ADVERTISEMENT

ಸಾವಯವ ಉತ್ಪನ್ನ ಬಳಕೆ ಹೆಚ್ಚಲಿ: ದೇವತೆಮನೆ ಆಶಯ

ಸಾಂಪ್ರದಾಯಿಕ ತರಕಾರಿ ಬೀಜ ಮೇಳ, ಮಲೆನಾಡು ಮೇಳ

​ಪ್ರಜಾವಾಣಿ ವಾರ್ತೆ
Published 12 ಜುಲೈ 2025, 4:20 IST
Last Updated 12 ಜುಲೈ 2025, 4:20 IST
ಶಿರಸಿ ನಗರದ ಉತ್ತರಕನ್ನಡ ಸಾವಯವ ಒಕ್ಕೂಟದ ಕಚೇರಿಯಲ್ಲಿ ಆಯೋಜಿಸಿದ್ದ ಎರಡು ದಿನಗಳ ಸಾಂಪ್ರದಾಯಿಕ ತರಕಾರಿ ಬೀಜ ಮೇಳ ಹಾಗೂ ಮಲೆನಾಡು ಮೇಳದಲ್ಲಿ ಮಹಿಳೆಯರು ಆಲಂಕಾರಿಕ ಗಿಡ, ಬೀಜಗಳ ಮಾರಾಟ ನಡೆಸಿದರು
ಶಿರಸಿ ನಗರದ ಉತ್ತರಕನ್ನಡ ಸಾವಯವ ಒಕ್ಕೂಟದ ಕಚೇರಿಯಲ್ಲಿ ಆಯೋಜಿಸಿದ್ದ ಎರಡು ದಿನಗಳ ಸಾಂಪ್ರದಾಯಿಕ ತರಕಾರಿ ಬೀಜ ಮೇಳ ಹಾಗೂ ಮಲೆನಾಡು ಮೇಳದಲ್ಲಿ ಮಹಿಳೆಯರು ಆಲಂಕಾರಿಕ ಗಿಡ, ಬೀಜಗಳ ಮಾರಾಟ ನಡೆಸಿದರು   

ಶಿರಸಿ: ‘ಪ್ರತಿ ಅಡುಗೆ ಮನೆಯು ಆರೋಗ್ಯದ ಮನೆಯಾಗಬೇಕು. ಸಾವಯವ ಉತ್ಪನ್ನ ಬಳಕೆ ಪ್ರವೃತ್ತಿ ಹೆಚ್ಚಬೇಕು’ ಎಂದು ಸಾಂಪ್ರದಾಯಿಕ ಭತ್ತದ ತಳಿ ಸಂರಕ್ಷಕ ಆರ್.ಜಿ. ಭಟ್ ದೇವತೆಮನೆ ಹೇಳಿದರು.

ಉತ್ತರಕನ್ನಡ ಸಾವಯವ ಒಕ್ಕೂಟ ಹಾಗೂ ವನಸ್ತ್ರೀ ಸಂಸ್ಥೆಯ ಸಹಯೋಗದಲ್ಲಿ ನಗರದ ಉತ್ತರಕನ್ನಡ ಸಾವಯವ ಒಕ್ಕೂಟದ ಕಚೇರಿಯಲ್ಲಿ ಆಯೋಜಿಸಿದ್ದ ಎರಡು ದಿನಗಳ ಸಾಂಪ್ರದಾಯಿಕ ತರಕಾರಿ ಬೀಜ ಮೇಳ ಹಾಗೂ ಮಲೆನಾಡು ಮೇಳ ಉದ್ಘಾಟಿಸಿ ಅವರು
ಮಾತನಾಡಿದರು.

‘ಇಂದು ಆರೋಗ್ಯ ಸಮಸ್ಯೆ ಹೆಚ್ಚುತ್ತಿದೆ. ಔಷಧಿಯೇ ಆಹಾರ ಆದಂತಾಗುತ್ತಿದೆ. ಇಂಥ ಸನ್ನಿವೇಶದಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಒತ್ತು ನೀಡಬೇಕು. ಸಾವಯವ ಕೃಷಿಯೆಡೆ ಹೆಚ್ಚಿನ ಮಹತ್ವ ನೀಡಬೇಕು. ತರಕಾರಿಯನ್ನು ಸಾವಯವ ಮಾದರಿಯಲ್ಲಿ ಬೆಳೆಸಿ ಬಳಸುವ ಪರಿಪಾಠ ಬೆಳೆಯಬೇಕು. ಸಾವಯವ ಉತ್ಪನ್ನ ಬಳಕೆಯ ಪ್ರವೃತ್ತಿ ಹೆಚ್ಚಬೇಕು’ ಎಂದರು.

