ಕುಮಟಾ: ತಾಲ್ಲೂಕಿನಲ್ಲಿ ಕಳಪೆ ಗುಣಮಟ್ಟದ ವಿದ್ಯುತ್ ಸರಬರಾಜಿನಿಂದಾಗಿ ಉದ್ಯಮಗಳು ಹಾನಿ ಅನುಭವಿಸುತ್ತಿದ್ದು, ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಇಲ್ಲಿಂದ ಉದ್ಯಮ ಸ್ಥಳಾಂತರ ಮಾಡುವ ಅನಿವಾರ್ಯತೆ ಉಂಟಾಗಬಹುದು ಎಂದು ಉದ್ಯಮಿಗಳು ಅಳಲು ತೋಡಿಕೊಂಡಿದ್ದಾರೆ.
ಹಿಂದೆ ತಾಲ್ಲೂಕಿನ ಉದ್ಯಮಗಳಿಗೆ ಪ್ರತ್ಯೇಕ ಲೈನ್ ಮೂಲಕ ವಿದ್ಯುತ್ ಸರಬರಾಜು ವ್ಯವಸ್ಥೆ ಇತ್ತು. ಇದರಿಂದ ಉದ್ಯಮಗಳಿಗೆ ನಿರಂತರ ವಿದ್ಯುತ್ ಪೂರೈಕೆ ಸಾಧ್ಯವಿತ್ತು. ಆದರೆ ಈಗ ಕೈಗಾರಿಕಾ ಲೈನ್‌ನಿಂದ ಜನವಸತಿ ಪ್ರದೇಶಕ್ಕೆ ವಿದ್ಯುತ್ ಸಂಪರ್ಕ ನೀಡುತ್ತಿದ್ದರಿಂದ ನಿರಂತರ ವಿದ್ಯುತ್ ಪೂರೈಕೆಯಾಗುತ್ತಿಲ್ಲ.
‘ಸಣ್ಣ ಕೈಗಾರಿಕೆಗಳಿಗೆ ನಿರಂತರ ವಿದ್ಯುತ್ ಪೂರೈಕೆ ಇಲ್ಲದಿದ್ದರೆ ಅವು ಲಾಭ ಮಾಡಲು ಅಸಾಧ್ಯ. ಈ ವರ್ಷ ಮಳೆಗಾಲದಲ್ಲಿ ಕಳಪೆ ಮಟ್ಟದ ವಿದ್ಯುತ್ ಸರಬರಾಜಿನಿಂದಾಗಿ ನಮ್ಮ ಉದ್ಯಮ ಘಟಕಗಳು ಲಕ್ಷಾಂತರ ಮೌಲ್ಯದ ಹಾನಿ ಅನುಭವಿಸಿವೆ. ನಮ್ಮ ಎರಡು ಉದ್ಯಮ ಘಟಕಗಳಿಂದ ಪ್ರತಿ ತಿಂಗಳು ಹೆಸ್ಕಾಂಗೆ ಸುಮಾರು ₹6 ಲಕ್ಷ ವಿದ್ಯುತ್ ಶುಲ್ಕ ಪಾವತಿಸುತ್ತಿದ್ದೇವೆ. ಪ್ರತೀ ಐದು ನಿಮಿಷಕ್ಕೊಮ್ಮೆ ವಿದ್ಯುತ್ ವ್ಯತ್ಯಯ ಉಂಟಾದರೆ ಕೈಗಾರಿಕೆ ನಡೆಯಲು ಸಾಧ್ಯವೇ?’ ಎಂದು ಕ್ಯಾನರಿಸ್ ಗ್ರೂಪ್ ಮುಖ್ಯಸ್ಥ ಎಚ್.ಎಸ್. ಗಜಾನನ ಪ್ರಶ್ನಿಸಿದರು.
