
ಗೋಕರ್ಣ: ಸಮೀಪದ ನಾಡುಮಾಸ್ಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯ ಕಡಲ ತೀರದಲ್ಲಿ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿ ರೆಸಾರ್ಟ್, ವಸತಿ ಗೃಹ ನಿರ್ಮಿಸಿದ್ದರೂ ಅಧಿಕಾರಿಗಳು ಕ್ರಮವಹಿಸುತ್ತಿಲ್ಲ ಎಂಬ ಆರೋಪ ಸ್ಥಳೀಯರಿಂದ ವ್ಯಕ್ತವಾಗಿದೆ.
ದುಬ್ಬನಸಸಿ, ಗಂಗೆಕೊಳ್ಳ ಮತ್ತು ಗಂಗಾವಳಿ ಕಡಲತೀರದಲ್ಲಿ ಸುಮಾರು 2 ಕಿ.ಮೀ ವ್ಯಾಪ್ತಿಯಲ್ಲಿ ಕಡಲತೀರದ ಹರಿದುಬಂದ ಜಾಗದಲ್ಲಿ ಹಲವು ರೆಸಾರ್ಟ್, ವಸತಿಗೃಹ, ಹೋಟೆಲ್‍ಗಳು ನಿರ್ಮಾಣವಾಗಿರುವ ಬಗ್ಗೆ ಗ್ರಾಮ ಪಂಚಾಯಿತಿಗೆ ಸಾರ್ವಜನಿಕರಿಂದ ಅನೇಕ ದೂರುಗಳು ಬಂದಿದ್ದವು. ಅಧಿಕಾರಿಗಳ ಗಮನಸೆಳೆದರೂ ಕ್ರಮ ಆಗಲಿಲ್ಲ. ಒತ್ತುವರಿ ತೆರವಿಗೆ ಗ್ರಾಮಸಭೆಯಲ್ಲಿ ಠರಾವು ಮಂಡಿಸಿದ್ದರೂ ತೆರವು ಪ್ರಕ್ರಿಯೆ ಕೈಗೊಂಡಿಲ್ಲ’ ಎಂಬುದು ನಾಡುಮಾಸ್ಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಈಶ್ವರ ಗೌಡ ಅವರ ಆರೋಪ.
‘ಕಳೆದ ಜನವರಿಯಲ್ಲಿ ಕುಮಟಾ ಉಪ ವಿಭಾಗಾಧಿಕಾರಿ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಕಡಲತೀರದಲ್ಲಿ ಮಣ್ಣು ಹಾಕಿ ಒತ್ತುವರಿ ಮಾಡಿದ್ದನ್ನು ಪತ್ತೆ ಹಚ್ಚಿದ್ದರು. ಸಾಲು ಸಾಲಾಗಿ ಅನಧಿಕೃತ ಕಟ್ಟಡಗಳು ನಿರ್ಮಾಣವಾಗುತ್ತಿರುವುದನ್ನು ಕಂಡು ಅಧಿಕಾರಿಗಳೇ ಅಚ್ಚರಿಗೊಂಡಿದ್ದರು. ಸರ್ವೆ ನಡೆಸಿ, ಸರ್ಕಾರಿ ಜಾಗದಲ್ಲಿ ನಿರ್ಮಾಣವಾದ ಕಟ್ಟಡಗಳನ್ನೂ ತೆರವುಗೊಳಿಸುವ ಸೂಚನೆಯನ್ನೂ ನೀಡಿದ್ದರು. ಆದರೆ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಪ್ರವಾಸೋದ್ಯಮದ ಅಭಿವೃದ್ಧಿ ಹೆಸರಿನಲ್ಲಿ ಹರಿದುಬಂದ ಜಾಗ ಒತ್ತುವರಿ ಮಾಡಿ ಕೆಲವು ರೆಸಾರ್ಟ್, ಹೋಟೆಲ್‍ಗಳನ್ನು ನಡೆಸಲಾಗುತ್ತಿದೆ. ಇಂತಹ ಅನಧಿಕೃತ ಕಟ್ಟಡಗಳಲ್ಲಿ ಜೂಜಾಟ, ಕೋಳಿಅಂಕ, ವೇಶ್ಯಾವಾಟಿಕೆ, ಮಾದಕ ದೃವ್ಯಗಳ ಸೇವನೆ ನಡೆಯುತ್ತಿರುವ ಶಂಕೆ ಇದೆ’ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದರು.
‘ನಾಡುಮಾಸ್ಕೇರಿ ಭಾಗದಲ್ಲಿ ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್) ವ್ಯಾಪ್ತಿಯಲ್ಲಿ 47 ಅನಧಿಕೃತ ಕಟ್ಟಡ ಕಟ್ಟಲಾಗಿದೆ. ಅಂತಹ ಕಟ್ಟಡದ ಮಾಲೀಕರಿಗೆ ತೆರವುಗೊಳಿಸಲು ನೀಡಿದ್ದ ನೋಟಿಸ್ ವಿರುದ್ಧ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ದಾಖಲಾಗಿತ್ತು. ಅರ್ಜಿ ವಿಲೇವಾರಿಯಾಗಿದ್ದು, ಕಾನೂನಿನ ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳಿ ಎಂದು ಕೋರ್ಟ್ ಸೂಚಿಸಿದೆ. ಹೀಗಾಗಿ, ಒತ್ತುವರಿಗೆ ತೆರವಿಗೆ ನೋಟಿಸ್ ನೀಡಲಾಗಿದೆ’ ಎಂದು ಸಿಆರ್‌ಝಡ್ ವಿಭಾಗದ ಡಿಸಿಎಫ್ ಪ್ರವೀಣಕುಮಾರ ಬಸ್ರೂರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ನಾಡುಮಾಸ್ಕೇರಿ ಗ್ರಾಮ ಪಂಚಾಯಿತಿ ಕಡಲತೀರದಲ್ಲಿ ನಡೆದ ಅತಿಕ್ರಮಣಕ್ಕೆ ಸಂಬಂಧ ಪಟ್ಟಂತೆ ಕ್ರಮ ಕೈಗೊಳ್ಳಲು ಹೈಕೋರ್ಟ್ ಸೂಚಿಸಿದ್ದು ಕೋರ್ಟ್ ಆದೇಶ ಪಾಲಿಸುತ್ತೇವೆಪ್ರವೀಣಕುಮಾರ ಬಸ್ರೂರು ಸಿಆರ್‌ಝಡ್ ಡಿಸಿಎಫ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.