ADVERTISEMENT

ಐಸೊಲೇಶನ್ ಸೆಂಟರ್ ಗುರುತಿಸಿ- ಅಧಿಕಾರಿಗಳ ಸಭೆಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2021, 8:48 IST
Last Updated 31 ಡಿಸೆಂಬರ್ 2021, 8:48 IST
ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಶಿರಸಿಯ ಮಿನಿ ವಿಧಾನಸೌಧದಲ್ಲಿ ಗುರುವಾರ ಅಧಿಕಾರಿಗಳ ಸಭೆ ನಡೆಸಿದರು
ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಶಿರಸಿಯ ಮಿನಿ ವಿಧಾನಸೌಧದಲ್ಲಿ ಗುರುವಾರ ಅಧಿಕಾರಿಗಳ ಸಭೆ ನಡೆಸಿದರು   

ಶಿರಸಿ: ಕೋವಿಡ್ ಸೋಂಕಿತರನ್ನು ಪ್ರತ್ಯೇಕವಾಗಿಡಲು ಗ್ರಾಮೀಣ ಭಾಗದಲ್ಲಿ ಐಸೊಲೇಷನ್ ಸೆಂಟರ್‌ಗೆ ಜಾಗ ಗುರುತಿಸಿಟ್ಟುಕೊಳ್ಳಿ ಎಂದು ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ಮಿನಿ ವಿಧಾನಸೌಧದಲ್ಲಿ ಗುರುವಾರ ಸಂಭಾವ್ಯ ಕೋವಿಡ್ ಮೂರನೆ ಅಲೆ ತಡೆ ಸಂಬಂಧ ವಿವಿಧ ಇಲಾಖೆಗಳ ಪೂರ್ವಭಾವಿ ಸಭೆ ನಡೆಸಿದ ಅವರು, ‘ಹಳ್ಳಿಗಳಲ್ಲಿ ಎರಡನೆ ಅಲೆ ವೇಳೆಪ್ರತ್ಯೇಕ ವಾಸ ಕೇಂದ್ರ ಸ್ಥಾಪನೆಗೆ ಗುರುತಿಸಲಾಗಿದ್ದ ಸ್ಥಳಗಳಲ್ಲಿ ಮರು ಪರಿಶೀಲನೆ ನಡೆಸಿ. ನೀರು, ವಿದ್ಯುತ್ ಸೌಕರ್ಯ ಇಲ್ಲದ ಕಡೆಯಲ್ಲಿ ಸಂಪರ್ಕ ಒದಗಿಸಿ’ ಎಂದರು.

‘ಆಸ್ಪತ್ರೆಗಳು ಸುಸಜ್ಜಿತವಾಗಿರಬೇಕು. ಔಷಧಗಳ ಕೊರತೆ ಎದುರಾಗದಂತೆ ಎಚ್ಚರವಹಿಸಿ. ಕೋವಿಡ್ ಲಸಿಕೆ ಪಡೆಯುವಂತೆ ಜಾಗೃತಿ ಮೂಡಿಸಿ.‌ ಶೇ.7ರಷ್ಟು ಜನರಿಗೆ ಎರಡನೇ ಡೋಸ್ ಪಡೆದುಕೊಳ್ಳದವರಿಗೆ ತಿಳಿಹೇಳಿ’ ಎಂದರು.

ADVERTISEMENT

‘ಸರ್ಕಾರ ನಿಗದಿಪಡಿಸಿದ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸುವಂತೆ ನೋಡಿಕೊಳ್ಳಿ. ಶಾಲಾ, ಕಾಲೇಜು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯವಾಗಿ ಧರಿಸುವಂತೆ ಕ್ರಮವಾಗಲಿ. ನಿಯಮ ಪಾಲಿಸದವರ ಮೇಲೆ ಶಿಸ್ತು ಕ್ರಮ ಜರುಗಿಸಿ’ ಎಂದು ಸೂಚಿಸಿದರು.

‘ಹಳ್ಳಿ ಭಾಗದಲ್ಲಿ ನಕಲಿ ಗೊಬ್ಬರ ಮಾರಾಟ ಹೆಚ್ಚುವ ಆತಂಕವಿದೆ. ಈ ಬಗ್ಗೆ ಕೃಷಿ ಇಲಾಖೆ ಮತ್ತು ಪೊಲೀಸ್ ಇಲಾಖೆ ನಿಗಾ ಇಡಬೇಕು. ವಾರದೊಳಗೆ ಕುಮಟಾ-ಶಿರಸಿ ರಸ್ತೆಯಲ್ಲಿರುವ ಹೊಂಡಗಳನ್ನು ಮುಚ್ಚಬೇಕು. ಹೆದ್ದಾರಿ ಕಾಮಗಾರಿಗೆ ವೇಗ ನೀಡಬೇಕು. ಮಾರಿಕಾಂಬಾಜಾತ್ರೆ ಒಳಗೆ ನಗರ ವ್ಯಾಪ್ತಿಯಲ್ಲಿ ರಸ್ತೆ, ಚರಂಡಿ ನಿರ್ಮಾಣ ಪೂರ್ಣಗೊಂಡಿರಬೇಕು’ ಎಂದು ಹೇಳಿದರು.

ನರೇಗಾ ಯೋಜನೆ ಅಡಿ ಅಗತ್ಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ ಪಿಡಿಒಗಳಿಗೆ ಸೂಚಿಸಿ. ತಾಲ್ಲೂಕಿನಲ್ಲಿ ಹಲವು ಪಿಡಿಒಗಳು ಯೋಜನೆ ಅಡಿ ಕೈಗೊಳ್ಳಬಹುದಾದ ಕೆಲಸಗಳನ್ನು ಮಾಡಿಸಲು ಹಿಂದೇಟು ಹಾಕುತ್ತಿರುವ ದೂರುಗಳಿವೆ. ಅಂತಹವರ ವಿರುದ್ಧ ಶಿಸ್ತುಕ್ರಮ ಜರುಗಿಸಿ ಎಂದು ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗೆ ಸೂಚಿಸಿದರು.

ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಉಪವಿಭಾಗಾಧಿಕಾರಿ ಆಕೃತಿ ಬನ್ಸಾಲ್, ತಹಶೀಲ್ದಾರ್ ಎಂ.ಆರ್.ಕುಲಕರ್ಣಿ ಇದ್ದರು.

ಅಧಿಕಾರಿಗೆಕಾಗೇರಿ ತರಾಟೆ:ಸಹಕಾರ ಸಂಘಗಳನ್ನು ಪೀಡಿಸುತ್ತಿರುವ ಆರೋಪ ಹೊತ್ತಿರುವ ಶಿರಸಿ ಉಪವಿಭಾಗದ ಸಹಕಾರ ಸಹಾಯಕ ನಿಬಂಧಕ ಲಿಂಗರಾಜ್ ಅವರನ್ನು ಅಧಿಕಾರಿಗಳ ಸಭೆಯಲ್ಲಿ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತರಾಟೆಗೆ ಪಡೆದರು.

‘ಸರ್ಕಾರಿ ಸೇವೆಯ ಆರಂಭದಲ್ಲೇ ದುರ್ವರ್ತನೆ, ದರ್ಪ ತೋರುತ್ತಿದ್ದೀರಿ. ಇದು ಕೆಲಸ ಮಾಡುವ ಇಲಾಖೆಯ ಗೌರವಕ್ಕೂ ಚ್ಯುತಿ ತರುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಅಧಿಕಾರಿ ತುಂಬಿದ ಸಭೆಯಲ್ಲೇ ಕ್ಷಮೆ ಕೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.