ಕಾರವಾರ: ವಿದೇಶಕ್ಕೆ ಮೊಲಾಸಿಸ್ (ಕಾಕಂಬಿ) ರಫ್ತು ಮಾಡುವುದನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಕಳೆದ ವರ್ಷ ರಫ್ತು ಸುಂಕವನ್ನು ಶೇ 15 ರಿಂದ 50ಕ್ಕೆ ಏರಿಕೆ ಮಾಡಿದ್ದರ ಪರಿಣಾಮ 2024–25ನೇ ಸಾಲಿನಲ್ಲಿ ಇಲ್ಲಿನ ವಾಣಿಜ್ಯ ಬಂದರಿನಿಂದ ರಫ್ತು ಚಟುವಟಿಕೆ ಸ್ಥಗಿತಗೊಂಡಿದೆ.
2023–24ನೇ ಸಾಲಿನಲ್ಲಿ ಆಮದು, ರಫ್ತು ಚಟುವಟಿಕೆ ಮೂಲಕ ₹18 ಕೋಟಿ ಆದಾಯವನ್ನು ಬಂದರು ಜಲಸಾರಿಗೆ ಮಂಡಳಿ ಗಳಿಸಿತ್ತು. 2024–25ನೇ ಸಾಲಿಗೆ ಈ ಪ್ರಮಾಣವು ₹13.02 ಕೋಟಿಗೆ ಇಳಿಕೆಯಾಗಿದೆ. ಕಳೆದ ವರ್ಷ 122 ಹಡಗುಗಳು ಬಂದರಿಗೆ ಬಂದರೆ, ಈ ಬಾರಿ 97 ಹಡಗುಗಳು ಬಂದಿವೆ.
ಎಥೆನಾಲ್ ಉತ್ಪಾದನೆ ಹೆಚ್ಚಿಸಲು ಮೊಲಾಸಿಸ್‍ನ್ನು ರಫ್ತು ಮಾಡುವ ಬದಲು ಸ್ಥಳೀಯವಾಗಿ ಬಳಕೆ ಮಾಡುವುದನ್ನು ಉತ್ತೇಜಿಸಲು 2024ರ ಜನವರಿಯಲ್ಲಿ ರಫ್ತು ಸುಂಕ ಪ್ರಮಾಣ ಏರಿಕೆ ಮಾಡಲಾಗಿತ್ತು. ಸುಂಕದ ಏರಿಕೆ ನಡುವೆಯೂ ರಫ್ತುದಾರರು ಕಾರವಾರ ವಾಣಿಜ್ಯ ಬಂದರಿನಿಂದ 2023–24ನೇ ಸಾಲಿನಲ್ಲಿ 1.97 ಲಕ್ಷ ಟನ್ ಮೊಲಾಸಿಸ್‍ನ್ನು ಯುರೋಪ್ ರಾಷ್ಟ್ರಗಳು, ಮಲೇಷ್ಯಾಕ್ಕೆ ರಫ್ತು ಮಾಡಿದ್ದರು. 2022–23ರಲ್ಲಿ 5.97 ಲಕ್ಷ ಟನ್ ಮೊಲಾಸಿಸ್ ರಫ್ತುಗೊಂಡಿತ್ತು. ಆದರೆ, ಪ್ರಸಕ್ತ ವರ್ಷದಲ್ಲಿ ಮೊಲಾಸಿಸ್ ರಫ್ತು ಸಂಪೂರ್ಣ ಸ್ಥಗಿತಗೊಂಡಿದೆ.
‘ಕಾರವಾರ ವಾಣಿಜ್ಯ ಬಂದರು ಮೊಲಾಸಿಸ್ ರಫ್ತು ಚಟುವಟಿಕೆಗೆ ಹೆಸರಾಗಿತ್ತು. ಕಳೆದ ವರ್ಷ ಗಣನೀಯ ಪ್ರಮಾಣದಲ್ಲಿ ತಗ್ಗಿದ್ದ ರಫ್ತು ಪ್ರಮಾಣ, ಈ ಬಾರಿ ಸಂಪೂರ್ಣ ಸ್ಥಗಿತಗೊಂಡಿದೆ. ಸುಂಕ ಏರಿಕೆಯ ಕಾರಣದಿಂದ ವಿದೇಶಗಳಿಂದ ಬೇಡಿಕೆಯೂ ತಗ್ಗಿತ್ತು’ ಎಂದು ರಫ್ತುದಾರ ಕಂಪನಿಯೊಂದರ ಸಿಬ್ಬಂದಿ ತಿಳಿಸಿದರು.
‘ಆಮದು ಪ್ರಮಾಣವೂ ಗಣನೀಯವಾಗಿ ಇಳಿಕೆಯಾಗಿದೆ. ಕಳೆದ ಸಾಲಿನಲ್ಲಿ ಆಮದು, ರಫ್ತು ಸೇರಿ 9,09,889 ಟನ್ ವಹಿವಾಟು ನಡೆದಿತ್ತು. ಈ ಬಾರಿ 5,50,498 ಟನ್ ವಹಿವಾಟು ಮಾತ್ರ ನಡೆದಿದೆ. 4,954 ಟನ್ ಇಂಧನ ಎಣ್ಣೆ (ಫ್ಯೂಯಲ್ ಆಯಿಲ್) ರಫ್ತುಗೊಂಡಿದೆ. 3,02,742 ಟನ್ ಬಿಟುಮಿನ್ (ಡಾಂಬರು), 1,17,760 ಟನ್ ಕೈಗಾರಿಕೆ ಉಪ್ಪು, 44,000 ಟನ್ ರಾಕ್ ಫಾಸ್ಫೇಟ್ ಮತ್ತು 70,078 ಟನ್ ಡೀಸೆಲ್ ಆಮದಾಗಿದೆ’ ಎಂದು ಬಂದರು ಜಲಸಾರಿಗೆ ಮಂಡಳಿಯ ಅಧೀಕ್ಷಕ ಸುರೇಶ ಶೆಟ್ಟಿ ಮಾಹಿತಿ ನೀಡಿದರು.
ಮೊಲಾಸಿಸ್ ರಫ್ತು ಸುಂಕ ಹೆಚ್ಚಳದಿಂದ ರಫ್ತು ಚಟುವಟಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದರಿಂದ ಬಂದರು ವಹಿವಾಟು ಮೂಲಕ ಸಂಗ್ರಹವಾಗುವ ಆದಾಯ ಕಡಿಮೆಯಾಗಿದೆಕ್ಯಾಪ್ಟನ್ ಸಿ.ಸ್ವಾಮಿ ಬಂದರು ಜಲಸಾರಿಗೆ ಮಂಡಳಿ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.