
ಹೊನ್ನಾವರ: ತಾಲ್ಲೂಕಿನ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ವಿವಿಧ ರಸ್ತೆಗಳ ಪಕ್ಕದಲ್ಲಿ ಹಾಗೂ ಉಳಿದೆಡೆಗಳಲ್ಲಿಯೂ ಅಕ್ರಮ ಮಣ್ಣು ಗಣಿಗಾರಿಕೆ ಅವ್ಯಾಹತವಾಗಿ ಮುಂದುವರಿದಿದ್ದು ಕೆಲ ಧನದಾಹಿಗಳ ಮೋಹಕ್ಕೆ ಗುಡ್ಡ ಕರಗಿ ನೆಲಸಮವಾಗುತ್ತಿದೆ. ಇದು ಹಲವರ ಆತಂಕಕ್ಕೆ ಕಾರಣವಾಗಿದೆ.
ಮುಗ್ವ ಗ್ರಾಮದ ಸುಬ್ರಹ್ಮಣ್ಯ ಸಮೀಪ ಹುಲಿಯಪ್ಪನಕಟ್ಟೆ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಹಾಡುಹಗಲೇ ಜೆಸಿಬಿಯಿಂದ ಅಕ್ರಮವಾಗಿ ಗುಡ್ಡ ಬಗೆದು ಮಣ್ಣನ್ನು ಅಧಿಕೃತವೆಂಬಂತೆ ದಿನನಿತ್ಯ ಸಾಗಿಸಲಾಗುತ್ತಿದೆ. ಮಣ್ಣು ಹೊತ್ತ ಹತ್ತಾರು ಲಾರಿಗಳು ಹೆದ್ದಾರಿಯಲ್ಲೇ ಸಾಗಿ ಬೇಕಾದವರಿಗೆ ಮಣ್ಣು ಪೂರೈಸುತ್ತಿವೆ.
’ತಾಲ್ಲೂಕಿನ ಉಳಿದೆಡೆಯೂ ಇಂಥ ಅಕ್ರಮ ಕೃತ್ಯ ಕಂಡುಬಂದಿದ್ದು ರಾಜಾರೋಷವಾಗಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಹಾಗೂ ಮಣ್ಣು ಸಾಗಣೆಯ ಇಂಥ ಕೃತ್ಯಗಳು ಆಡಳಿತ ವರ್ಗದವರ ಕಣ್ಣಿಗೆ ಬೀಳುತ್ತಿಲ್ಲವೇ?' ಎಂದು ನಗರೆಯ ಹನುಮಂತ ಗೌಡ ಪ್ರಶ್ನಿಸುತ್ತಾರೆ.
ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿನ ಜಾಗದ ಮಾಲಿಕತ್ವದ ಕುರಿತು ಹೆದ್ದಾರಿ ಇಲಾಖೆ, ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಗಳ ನಡುವೆ ಇರುವ ಗೊಂದಲ ಜಾಗ ಅತಿಕ್ರಮಣಕಾರರಿಗೆ ಹಾಗೂ ಗಣಿಗಾರಿಕೆ ನಡೆಸುವವರಿಗೆ ವರದಾನವಾಗಿ ಪರಿಣಮಿಸಿದೆ. ವಿವಿಧ ಇಲಾಖೆಗಳ ಅಧಿಕಾರಿಗಳೂ ಇದನ್ನು ಪರಿಹರಿಸುವ ಗೋಜಿಗೆ ಹೋಗದೆ ಒಬ್ಬರಿಗೊಬ್ಬರು ಬೊಟ್ಟು ಮಾಡಿ ಪರಿಸ್ಥಿತಿಯ 'ಲಾಭ' ಪಡೆಯುತ್ತಿದ್ದಾರೆ ಎನ್ನುವ ಆಪಾದನೆ ಸಾರ್ವಜನಿಕರಿಂದ ಕೇಳಿಬರುತ್ತಿದೆ.
