ADVERTISEMENT

ಐತಿಹಾಸಿಕ ಗ್ರಾಮದಲ್ಲಿ ಸೌಕರ್ಯದ ಕೊರತೆ

ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯಲ್ಲಿ ಸ್ಥಳೀಯ ರಾಜರಿಂದ ಆಡಳಿತ ಕಂಡಿದ್ದ ಬಿಳಗಿ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2022, 19:30 IST
Last Updated 27 ಸೆಪ್ಟೆಂಬರ್ 2022, 19:30 IST
ಸಿದ್ದಾಪುರ ತಾಲ್ಲೂಕಿನ ಬಿಳಗಿಯಲ್ಲಿ ಪ್ರವಾಸೋದ್ಯಮ ಇಲಾಖೆಗೆ ಸೇರಿದ ಗೋಲ ಬಾವಿಯು ಸರಿಯಾದ ನಿರ್ವಹಣೆ ಇಲ್ಲದೆ ಪಾಳು ಬಿದ್ದಿರುವುದು
ಸಿದ್ದಾಪುರ ತಾಲ್ಲೂಕಿನ ಬಿಳಗಿಯಲ್ಲಿ ಪ್ರವಾಸೋದ್ಯಮ ಇಲಾಖೆಗೆ ಸೇರಿದ ಗೋಲ ಬಾವಿಯು ಸರಿಯಾದ ನಿರ್ವಹಣೆ ಇಲ್ಲದೆ ಪಾಳು ಬಿದ್ದಿರುವುದು   

ಸಿದ್ದಾಪುರ: ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯಲ್ಲಿ ಬಿಳಗಿ ರಾಜರಿಂದ ಆಡಳಿತಕ್ಕೆ ಒಳಪಟ್ಟು, ಗತ ವೈಭವವನ್ನು ಕಂಡ ಊರುಗಳಲ್ಲಿ ತಾಲ್ಲೂಕಿನ ಬಿಳಗಿ ಗ್ರಾಮವೂ ಒಂದು. ಪಟ್ಟಣದಿಂದ 12 ಕಿ.ಮೀ ದೂರದಲ್ಲಿರುವ ಈ ಗ್ರಾಮವು ಕುಮಟಾ– ಸಿದ್ದಾಪುರ ಮುಖ್ಯ ರಸ್ತೆಯಲ್ಲಿದೆ.

ಬಿಳಗಿ, ಹೊಸಮಂಜು, ಕುರುವಂತೆ, ಕಟ್ಟೆಕೈ, ಗೋಳಿಕೈ ಎಂಬ ಐದು ಕಂದಾಯ ಗ್ರಾಮಗಳು ಸೇರಿ ಪಂಚಾಯಿತಿ ನಿರ್ಮಾಣಗೊಂಡಿದೆ. ಎಂಟು ಗ್ರಾಮ ಪಂಚಾಯಿತಿ ಸದಸ್ಯರಲ್ಲಿ ಮಾಲಿನಿ ದೇವರಾಜ ಮಡಿವಾಳ ಅಧ್ಯಕ್ಷೆಯಾದರೆ, ಮಹೇಶ ತಿಮ್ಮಾ ನಾಯ್ಕ ಉಪಾಧ್ಯಕ್ಷರಾಗಿದ್ದಾರೆ. 2011ರ ಜನಗಣತಿಯ ಪ್ರಕಾರ 2,977 ಜನಸಂಖ್ಯೆ ಇತ್ತು.

ಗ್ರಾಮ ಪಂಚಾಯಿತಿಯ ಕೇಂದ್ರ ಸ್ಥಾನವು ಹೆಚ್ಚಿನ ಸೌಲಭ್ಯಗಳನ್ನು ಹೊಂದಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ, ಕೆನರಾ ಬ್ಯಾಂಕ್ ಮತ್ತು ಕೆ.ಡಿ.ಸಿ.ಸಿ ಬ್ಯಾಂಕ್‌ಗಳ ಶಾಖೆಗಳಿವೆ. ಆದರೆ, ಪಕ್ಕದ ಊರುಗಳು ಮೂಲಸೌಕರ್ಯದಿಂದ ವಂಚಿತವಾಗಿವೆ.

ADVERTISEMENT

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವಾರು ಧಾರ್ಮಿಕ ಮತ್ತು ಐತಿಹಾಸಿಕ ಸ್ಥಳಗಳು ಇವೆ. ರಾಜರ ಆಳ್ವಿಕೆಯಲ್ಲಿ ವೈರಿಗಳಿಂದ ತಪ್ಪಿಸಿಕೊಳ್ಳಲು ನಿರ್ಮಿಸಿದ ಗೋಲ ಬಾವಿ ಪ್ರಮುಖ ಆಕರ್ಷಣೆಗಳಲ್ಲೊಂದು. ಆದರೆ, ಸರಿಯಾದ ನಿರ್ವಹಣೆ ಇಲ್ಲದೆ ಪಾಳು ಬಿದ್ದ ಬಾವಿಯಂತಾಗಿದೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಾರೆ.

