ಕಾರವಾರ: ಮಳೆಗಾಲ ಜಿಲ್ಲೆಯಲ್ಲಿ ಮನಸೆಳೆಯುವ ಹಸಿರ ಸಿರಿಯ ವಾತಾವರಣ ಸೃಷ್ಟಿಸುವುದು ಒಂದೆಡೆಯಾದರೆ, ಇನ್ನೊಂದೆಡೆ ಆಕರ್ಷಣೀಯ ಜಲಪಾತಗಳನ್ನು ಸೃಷ್ಟಿಸುತ್ತಿದೆ. ಅಂತಹ ಅತ್ಯಾಕರ್ಷಕ ತಾಣಗಳ ಪಟ್ಟಿಗೆ ಅಂಕೋಲಾ ತಾಲ್ಲೂಕು ವಾಸರ ಕುದ್ರಿಗೆ ಸಮೀಪದ ‘ಹೊಸದೇವತಾ ಫಾಲ್ಸ್’ ಸೇರುತ್ತದೆ.
ಜಲಪಾತಗಳ ಜಿಲ್ಲೆ ಎಂಬುದು ಉತ್ತರ ಕನ್ನಡಕ್ಕೆ ಇರುವ ಅನ್ವರ್ಥ ನಾಮ. ಇಲ್ಲಿನ ಕೆಲವೇ ಜಲಪಾತಗಳು ಬಿರು ಬೇಸಿಗೆ ಆರಂಭಗೊಳ್ಳುವವರೆಗೆ ಹರಿದರೆ, ಮಳೆಗಾಲದಲ್ಲಿ ಲೆಕ್ಕವಿಲ್ಲದಷ್ಟು ಜಲಪಾತಗಳು ಸೃಷ್ಟಿಗೊಳ್ಳುತ್ತವೆ. ಹೀಗೆ ಸೃಷ್ಟಿಯಾದ ಜಲಪಾತಗಳಿಗೆ ನಾಲ್ಕೈದು ತಿಂಗಳು ಆಯಸ್ಸು ಮಾತ್ರ! ಆದರೆ, ಸಾವಿರಾರು ಪ್ರವಾಸಿಗರನ್ನು ಅವು ಸೆಳೆಯುತ್ತವೆ.
ಅಂಕೋಲಾ ತಾಲ್ಲೂಕಿನ ವಾಸರ ಕುದ್ರಿಗೆ ಎಂಬ ಹಳ್ಳಿಯ ಸಮೀಪದಲ್ಲಿರುವ ಮೇಲಿನಗುಳಿ ಹಳ್ಳ ಬಂಡೆಕಲ್ಲುಗಳಿಂದ ಧುಮ್ಮಿಕ್ಕುತ್ತ ಸೃಷ್ಟಿಯಾದ ಜಲಪಾತಕ್ಕೆ ಸ್ಥಳೀಯರು ‘ಹೊಸದೇವತಾ ಫಾಲ್ಸ್’ ಎಂದು ನಾಮಕರಣ ಮಾಡಿಕೊಂಡಿದ್ದಾರೆ. ಹೊರಜಗತ್ತಿಗೆ ಅಷ್ಟೇನೂ ಪರಿಚಯವಿಲ್ಲದ ಈ ಜಲಪಾತ ತೀರಾ ಇತ್ತೀಚೆಗೆ ಹೆಚ್ಚು ಪ್ರಸಿದ್ಧಿಗೆ ಬಂದಿದೆ.