ಮಳೆಗಾಲದಲ್ಲಿ ಹೆದ್ದಾರಿ ಪಕ್ಕದಲ್ಲಿ ಕುಸಿದ ಮಣ್ಣನ್ನೂ ಅಕ್ರಮ ಮಣ್ಣು ಸಾಗಣೆಯ ಲಾಬಿ ಬಿಟ್ಟಿಲ್ಲ.'ಕುಸಿದ ಮಣ್ಣು ತೆರವುಗೊಳಿಸಿದರೆ ಇನ್ನಷ್ಟು ಗುಡ್ಡ ಕುಸಿಯಬಹುದೆಂದು ತಜ್ಞರು ಎಚ್ಚರಿಕೆ ನೀಡಿರುವುದರಿಂದ ಗುಡ್ಡದ ಬುಡದಲ್ಲಿ ಕುಸಿದ ಮಣ್ಣನ್ನು ಅಲ್ಲಿಯೇ ಬಿಡಲಾಗಿದೆ' ಎಂದು ಹೆದ್ದಾರಿ ಇಲಾಖೆಯ ಅಧಿಕಾರಿ ನೀಡಿದ್ದ ಹೇಳಿಕೆಯೂ ಹುಸಿಯಾಗಿರುವುದು ಭಾಸ್ಕೇರಿ, ಮಸುಕಲ್ಮಕ್ಕಿ ಮೊದಲಾದೆಡೆ ಕಂಡುಬರುತ್ತದೆ.
’ಪಶ್ಚಿಮ ಘಟ್ಟಕ್ಕೆ ಸುರಂಗ ಕೊರೆಯಬೇಕಾದ ಕಾರಣಕ್ಕೆ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಪರಿಸರ ಕಾರ್ಯಕರ್ತರು ಹಾಗೂ ಸ್ಥಳೀಯರಿಂದ ಭಾರಿ ವಿರೋಧ ವ್ಯಕ್ತವಾಗಿದೆ. ಆದರೆ, ಇದೇ ಪಶ್ಚಿಮ ಘಟ್ಟ ಶ್ರೇಣಿಯ ಸಣ್ಣಪುಟ್ಟ ಗುಡ್ಡಗಳು ಅತಿಕ್ರಮಣ ಹಾಗೂ ಅಕ್ರಮ ಮಣ್ಣು ಗಣಿಗಾರಿಕೆಯಿಂದಾಗಿ ಸದ್ದಿಲ್ಲದೆ ಮರೆಯಾಗುತ್ತಿರುವುದು ವಿಪರ್ಯಾಸದ ಸಂಗತಿ. ಬಗೆದ ಗುಡ್ಡದ ಪುನರ್ ಸೃಷ್ಟಿ ಸಾಧ್ಯವಿಲ್ಲ. ನಿತ್ಯ ಕಾಣುವ ಕೊರೆದ ಗುಡ್ಡದ ದೃಶ್ಯ ಮನಸ್ಸನ್ನು ಘಾಸಿಗೊಳಿಸಿದೆ' ಎಂದು ವಿನಾಯಕ ನಾಯ್ಕ ಬೇಸರ ವ್ಯಕ್ತಪಡಿಸಿದರು.
ಅರಣ್ಯ ಅಥವಾ ಬೆಟ್ಟ ಜಾಗದಲ್ಲಿ ಮಣ್ಣುಗಣಿಗಾರಿಕೆ ನಡೆಸಲು ಅವಕಾಶ ನೀಡುವುದಿಲ್ಲ.ಹಾಡಿ ಅಥವಾ ಖಾಸಗಿ ಜಾಗ ನಮ್ಮ ವ್ಯಾಪ್ತಿಗೆ ಬರುವುದಿಲ್ಲಯೋಗೀಶ ಸಿ.ಕೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಹೊನ್ನಾವರ
ಇಲಾಖೆಯ ಅನುಮತಿ ಪಡೆದು ಮಣ್ಣು ಸಾಗಣೆ ಮಾಡುವವರು ಸರ್ಕಾರಕ್ಕೆ ರಾಜಧನ ಪಾವತಿಸಬೇಕಾಗುತ್ತದೆ. ಹೊನ್ನಾವರ ತಾಲ್ಲೂಕಿನಲ್ಲಿ ಮಣ್ಣು ಗಣಿಗಾರಿಕೆ ನಡೆಸಲು ಅಥವಾ ಮಣ್ಣು ಸಾಗಣೆ ಮಾಡಲು ಯಾರೊಬ್ಬರೂ ಅನುಮತಿ ಪಡೆದಿಲ್ಲಆಶಾ ಉಪ ನಿರ್ದೇಶಕರು ಭೂವಿಜ್ಞಾನ ಹಾಗೂ ಗಣಿ ಇಲಾಖೆ ಕಾರವಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.