ADVERTISEMENT

ಕಾರವಾರ: ಎಸ್ಸೆಸ್ಸೆಲ್ಸಿ ಫಲಿತಾಂಶ ಕುಸಿಯದಂತೆ ನೋಡಿಕೊಳ್ಳಲು ಕ್ರಿಯಾ ಯೋಜನೆ

ಸದಾಶಿವ ಎಂ.ಎಸ್‌.
Published 12 ಫೆಬ್ರುವರಿ 2021, 19:30 IST
Last Updated 12 ಫೆಬ್ರುವರಿ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಾರವಾರ: ಈ ಬಾರಿ ಕೊರೊನಾದಿಂದಾಗಿ ಶಾಲೆಗಳಲ್ಲಿ ತರಗತಿಗಳು ನಿಗದಿತ ಅವಧಿಯಲ್ಲಿ ಪುನಃ ಆರಂಭವಾಗಿಲ್ಲ. ಆದರೆ, ಇದರಿಂದ ಎಸ್ಸೆಸ್ಸೆಲ್ಸಿ ಫಲಿತಾಂಶ ಕುಸಿಯದಂತೆ ನೋಡಿಕೊಳ್ಳಲು ಕಾರವಾರ ಶೈಕ್ಷಣಿಕ ಜಿಲ್ಲೆಯ ಅಧಿಕಾರಿಗಳು 100 ದಿನಗಳ ಕ್ರಿಯಾಯೋಜನೆ ಸಿದ್ಧಪಡಿಸಿದ್ದಾರೆ.

ಈ ಬಾರಿ ಶೈಕ್ಷಣಿಕ ವರ್ಷದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಬೋಧಿಸಲು ಕೇವಲ 100 ದಿನಗಳು ಸಿಗುತ್ತಿವೆ. ಅಷ್ಟೂ ದಿನಗಳಲ್ಲಿ ವಿದ್ಯಾರ್ಥಿಗಳ ಕಲಿಕಾ ಮಟ್ಟ, ಪರೀಕ್ಷೆಯಲ್ಲಿ ಬರೆಯುವ ಸಾಮರ್ಥ್ಯ ಹೆಚ್ಚಿಸಲು ಏನೇನು ಮಾಡಬೇಕು ಎಂಬ ಬಗ್ಗೆ ‘ಮೈಕ್ರೊ ಪ್ಲಾನ್’ ಸಿದ್ಧಪಡಿಸಲಾಗಿದೆ. ಜಿಲ್ಲಾಮಟ್ಟದಲ್ಲಿ ಅದನ್ನು ಬಿಡುಗಡೆ ಮಾಡಿದ ಬಳಿಕ ಐದೂ ತಾಲ್ಲೂಕುಗಳ ಎಲ್ಲ ಶಾಲೆಗಳಿಗೆ ನೀಡಲಾಗುತ್ತದೆ.

‘ಒಂದು ಅಂದಾಜಿನ ಪ್ರಕಾರ ಮೇ ಎರಡನೇ ವಾರದಲ್ಲಿ ರಾಜ್ಯ ಮಟ್ಟದಲ್ಲಿ ಪೂರ್ವ ಸಿದ್ಧತಾ ಪರೀಕ್ಷೆ ನಡೆಯುವ ಸಾಧ್ಯತೆಯಿದೆ. ಅದನ್ನು ಗಮನದಲ್ಲಿಟ್ಟುಕೊಂಡು ನೋಡಿದಾಗ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪಠ್ಯಕ್ರಮದ ಬೋಧನೆಯು ಏ.15ರ ಮೊದಲು ಪೂರ್ಣಗೊಳ್ಳಬೇಕು. ಬಳಿಕ ಪುನರಾವರ್ತನೆ ಮಾಡಿಸಲಾಗುವುದು. ಅದಕ್ಕೂ ಮೊದಲು ಜಿಲ್ಲಾ ಮಟ್ಟದಲ್ಲಿ ಪೂರ್ವ ಸಿದ್ಧತಾ ಪರೀಕ್ಷೆ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಇದಕ್ಕೆ ಪೂರಕವಾದ ಅಂಶಗಳನ್ನು 100 ದಿನಗಳ ಕ್ರಿಯಾಯೋಜನೆಯಲ್ಲಿ ಸೇರಿಸಲಾಗಿದೆ’ ಎಂದು ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಹರೀಶ ಗಾಂವ್ಕರ್ ‘ಪ್ರಜಾವಾಣಿ’ಗೆ ವಿವರಿಸಿದರು.

