ಶಿರಸಿ: ‘ಬೆಳಕು ಎಂದರೆ ಜ್ಞಾನ, ಜ್ಞಾನ ಎಂದರೆ ಚೈತನ್ಯ. ಅಂತಹ ದಿವ್ಯ ಚೈತನ್ಯದಲ್ಲಿ ಪ್ರೀತಿ ಮತ್ತು ಆಸಕ್ತಿ ಉಳ್ಳವರೇ ನಿಜವಾದ ಭಾರತೀಯರು’ ಎಂದು ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಹೀಪನಳ್ಳಿಯಲ್ಲಿ ಮಂಗಳವಾರ ಆಯೋಜಿಸಿದ್ದ ಹಿಂದೂ ಸಮ್ಮೇಳನ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
‘ಭಾರತವನ್ನು ಕೇವಲ ಮಣ್ಣಿನ ಮುದ್ದೆಯಾಗಿ ನೋಡದೆ, ಚೈತನ್ಯರೂಪಿ ದೇವಿಯಾಗಿ ಕಾಣುವ ದೃಷ್ಟಿಕೋನ ನಮ್ಮದಾಗಬೇಕು. ಬಂಕಿಮಚಂದ್ರ ಚಟರ್ಜಿಯವರಿಗೆ ವಂದೇ ಮಾತರಂ ಮಂತ್ರವನ್ನು ರಚಿಸಲು ಪ್ರೇರಣೆಯಾಗಿದ್ದೂ ಇದೇ ದಿವ್ಯ ದೃಷ್ಟಿ’ ಎಂದು ಸ್ಮರಿಸಿದರು.
‘ಸಂಘವು ದೇಶದಾದ್ಯಂತ ಕಾರ್ಯಕರ್ತರಲ್ಲಿ ಏಕರೂಪದ ಸಂಸ್ಕಾರ ಮತ್ತು ಶಿಸ್ತನ್ನು ಬೆಳೆಸಿದೆ. ಇಂತಹ ತ್ಯಾಗಮಯ ಸಂಘಟನೆಯನ್ನು ಬೆಂಬಲಿಸುವುದು ಸಮಾಜದ ಕರ್ತವ್ಯವಾಗಿದೆ. ಹಿಂದುತ್ವ ಗಟ್ಟಿಯಾದಷ್ಟು ದೇಶದ ಪ್ರಜಾಪ್ರಭುತ್ವವೂ ಗಟ್ಟಿಯಾಗುತ್ತದೆ' ಎಂದು ಹೇಳಿದ ಅವರು, ‘ದಿವ್ಯತ್ವದ ಚಿಂತನೆಯಿಂದ ಮಾತ್ರ ಸಾಮಾಜಿಕ ಸಂಕುಚಿತ ಮನೋಭಾವಗಳನ್ನು ತೊಡೆದು ಹಾಕಲು ಸಾಧ್ಯ‘ ಎಂದರು.
ಸಂಘದ ಉತ್ತರ ಪ್ರಾಂತದ ಗೋಪಿ ಬಳ್ಳಾರಿ ದಿಕ್ಸೂಚಿ ಮಾತನಾಡಿ, ‘ಹಿಂದೂ ಸಮಾಜವು ಸವಾಲುಗಳನ್ನು ಜಯಿಸುವ ಅವಿನಾಶಿ ಶಕ್ತಿಯಾಗಿದೆ’ ಎಂದರು.
ಸಮ್ಮೇಳನದಲ್ಲಿ ನಿವೃತ್ತ ಸೈನಿಕರನ್ನು ಗೌರವಿಸಲಾಯಿತು. ಕೃಷಿ ಭೂಮಿಯ ಸಂರಕ್ಷಣೆ, ಪರಿಸರ ಪೂರಕ ಬದುಕು, ಕುಟುಂಬ ಮೌಲ್ಯಗಳ ರಕ್ಷಣೆ ಮತ್ತು ಸ್ವದೇಶಿ ಭಾವದ ಜಾಗೃತಿಯ ಕುರಿತಾದ ಐದು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.