‘ಕಾರ್ಖಾನೆಗಳನ್ನು ದೀರ್ಘ ಕಾಲ ಜನರೇಟರ್ ವಿದ್ಯುತ್‌ನಿಂದ ನಡೆಸಿ ನೂರಾರು ಕೆಲಸಗಾರರಿಗೆ ಸಂಬಳ ಕೊಡಲು ಸಾಧ್ಯವಿಲ್ಲ. ಲೋಹದ ಪೈಪ್ ಹಾಗೂ ಹಾಳೆಗಳನ್ನು ತಯಾರಿಸುವ ನಮ್ಮಂಥ ಉದ್ಯಮಗಳಿಗೆ ಕನಿಷ್ಠ ಹನ್ನೆರಡು ಗಂಟೆ ನಿರಂತರ ವಿದ್ಯುತ್ ಬೇಕು. ಇಂಥ ಕಾರಣಗಳಿಂದಾಗಿ ಜಿಲ್ಲೆಯಲ್ಲಿ ಯಾರೂ ಉದ್ಯಮ ಸ್ಥಾಪಿಸಲು ಮುಂದೆ ಬರುತ್ತಿಲ್ಲ’ ಎಂದು ಅವರು ಹೇಳಿದರು.
ಪ್ರತಿಕ್ರಿಯಿಸಿದ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಾಜೇಶ ಮಡಿವಾಳ, ‘ಅರಣ್ಯ ಹಾಗೂ ಮರ-ಗಿಡಗಳ ನಡುವೆ ವಿದ್ಯುತ್ ಲೈನ್ ಹಾದು ಬರಬೇಕಾಗಿರುವುದರಿಂದ ಉದ್ಯಮಗಳಿಗೆ ಮಳೆಗಾಲದಲ್ಲಿ ಗುಣಮಟ್ಟದ ವಿದ್ಯುತ್ ಸರಬರಾಜು ಆಗಿಲ್ಲದಿರುವುದು ನಿಜ. ಕ್ಯಾನಿರಸ್ ಸಂಸ್ಥೆಯವರು ಬಯಸಿದರೆ ಬೇರೆ ವಿದ್ಯುತ್ ಮಾರ್ಗದ ಮೂಲಕ ಅವರ ಉದ್ಯಮ ಘಟಕಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು’ ಎಂದರು.
‘ರಾಜಕಾರಣಿಗಳ ಒತ್ತಡಕ್ಕೆ ಮಣಿದ ಹೆಸ್ಕಾಂ ಅಧಿಕಾರಿಗಳು ಕೈಗಾರಿಕಾ ವಿದ್ಯುತ್ ಫೀಡರ್‌ನಿಂದ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡುತ್ತಿರುವುದನ್ನು ನಿಲ್ಲಿಸಬೇಕು. ತೋಟದಲ್ಲಿ ಒಂದು ಟೊಂಗೆ ವಿದ್ಯುತ್ ಲೈನ್ ಮೇಲೆ ಬಿದ್ದರೂ ಕೈಗಾರಿಕೆಗಳಿಗೆ ವಿದ್ಯುತ್ ಸರಬರಾಜು ನಿಲ್ಲುತ್ತದೆ. ಜಿಲ್ಲೆ ರಾಜ್ಯಕ್ಕೆ ಅತಿ ಹೆಚ್ಚಿನ ಪ್ರಮಾಣದ ವಿದ್ಯುತ್ ನೀಡುತ್ತದೆ. ಆದರೆ ಕೊಂಕಣ ಸುತ್ತಿ ಮೈಲಾರಕ್ಕೆ ಬಂದಂತೆ ಇಲ್ಲಿಯ ವಿದ್ಯುತ್ ಬೆಂಗಳೂರಿನ ಮುಖ್ಯ ಗ್ರಿಡ್‌ಗೆ ಹೋಗಿ ಮತ್ತೆ ಜಿಲ್ಲೆಗೆ ಮರಳಿ ಸರಬರಾಜಾಗುವಾಗುವಂತ ಅವ್ಯವಸ್ಥೆ ನಿಲ್ಲಬೇಕು’ ಎಂದು ತಾಲ್ಲೂಕು ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಹರೀಶ ಶೇಟ್ ಆಗ್ರಹಿಸಿದರು.
ಕೈಗಾರಿಕೋದ್ಯಮಿಗಳು ಈ ಸಮಸ್ಯೆ ಗಮನಕ್ಕೆ ತಂದಿಲ್ಲ. ಇಂಧನ ಸಚಿವರೊಂದಿಗೆ ಶೀಘ್ರವೇ ಈ ಕುರಿತು ಚರ್ಚಿಸುತ್ತೇನೆದಿನಕರ ಶೆಟ್ಟಿ, ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.