ADVERTISEMENT

‘ಎಸ್ಸೆಸ್ಸೆಲ್ಸಿಯ ಪ್ರತಿ ವಿದ್ಯಾರ್ಥಿಯನ್ನು ದಿನವೂ ಸಂಪರ್ಕಿಸಿ ಶೈಕ್ಷಣಿಕ ಪ್ರಗತಿ ನೋಡಿಕೊಳ್ಳುವ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ತರಗತಿಗಳಲ್ಲಿ ಯಾವಾಗ ಯಾವ ಪರೀಕ್ಷೆ ಆಯೋಜಿಸಬೇಕು ಎಂಬುದನ್ನೂ ಉಲ್ಲೇಖಿಸಲಾಗಿದೆ. ಕಳೆದ ಬಾರಿಯ ಪರೀಕ್ಷಾ ಫಲಿತಾಂಶವನ್ನೂಶಾಲಾವಾರು ಪರಾಮರ್ಶಿಸಲಾಗಿದೆ. ಯಾವ ವಿಷಯದಲ್ಲಿ ಹೆಚ್ಚು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ ಎಂದೂ ಗುರುತಿಸಲಾಗಿದೆ. ಈ ವಿಶ್ಲೇಷಣೆಗಳನ್ನೂ ಎಲ್ಲ ಶಾಲೆಗಳಿಗೆ ನೀಡಲಾಗಿದೆ’ ಎಂದು ತಿಳಿಸಿದರು.

‘ಈ ಬಾರಿ ಕಡಿತ ಮಾಡಲಾಗಿರುವ ಶೇ 30ರಷ್ಟು ಪಠ್ಯಕ್ರಮವಕ್ಕೂ ವಿಷಯವಾರು ಕ್ರಿಯಾಯೋಜನೆ ರೂಪಿಸಲಾಗಿದೆ. ಪ್ರಶ್ನೆಪತ್ರಿಕೆ ಹೇಗಿರಲಿದೆ ಎಂಬ ಬಗ್ಗೆ ಮಕ್ಕಳು ಮತ್ತು ಪಾಲಕರಿಗೆ ಗೊಂದಲವಿದೆ. ಈ ಹಿನ್ನೆಲೆಯಲ್ಲಿ ಪ್ರಶ್ನೆ ಪತ್ರಿಕೆಯ ನೀಲನಕ್ಷೆ ಸಿದ್ಧವಾಗಿದೆ’ ಎಂದೂ ಮಾಹಿತಿ ನೀಡಿದರು.

ಜಿಲ್ಲಾಮಟ್ಟದಲ್ಲಿ ಫೋನ್ ಇನ್:‘ಪ್ರಸ್ತುತ ತರಗತಿ ಅವಧಿಯ ಬಳಿಕ ನಿಗದಿತ ದಿನಗಳಂದು ತಾಲ್ಲೂಕು ಮಟ್ಟದಲ್ಲಿ ಫೋನ್ ಇನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳು ಮತ್ತು ಪಾಲಕರು ತಮ್ಮ ಗೊಂದಲಗಳನ್ನು ಅದರ ಮೂಲಕ ಬಗೆ ಹರಿಸಿಕೊಳ್ಳುತ್ತಿದ್ದಾರೆ. ಇದೇರೀತಿಯಲ್ಲಿ ತಿಂಗಳಿಗೆ ಎರಡು ಬಾರಿ ಜಿಲ್ಲಾ ಮಟ್ಟದಲ್ಲೂ ಆಯೋಜಿಸಲಾಗುವುದು’ ಎಂದು ಹರೀಶ ಗಾಂವ್ಕರ್ ತಿಳಿಸಿದ್ದಾರೆ.

‘ಕೋವಿಡ್ ಸಂದರ್ಭದಲ್ಲೂ ಎಸ್ಸೆಸ್ಸೆಲ್ಸಿ ಪರೀಕ್ಷೆ ಹಮ್ಮಿಕೊಂಡಾಗ ನಮ್ಮ ಜಿಲ್ಲೆಯಲ್ಲಿ ಕೇವಲ 12 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಈಗ ತರಗತಿಗಳಿಗೆ ಶೇ 90ಕ್ಕಿಂತ ಹೆಚ್ಚು ಹಾಜರಾತಿಯಿದ್ದು, ರಾಜ್ಯದಲ್ಲಿ ಅಗ್ರ ಐದು ಜಿಲ್ಲೆಗಳಲ್ಲಿ ಒಂದಾಗಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳ ಮೂರು ಗುಂಪು:‘ಕ್ರಿಯಾಯೋಜನೆಯಲ್ಲಿ ವಿದ್ಯಾರ್ಥಿಗಳನ್ನು ಮೂರು ಗುಂಪುಗಳನ್ನಾಗಿ ಮಾಡಲಾಗಿದೆ. ಯಾರ ಸಹಾಯವೂ ಇಲ್ಲದೇ ಉತ್ತೀರ್ಣರಾಗುವವರು, ಸ್ವಲ್ಪ ಸಹಾಯ ಬೇಕಾಗುವವರು ಹಾಗೂ ಹೆಚ್ಚು ಕಲಿಕಾ ಸಹಾಯ ಬೇಕಾಗುವವರನ್ನು ಪ್ರತ್ಯೇಕವಾಗಿ ಗುರುತಿಸಲಾಗಿದೆ. ಅವರಲ್ಲಿ ಮೂರನೇ ಗುಂಪಿನ ವಿದ್ಯಾರ್ಥಿಗಳ ಬಗ್ಗೆ ಹೆಚ್ಚು ಗಮನ ಕೇಂದ್ರೀಕರಿಸಿ ಬೋಧಿಸಲಾಗುತ್ತದೆ’ ಎನ್ನುತ್ತಾರೆ ಎಂದು ಹರೀಶ ಗಾಂವ್ಕರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.