ಸಮೀಪದಲ್ಲಿ ಪುರಾತತ್ವ ಇಲಾಖೆಗೆ ಸೇರಿದ ಜೈನ ಬಸದಿ ಸುಸ್ಥಿಯಲ್ಲಿದೆ. ಮಾರಿಕಾಂಬಾ ದೇವಾಲಯ ಗ್ರಾಮದ ಪ್ರಸಿದ್ಧ ಮತ್ತು ಶಕ್ತಿ ಕೇಂದ್ರವಾಗಿದೆ. ಪ್ರತಿ ನಾಲ್ಕು ವರ್ಷಗಳಿಗೆ ಒಮ್ಮೆ ಅದ್ಧೂರಿಯಾಗಿ ದೇವಿಯ ಜಾತ್ರೆಯನ್ನು ನೆರವೇರಿಸಲಾಗುತ್ತದೆ. ಜಿಲ್ಲಾ ಮಟ್ಟದ ಜೇನು ಸಾಕಾಣಿಕಾ ತರಬೇತಿ ಕೇಂದ್ರವಾದ ಮಧುವನವೂ ಈ ಗ್ರಾಮದಲ್ಲಿರುವುದು ವಿಶೇಷ. 42ಕ್ಕೂ ಹೆಚ್ಚು ಸ್ವಸಹಾಯ, ಯುವಕ–ಯುವತಿಯರ ಸಂಘಗಳು ಈ ಭಾಗದಲ್ಲಿವೆ.

ಇಲ್ಲಿನ ರೈತರ ಪ್ರಮುಖ ಬೆಳೆ ಅಡಿಕೆ ಮತ್ತು ಭತ್ತ ಆಗಿದ್ದು, ಭಾರಿ ಮಳೆಯಿಂದ ಅಪಾರ ಪ್ರಮಾಣದ ಹಾನಿಯಾಗಿದೆ. ‘ಭಾಗ್ಯವಿಧಾತಾ ರೈತ ಉತ್ಪಾದಕ ಸಂಸ್ಥೆ’ ರೈತರಿಗೆ ಬೇಕಾಗುವ ಅಗತ್ಯತೆಗಳನ್ನು ಪೂರೈಸುತ್ತಿದ್ದು ರೈತರಿಗೆ ನೆಮ್ಮದಿ ತಂದಿದೆ. ಪ್ರದೇಶದಲ್ಲಿರುವ ಹಲವಾರು ಕೆರೆ ಮತ್ತು ತೆರೆದ ಬಾವಿಗಳು ನೀರಿನ ಸಮಸ್ಯೆಯನ್ನು ನೀಗಿಸಿವೆ.

ಗೋಳಿಕೈ, ಹೊಸಮಂಜು, ಕಟ್ಟೆಕೈ ಗ್ರಾಮಗಳಿಗೆ ಸರ್ವ ಋತು ರಸ್ತೆ ಇಲ್ಲದೆ ಮಳೆಗಾಲದಲ್ಲಿ ಸಂಚಾರಕ್ಕೆ ಹರಸಾಹಸ ಪಡಬೇಕು ಎಂದು ಗ್ರಾಮಸ್ಥರೊಬ್ಬರು ಜನಪ್ರತಿನಿಧಿಗಳ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ವಸತಿಗೆ ತೊಡಕು:

‘ಜೈನ ಬಸದಿಯು ಊರಿನ ಮಧ್ಯದಲ್ಲಿದ್ದು, ಪುರಾತತ್ವ ಇಲಾಖೆಯ ಸುಪರ್ದಿಯಲ್ಲಿದೆ. ಆದ್ದರಿಂದ 100 ಮೀಟರ್ ಸುತ್ತಲಿನ ಜಾಗದಲ್ಲಿ ಹೊಸ ಮನೆಗಳ ನಿರ್ಮಾಣ ಮತ್ತು ನವೀಕರಣ ಮಾಡುವಂತಿಲ್ಲ. ಇದರಿಂದ ಸುತ್ತಲೂ ವಾಸಿಸುತ್ತಿರುವ ಹಲವರು ವಸತಿ ಯೋಜನೆಯಡಿ ಮನೆ ಪಡೆಯಲು ಅರ್ಹರಿದ್ದರೂ ಹಂಚಿಕೆ ಸಾಧ್ಯವಾಗುತ್ತಿಲ್ಲ’ ಎಂದು ಬಿಳಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗೇಶ ಎಚ್.ಪಿ ತಿಳಿಸಿದರು.

‘ಗ್ರಂಥಾಲಯ ಕಟ್ಟಡಕ್ಕೆ ಕೆಲವು ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಿದ್ದೇವೆ. ಸಾರ್ವಜನಿಕ ಆಟದ ಮೈದಾನ ಇಲ್ಲ. ಸರ್ಕಾರ ಸ್ಥಳ ನಿಗದಿ ಮಾಡಿದಲ್ಲಿ ಗ್ರಾಮ ಪಂಚಾಯಿತಿಯಿಂದ ಮೈದಾನ ನಿರ್ಮಿಸುತ್ತೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.