ADVERTISEMENT

ಹುಬ್ಬಳ್ಳಿ– ಅಂಕೋಲಾ ರೈಲ್ವೆ ಯೋಜನೆ ಜಾರಿಗೆ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2022, 17:04 IST
Last Updated 17 ಸೆಪ್ಟೆಂಬರ್ 2022, 17:04 IST

ಕಾರವಾರ: ‘ಹುಬ್ಬಳ್ಳಿ– ಅಂಕೋಲಾ ರೈಲ್ವೆ ಯೋಜನೆಯು ಪರಿಸರಕ್ಕೆ ಮಾರಕವಾಗಿದೆ. ಆದರೂ ಪ್ರಸ್ತುತ ಸರ್ಕಾರ ಮತ್ತು ದಕ್ಷಿಣ ರೈಲ್ವೇಯ ಅಧಿಕಾರಿಗಳು, ಕೆಲವೇ ಕೆಲವು ವ್ಯಕ್ತಿಗಳು ಹಾಗೂ ಕೈಗಾರಿಕೆಗಳ ಲಾಭಕ್ಕಾಗಿ ಈ ಯೋಜನೆಯನ್ನು ಬಲವಂತವಾಗಿ ಜಾರಿ ಮಾಡಲು ಮುಂದಾದಂತೆ ಗೋಚರಿಸುತ್ತಿದೆ’ ಎಂದು ಪಶ್ಚಿಮ ಘಟ್ಟ ಜಾಗೃತಿ ವೇದಿಕೆ ಆರೋಪಿಸಿದೆ.

ಉದ್ದೇಶಿತ ರೈಲು ಮಾರ್ಗದ ಕುರಿತು ಉತ್ತರ ಕನ್ನಡ ಜಿಲ್ಲಾಧಿಕಾರಿ, ಅರಣ್ಯ ಮತ್ತುವನ್ಯಜೀವಿ ವಿಭಾಗಗಳ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿಗಳು, ಕೆನರಾ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ವೇದಿಕೆಯ ಪ್ರಮುಖ ಸಹದೇವ ಎಸ್.ಎಚ್ ಅವರು ಶನಿವಾರ ಪತ್ರ ಬರೆದಿದ್ದಾರೆ.

‘ರಾಷ್ಟ್ರೀಯ ಅರಣ್ಯ ನೀತಿಯ ಪ್ರಕಾರ ಶೇ 33ರಷ್ಟು ಅರಣ್ಯ ಪ್ರದೇಶ ಇರಬೇಕು. ಆದರೆ, ಈಗ ಶೇ 20ಕ್ಕಿಂತ ಕಡಿಮೆಯಾಗಿದೆ. ಇಂಥ ಪರಿಸ್ಥಿತಿಯಿರುವಾಗ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಮತ್ತಷ್ಟು ಮರಗಳ ಹನನವು ಸಮಾಜದ ಹಿತದೃಷ್ಟಿಗೆ ವಿರುದ್ಧವಾಗಿದೆ’ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ADVERTISEMENT

‘ಈ ರೈಲ್ವೆ ಯೋಜನೆಗೆ 1,500 ಎಕರೆಗಳಷ್ಟು ಅರಣ್ಯ ಭೂಮಿಯ ಅಗತ್ಯವಿದೆ. ಎಕರೆಗೆ ತಲಾ ಒಂದು ಸಾವಿರದಂತೆ ಲೆಕ್ಕ ಹಾಕಿದರೂ ಸುಮಾರು 15 ಲಕ್ಷ ಮರಗಳನ್ನು ಕಡಿದು ಹಾಕಬೇಕಾಗುತ್ತದೆ. 2018ರಿಂದ ಈ ವರ್ಷದ ತನಕ ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡದ ವಿವಿಧೆಡೆ ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿತ, ಪ್ರವಾಹಗಳನ್ನು ನೋಡುತ್ತಿದ್ದೇವೆ. ಹುಬ್ಬಳ್ಳಿ– ಅಂಕೋಲಾ ರೈಲ್ವೆ ಯೋಜನೆಯ ಜಾರಿಯಿಂದ ಇಂಥ ದುರಂತಗಳು ಮತ್ತಷ್ಟು ಹೆಚ್ಚಲಿವೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

‘ಉದ್ದೇಶಿತ ಯೋಜನಾ ಪ್ರದೇಶವು ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಗಡಿಯಿಂದ ಕೇವಲ ಐದೂವರೆ ಕಿಲೋಮೀಟರ್ ದೂರದಲ್ಲಿದೆ. ಈ ಯೋಜನೆಯು ಹುಲಿ ಮತ್ತು ಆನೆ ಪಥಕ್ಕೂ ಅಡಚಣೆಯಾಗಲಿದೆ. ಕ್ಯಾಸಲ್‌ರಾಕ್– ಪಣಜಿ ನಡುವೆ ಈಗಾಗಲೇ ರೈಲು ಮಾರ್ಗವಿರುವ ಕಾರಣ, ಹುಬ್ಬಳ್ಳಿ– ಅಂಕೋಲಾ ರೈಲ್ವೆ ಯೋಜನೆಗೆ ಹಣ ವ್ಯಯಿಸುವುದು ವ್ಯರ್ಥವಾಗಲಿದೆ’ ಎಂದು ಪ್ರತಿಪಾದಿಸಿದ್ದಾರೆ.

‘ರೈಲಿಗಿಂತ ಆಸ್ಪತ್ರೆ ಅಗತ್ಯ’:

‘ಉತ್ತರ ಕನ್ನಡದ ಜನ ಎರಡು ವರ್ಷಗಳಿಂದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಹೋರಾಡುತ್ತಿದ್ದಾರೆ. ಇದಕ್ಕೆ ವ್ಯಯಿಸಲು ಸರ್ಕಾರದ ಬಳಿ ₹ 400 ಕೋಟಿಯಿಲ್ಲ. ಆದರೆ, ಪ‍ರಿಸರ ಸೂಕ್ಷ್ಮ ಪ್ರದೇಶವನ್ನು ನಾಶ ಮಾಡುವ ರೈಲ್ವೆ ಯೋಜನೆಗೆ ₹ 4 ಸಾವಿರ ಕೋಟಿಯಿದೆ. ಇದು ಹಾಸ್ಯಾಸ್ಪದ’ ಎಂದು ಸಹದೇವ ಎಸ್.ಎಚ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.