ADVERTISEMENT

ಸಹಸ್ರಲಿಂಗದಲ್ಲಿ ಸಂಕ್ರಮಣ ಪುಣ್ಯ ಸ್ನಾನ

​ಪ್ರಜಾವಾಣಿ ವಾರ್ತೆ
Published 15 ಜನವರಿ 2020, 12:39 IST
Last Updated 15 ಜನವರಿ 2020, 12:39 IST
ಶಿರಸಿ ತಾಲ್ಲೂಕಿನ ಸಹಸ್ರಲಿಂಗದಲ್ಲಿ ಭಕ್ತರು ನದಿ ಸ್ನಾನ ಮಾಡಿದರು
ಶಿರಸಿ ತಾಲ್ಲೂಕಿನ ಸಹಸ್ರಲಿಂಗದಲ್ಲಿ ಭಕ್ತರು ನದಿ ಸ್ನಾನ ಮಾಡಿದರು   

ಶಿರಸಿ: ಮಕರ ಸಂಕ್ರಮಣದ ಅಂಗವಾಗಿ ಬುಧವಾರ ತಾಲ್ಲೂಕಿನ ಸಹಸ್ರಲಿಂಗದಲ್ಲಿ ಸಹಸ್ರಾರು ಭಕ್ತರು ಸಂಕ್ರಾಂತಿಯ ಪುಣ್ಯ ಸ್ನಾನ ಮಾಡಿದರು.

ಪ್ರಕೃತಿಯ ಸೌಂದರ್ಯದ ಸೆಲೆಯಾಗಿರುವ ಶಾಲ್ಮಲಾ ನದಿಯ ನಡುವೆ ಇರುವ ಶಿವಲಿಂಗಗಳಿಗೆ ಪೂಜೆ ಸಲ್ಲಿಸಿ ಪುನೀತರಾದರು. ಹುಬ್ಬಳ್ಳಿ, ಧಾರವಾಡ, ದಾವಣಗೆರೆ, ಹಾವೇರಿ, ಬಿಜಾಪುರ ಮೊದಲಾದ ಭಾಗದಿಂದ ಕುಟುಂಬ ಸಮೇತರಾಗಿ ಜನರು ಬಂದಿದ್ದರು. ಪ್ರತಿ ವರ್ಷ ಸಂಕ್ರಾಂತಿಯಂದು ಇಲ್ಲಿಗೆ ಸಹಸ್ರಾರು ಜನರು ಭೇಟಿ ನೀಡುತ್ತಾರೆ.

ತಾಲ್ಲೂಕಿನ ಬನವಾಸಿಯ ಮಾರುತಿ ದೇವಸ್ಥಾನದ ನೂತನ ಕಳಸದ ಮೆರವಣಿಗೆ, ಮಧುಕೇಶ್ವರ ದೇವಾಲಯದಲ್ಲಿ ಮಕರ ಸಂಕ್ರಾಂತಿ ಉತ್ಸವ ಸಂಭ್ರಮದಿಂದ ನೆರವೇರಿತು. ಗುಡ್ನಾಪುರ ಬಂಗಾರೇಶ್ವರ ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆ ನೆರವೇರಿತು. ಭಕ್ತರು ಗುಡ್ನಾಪುರ ಕೆರೆಯಲ್ಲಿ ಪುಣ್ಯ ಸ್ನಾನ ಮಾಡಿದರು. ಶೀಗೇಹಳ್ಳಿಯ ಚನ್ನಕೇಶವ ದೇವಾಲಯದಲ್ಲಿ ಸಂಕ್ರಮಣದ ನಿಮಿತ್ತ 10ಸಾವಿರ ತುಳಸಿ ಅರ್ಚನೆ, ಪುರುಷಸೂಕ್ತ ಹವನ, ಕುಂಕುಮಾರ್ಚನೆ, ಸತ್ಯನಾರಾಯಣ ಪೂಜೆ, ಅಷ್ಟಾಂಗ ಸೇವೆ, ಪಲ್ಲಕ್ಕಿ ಉತ್ಸವ ಶ್ರದ್ಧಾಭಕ್ತಿಯ ನಡುವೆ ನಡೆಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.