ADVERTISEMENT

ಒಕ್ಕೂಟದ ನಿರ್ದೇಶಕ ರಾಘವ ಹೆಗಡೆ ಕೊರ್ಸೆ ಮಾತನಾಡಿ, ‘ಒಕ್ಕೂಟ ಸ್ಥಾಪನೆಯಿಂದ ಗ್ರಾಮೀಣ ಭಾಗದಲ್ಲಿ ಸ್ವ ಉದ್ಯೋಗ ಸೃಷ್ಟಿಯಾಗಿದೆ. ಸಾಂಪ್ರದಾಯಿಕ ಹಾಗೂ ಸಾವಯವದ ಮೂಲಕ ಬದುಕು ರೂಪಿಸಿಕೊಳ್ಳಲು ಸಾಧ್ಯ ಎಂಬುದನ್ನು ತೋರಿಸುತ್ತಿದೆ’ ಎಂದರು.

ಸಾಂಪ್ರದಾಯಿಕ ತರಕಾರಿ ಬೀಜ ಸಂರಕ್ಷಕರಾದ ಹೇಮಾ, ಸುಮನಾ ಹೆಗಡೆ, ಸಂತೋಷ, ಹಲಸಿನ ಮೌಲ್ಯ ವರ್ಧನೆಯಲ್ಲಿ ತೊಡಗಿರುವ ಶಂಕರ ಭಟ್ ಅವರನ್ನು ಸನ್ಮಾನಿಸಲಾಯಿತು.

ಉತ್ತರಕನ್ನಡ ಸಾವಯವ ಒಕ್ಕೂಟದ ಅಧ್ಯಕ್ಷ ವಿಶ್ವೇಶ್ವರ ಭಟ್, ವನಸ್ತ್ರೀ ಟ್ರಸ್ಟಿ ಶೈಲಜಾ ಗೊರ‍್ನಮನೆ, ಕೃಷಿ ವಿಜ್ಞಾನ ಕೇಂದ್ರದ ಕೀಟ ಶಾಸ್ತ್ರಜ್ಞೆ ರೂಪಾ ಪಾಟೀಲ ಇದ್ದರು. ಸಂಸ್ಥೆಯ ಸಿಬ್ಬಂದಿ ವಿಕಾಸ ಹೆಗಡೆ ನಿರೂಪಿಸಿದರು.

ಸಾವಯವ ತರಕಾರಿಗಳ ಮಾರಾಟದ ಉದ್ದೇಶಕ್ಕಾಗಿ  ಸಾವಯವ ಒಕ್ಕೂಟದಿಂದ ವಾರದ ಸಂತೆ ಸಂಘಟಿಸಲು ಕ್ರಮವಹಿಸಲಾಗುತ್ತಿದೆ
ವಿಶ್ವೇಶ್ವರ ಭಟ್ ಉತ್ತರಕನ್ನಡ ಸಾವಯವ ಒಕ್ಕೂಟದ ಅಧ್ಯಕ್ಷ

ಪ್ರದರ್ಶನ ಮತ್ತು ಮಾರಾಟ:

35ಕ್ಕೂ ಹೆಚ್ಚು ತರಕಾರಿ ಬೀಜ ಸಂರಕ್ಷಕರು ಮೇಳದಲ್ಲಿ ಭಾಗವಹಿಸಿದ್ದರು. ರೈತರು ಹಾಗೂ ರೈತ ಮಹಿಳೆಯರು ತಮ್ಮ ಕೈತೋಟದಲ್ಲಿ ಬೆಳೆಸಿದ ವಿವಿಧ ನಾಟಿ ತರಕಾರಿ ಬೀಜಗಳನ್ನು ಹಾಗೂ ಹೂವಿನ ಗಿಡ ಸಸಿಗಳನ್ನು ಮತ್ತು ಗೃಹ ಉತ್ಪನ್ನಗಳನ್ನು ಮೇಳದಲ್ಲಿ ಪ್ರದರ್ಶಿಸುವ ಜತೆ ಮಾರಾಟ ಕೂಡ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.