ಲೈನ್‌ಮೆನ್‍ಗಳು ಇಲ್ಲದೆ ನಿರ್ವಹಣೆಗೆ ತೊಡಕು ಉಂಟಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ನೆಟ್‌ವರ್ಕ್ ಕೊರತೆಯೂ ಇರುವುದರಿಂದ ವಿದ್ಯುತ್ ಕಂಬಗಳು ಧರೆಗುರುಳಿದರೆ, ಪರಿವರ್ತಕಗಳು ಹಾಳಾದರೆ ತಕ್ಷಣ ಮಾಹಿತಿ ಪಡೆಯುವುದೂ ಕಷ್ಟ. ಒಬ್ಬೊಬ್ಬ ಲೈನ್‌ಮೆನ್‍ಗಳಿಗೆ ಎರಡು ಮೂರು ಗ್ರಾಮಗಳ ನಿರ್ವಹಣೆ ಜವಾಬ್ದಾರಿಯೂ ಇರುವುದರಿಂದ ಸಮಸ್ಯೆ ಹೆಚ್ಚುತ್ತಿದೆ’ ಎಂದು ಹೆಸ್ಕಾಂನ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

‘ಹೆಸ್ಕಾಂ ವ್ಯಾಪ್ತಿಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ದಿನದ 24 ತಾಸು ನೀರಾವರಿ ಪಂಪ್‌ಸೆಟ್‌ಗೆ ವಿದ್ಯುತ್ ಪೂರೈಕೆ ಇದೆ. ಜೊತೆಗೆ ಲೋಡ್ ಶೆಡ್ಡಿಂಗ್ ಕೂಡ ಇಲ್ಲ. ಇದರಿಂದ ನಿರ್ವಹಣೆಗೆ ಹೆಚ್ಚು ಗಮನಹರಿಸಬೇಕಾಗುತ್ತದೆ. ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾದಾಗ ಜನರಿಂದ ಬೈಗುಳವನ್ನೂ ಎದುರಿಸಬೇಕು. ಮಳೆಗಾಲದಲ್ಲಂತೂ ಅರಣ್ಯ ಮಾರ್ಗಗಳಲ್ಲಿ ಸಾಗಿ ದುರಸ್ತಿ ನಡೆಸಬೇಕಾಗುತ್ತದೆ. ಈ ಕಾರಣಕ್ಕಾಗಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಲು ಲೈನ್‌ಮೆನ್‍ಗಳು ಹಿಂದೇಟು ಹಾಕುತ್ತಾರೆ. ನೇಮಕಗೊಂಡು ಬಂದವರು ರಾಜಕೀಯ ಪ್ರಭಾವ ಬಳಸಿ ಅನ್ಯ ಜಿಲ್ಲೆಗೆ ವರ್ಗಾವಣೆ ಪಡೆದುಕೊಳ್ಳುತ್ತಿದ್ದಾರೆ’ ಎಂದೂ ವಿವರಿಸಿದರು.

ನೇಮಕಾತಿಗೆ 50 ವರ್ಷದ ಹಳೆಯ ಮಾರ್ಗಸೂಚಿ

‘ಹೆಸ್ಕಾಂನಲ್ಲಿ ಹಾಲಿ ಮಂಜೂರಾದ ಹುದ್ದೆಗಳು 1975ರಲ್ಲಿದ್ದ ವಿದ್ಯುತ್ ಮಾರ್ಗಗಳನ್ನು ಆಧರಿಸಿ ಮಾಡಿರುವಂತದ್ದು. ಆ ಹುದ್ದೆಗಳಲ್ಲೇ ನಿರ್ವಹಣಾ ವಿಭಾಗದಲ್ಲಿ ಶೇ 49ರಷ್ಟು ಸಿಬ್ಬಂದಿ ಕೊರತೆ ಇದೆ. ಐದು ದಶಕದಲ್ಲಿ ವಿದ್ಯುತ್ ಮಾರ್ಗಗಳಲ್ಲಿ ಭಾರಿ ಬದಲಾವಣೆಗಳಾಗಿವೆ. ವಿದ್ಯುತ್ ತಂತಿ ಮಾರ್ಗಗಳು ಪರಿವರ್ತಕಗಳ ಅಳವಡಿಕೆ ಏಳೆಂಟು ಪಟ್ಟು ಹೆಚ್ಚಿದೆ. ಈಗಿನ ವ್ಯವಸ್ಥೆಗೆ ಹೋಲಿಸಿದರೆ ಜಿಲ್ಲೆಗೆ ಕನಿಷ್ಠ 2500 ರಿಂದ 3 ಸಾವಿರದಷ್ಟು ಲೈನ್‌ಮೆನ್‌ಗಳ ಅಗತ್ಯವಿದೆ’ ಎಂಬುದು ಹೆಸ್ಕಾಂ ಹಿರಿಯ ಅಧಿಕಾರಿಗಳ ಅಭಿಪ್ರಾಯ.

ಸೀಮಿತ ಸಂಖ್ಯೆಯ ಲೈನ್‌ಮೆನ್ ಸಿಬ್ಬಂದಿ ಇದ್ದರೂ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಎದುರಾಗದಂತೆ ಕಾರ್ಯನಿರ್ವಹಿಸಲು ಪ್ರಯತ್ನ ಸಾಗಿದೆ.
ರೋಶನಿ ಪೆಡ್ನೇಕರ್, ಹೆಸ್ಕಾಂ ಇಇ, ಕಾರವಾರ ವಿಭಾಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.