
ಹೊನ್ನಾವರ: ಸ್ಫಟಿಕದಂಥ ನುಡಿ ಹಾಗೂ ಬರಹದ ಮೂಲಕ ಎನ್.ಆರ್.ನಾಯಕ ತಮ್ಮ ಒಡನಾಡಿಗಳು ಹಾಗೂ ಓದುಗರ ಅಂತರಂಗದಲ್ಲಿ ಅರಿವಿನ ಜ್ಯೋತಿ ಬೆಳಗಿದರು ಎಂದು ಕವಿವಿ ಮೌಲ್ಯಮಾಪನ ಕುಲಸಚಿವ ನಿಜಲಿಂಗಪ್ಪ ಮಟ್ಟಿಹಾಳ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಜಾನಪದ ವಿದ್ವಾಂಸ ದಂಪತಿ ಡಾ.ಎನ್.ಆರ್.ನಾಯಕ ಹಾಗೂ ಶಾಂತಿ ನಾಯಕರಿಗೆ ನುಡಿ ಆರಾಧನೆ ಹಾಗೂ ಅವರ ಬದುಕು-ಬರಹದ ಕುರಿತ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಾಂತಿ ನಾಯಕ ಹಾಗೂ ಎನ್.ಆರ್.ನಾಯಕ ತಮ್ಮ ಕ್ಷೇತ್ರಕಾರ್ಯದ ಮೂಲಕ ಜನಪದ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಶಾಂತಿ ನಾಯಕ ರಸಾಯನ ವಿಜ್ಞಾನಿಯಂತೆ ಗ್ರಾಮೀಣ ಅಡುಗೆಗಳ ಕುರಿತು ಸಂಶೋಧನೆ ನಡೆಸಿದರು. ಎನ್.ಆರ್.ನಾಯಕ ಅವರು ಆರಂಭಿಸಿದ ಸಾಹಿತ್ಯಿಕ ಕಾರ್ಯಕ್ರಮ ಮುಂದುವರಿಸಿಕೊಂಡು ಹೋಗಲು ಹಾಗೂ ಅವರ ಬರಹಗಳನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ನಿಟ್ಟಿನಲ್ಲಿ ಸರ್ಕಾರ ಎನ್.ಆರ್.ನಾಯಕ ಟ್ರಸ್ಟ್ ಸ್ಥಾಪಿಸಬೇಕು ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎನ್. ವಾಸರೆ ಮಾತನಾಡಿ, ಸಾಹಿತ್ಯ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿರುವ ಎನ್.ಆರ್.ನಾಯಕ ಅವರ ಅರ್ಹತೆಗೆ ತಕ್ಕ ಪ್ರಶಸ್ತಿ ಸಿಕ್ಕಿಲ್ಲ ಎನ್ನುವ ವಿಷಾದವಿದೆ. ಜಿಲ್ಲೆಯ ಸಾಹಿತಿಗಳ ಕುರಿತು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕಿದೆ. ಜೊಯಿಡಾದಲ್ಲಿ ಜಾನಪದ ವಿವಿಯ ಅಧ್ಯಯನ ಪೀಠ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಶಾಂತಿ ನಾಯಕ ಅವರ ಹೆಸರನ್ನು ಪ್ರಸ್ತುತ ಪೀಠಕ್ಕೆ ಇಡಬೇಕು ಎಂದು ಹೇಳಿದರು.
ಸಾಹಿತಿ ಶ್ರೀಪಾದ ಶೆಟ್ಟಿ, ಜಾನಪದ ವಿಶ್ವ ಪ್ರತಿಷ್ಠಾನದ ಕಾರ್ಯದರ್ಶಿ ಸವಿತಾ ಉದಯ ಮಾತನಾಡಿದರು. ಪ್ರಭಾರೆ ಪ್ರಾಚಾರ್ಯ ಜಿ.ಎನ್.ಭಟ್ಟ ಭಾಗವಹಿಸಿದ್ದರು. ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಪಿ.ಆರ್.ನಾಯ್ಕ ಸ್ವಾಗತಿಸಿದರು. ಉಪನ್ಯಾಸಕ ಪ್ರಶಾಂತ ಹೆಗಡೆ ನಿರೂಪಿಸಿದರು. ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಎಚ್.ಗೌಡ ವಂದಿಸಿದರು.
ಸಾಹಿತಿಗಳಾದ ಬೀರಣ್ಣ ನಾಯಕ ಮೊಗಟಾ, ನಾಗರಾಜ ಹೆಗಡೆ ಅಪಗಾಲ, ಸುಧೀಶ ನಾಯ್ಕ ಹಾಗೂ ದೀಪಾ ಹಿರೇಗುತ್ತಿ ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಿದರು.
ಹಿರಿಯ ಪತ್ರಕರ್ತ ಜಿ.ಯು.ಭಟ್ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.