ಚತುಷ್ಪಥ ರಾಷ್ಟ್ರೀಯ ಹೆದ್ದಾರಿ–66ರಲ್ಲಿ ಅಂಕೋಲಾ ತಾಲ್ಲೂಕಿನ ಕೋಡ್ಸಣಿ ಬಳಿ (ಗಂಗಾವಳಿ ಸೇತುವೆಯ ಸಮೀಪ) ಒಳ ರಸ್ತೆಯಲ್ಲಿ ಸುಮಾರು 3.5 ಕಿ.ಮೀ ದೂರ ಕ್ರಮಿಸಿ, ಅಲ್ಲಿಂದ 1 ಕಿ.ಮೀ ಕಚ್ಚಾ ರಸ್ತೆಯಲ್ಲಿ ಸಾಗಿದರೆ ಹೊಸದೇವತಾ ಫಾಲ್ಸ್ ಕಾಣಸಿಗುತ್ತದೆ. ಜಲಪಾತಕ್ಕೆ ಅತಿ ಸಮೀಪದವರೆಗೂ ಭಾರಿ ವಾಹನಗಳ ಹೊರತಾಗಿ ಉಳಿದ ವಾಹನ ಸಾಗಲು ಅವಕಾಶವಿದೆ.
ಮೈದುಂಬಿ ಹರಿಯುವ ಮೇಲಿನಗುಳಿ ಹಳ್ಳವು ಬಂಡೆಕಲ್ಲುಗಳ ಮೇಲಿಂದ ಮೂರ್ನಾಲ್ಕು ಹಂತಗಳಲ್ಲಿ ಧುಮ್ಮಿಕ್ಕುವುದನ್ನು ನೋಡಲು ಸೋಜಿಗ ಎನಿಸುತ್ತದೆ. ಹೆಚ್ಚು ಆಳವಿಲ್ಲದ ಕಾರಣ ಜಲಪಾತದ ಬುಡದವರೆಗೂ ಪ್ರವಾಸಿಗರು ಸಾಗುತ್ತಾರೆ. ಆದರೆ, ಬಂಡೆಕಲ್ಲುಗಳು ಜಾರುವ ಅಪಾಯ ಇರುವ ಕಾರಣ ಜಲಪಾತಗಳ ಸಮೀಪಕ್ಕೆ ಸಾಗಲು ಸ್ಥಳೀಯರು ನಿರಾಕರಿಸುತ್ತಾರೆ.
‘ಜಲಪಾತ ಧುಮ್ಮಿಕ್ಕುವ ಸ್ಥಳದಲ್ಲಿ ಹೊಸದೇವತೆ ದೇವಸ್ಥಾನವಿದೆ. ದೇವಾಲಯದ ಹಿಂಭಾಗದಲ್ಲಿಯೇ ಜಲಪಾತವಿರುವ ಕಾರಣಕ್ಕೆ ಇದಕ್ಕೆ ಹೊಸದೇವತಾ ಫಾಲ್ಸ್ ಎಂದು ಕರೆಯಲಾಗುತ್ತದೆ. ಪ್ರವಾಸಿ ತಾಣವಾಗಿದ್ದರೂ ಧಾರ್ಮಿಕ ಕ್ಷೇತ್ರವಾಗಿರುವ ಕಾರಣಕ್ಕೆ ಜಲಪಾತದ ಸಮೀಪ ಮದ್ಯ, ಮಾಂಸಾಹಾರ ಸೇವನೆಗೆ ಅವಕಾಶ ಇಲ್ಲ. ಇಲ್ಲಿಂದ ಅನತಿ ದೂರದಲ್ಲಿರುವ ಇನ್ನೊಂದು ಹಳ್ಳದ ಸಮೀಪ ಪ್ರವಾಸಿಗರು ಊಟ, ಉಪಹಾರ ಸೇವಿಸುತ್ತಾರೆ’ ಎನ್ನುತ್ತಾರೆ ಸ್ಥಳೀಯ ಸುದರ್ಶನ ನಾಯಕ.
ರಾಷ್ಟ್ರೀಯ ಹೆದ್ದಾರಿ–66 ರಿಂದ ನಾಲ್ಕು ಕಿ.ಮೀ ಕ್ರಮಿಸಬೇಕು ಮೂರ್ನಾಲ್ಕು ಹಂತಗಳಲ್ಲಿ ಧುಮ್ಮಿಕ್ಕುವ ಮೇಲಿನಗುಳಿ ಹಳ್ಳ ಹೆಚ್ಚು ಪ್ರಸಿದ್ಧಿಗೆ ಬರುತ್ತಿರುವ ಜಲಪಾತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.