ADVERTISEMENT

ಬದಲಾಗುತ್ತಿರುವ ಭಾರತ ಸ್ಪಷ್ಟ ಗೋಚರ: ಕೋಟ ಶ್ರೀನಿವಾಸ ಪೂಜಾರಿ

ಮೇಳೈಸಿದ ಸ್ವಾತಂತ್ರ್ಯೋತ್ಸವದ ಸಡಗರ: ಗಮನ ಸೆಳೆದ ಪರೇಡ್, ಸಾಂಸ್ಕೃತಿಕ ವೈಭವ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2022, 14:11 IST
Last Updated 15 ಆಗಸ್ಟ್ 2022, 14:11 IST
ಸ್ವಾತಂತ್ರ್ಯೋತ್ಸವದ ಅಂಗವಾಗಿ ಕಾರವಾರದಲ್ಲಿ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಶಾಸಕಿ ರೂಪಾಲಿ ನಾಯ್ಕ, ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ, ಉಪಾಧ್ಯಕ್ಷ ಪ್ರಕಾಶ ನಾಯ್ಕ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಎಸ್.ಪಿ ಡಾ.ಸುಮನ್ ಪೆನ್ನೇಕರ್, ಜಿ.ಪಂ ಸಿ.ಇ.ಒ ಪ್ರಿಯಾಂಗಾ.ಎಂ, ಎ.ಡಿ.ಸಿ ರಾಜು ಮೊಗವೀರ, ಎ.ಎಸ್.ಪಿ ಬದ್ರಿನಾಥ.ಎಸ್ ಇದ್ದಾರೆ.
ಸ್ವಾತಂತ್ರ್ಯೋತ್ಸವದ ಅಂಗವಾಗಿ ಕಾರವಾರದಲ್ಲಿ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಶಾಸಕಿ ರೂಪಾಲಿ ನಾಯ್ಕ, ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ, ಉಪಾಧ್ಯಕ್ಷ ಪ್ರಕಾಶ ನಾಯ್ಕ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಎಸ್.ಪಿ ಡಾ.ಸುಮನ್ ಪೆನ್ನೇಕರ್, ಜಿ.ಪಂ ಸಿ.ಇ.ಒ ಪ್ರಿಯಾಂಗಾ.ಎಂ, ಎ.ಡಿ.ಸಿ ರಾಜು ಮೊಗವೀರ, ಎ.ಎಸ್.ಪಿ ಬದ್ರಿನಾಥ.ಎಸ್ ಇದ್ದಾರೆ.   

ಕಾರವಾರ: ‘75 ವರ್ಷಗಳನ್ನು ಕಂಡು 76ನೇ ವರ್ಷದ ಸ್ವಾತಂತ್ರ್ಯದ ಧ್ವಜಾರೋಹಣ ಮಾಡುವ ಈ ಸಂದರ್ಭದಲ್ಲಿ, ಬದಲಾಗುತ್ತಿರುವ ಭಾರತವು ಜನ ಸಾಮಾನ್ಯರಿಗೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಪ್ರತಿ ಮನೆಯಲ್ಲಿ ತ್ರಿವರ್ಣ ಧ್ವಜ ಅಭಿಯಾನದ ಮೂಲಕ ಕೋಟಿ ಕೋಟಿ ಮನೆಗಳಲ್ಲಿ ಸ್ವಾತಂತ್ರ್ಯೋತ್ಸವದ ಸ್ವಾಭಿಮಾನ ದೇಶದೆಲ್ಲೆಡೆ ಕಾಣುತ್ತಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ನಗರದ ಪರೇಡ್ ಮೈದಾನದಲ್ಲಿ ಸೋಮವಾರ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

‘ಈ ದೇಶದ ಪ್ರತಿಯೊಬ್ಬನೂ ಭಾರತೀಯ ಪ್ರಜೆ. ಈ ದೇಶದಲ್ಲಿ ಸರ್ವರಲ್ಲಿ ಒಂದಾಗಿ ಬದುಕುವ ಹಕ್ಕಿದೆ. ಕೆಲವು ಕರ್ತವ್ಯಗಳೂ ಅವನ ಜವಾಬ್ದಾರಿ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು’ ಎಂದು ಹೇಳಿದರು.

ADVERTISEMENT

‘ಹಳಿಯಾಳದಲ್ಲಿ ಗೋಶಾಲೆ ತರೆಯಲಾಗುತ್ತಿದ್ದು, ಈ ತಿಂಗಳಿನಿಂದ ಅಧಿಕೃತವಾಗಿ ಆರಂಭಿಸಲಾಗುವುದು. ಕಾರವಾರದ ಕಣಸಗಿರಿ, ಶಿರಸಿಯ ಬಿಸಲಕೊಪ್ಪ, ಹೊನ್ನಾವರದ ಮಂಕಿ, ಮುಂಡಗೋಡದ ಮಳಗಿಯಲ್ಲಿ ಗೋಶಾಲೆಗಳನ್ನು ತೆರೆಯಲಾಗುವುದು. ಜಾನುವಾರು ಚಿಕಿತ್ಸೆಗಾಗಿ ಪ್ರತಿ ತಾಲ್ಲೂಕಿಗೆ ಪಶು ಸಂಜೀವಿನಿ ವಾಹನಗಳನ್ನು ಮಂಜೂರು ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

‘ಅಗ್ನಿಪಥ ಯೋಜನೆಗೆ ಪೂರಕವಾಗಿ ಉತ್ತರ ಕನ್ನಡದಲ್ಲಿ ಹೆಂಜಾ ನಾಯ್ಕ ಹೆಸರಿನಲ್ಲಿ ಸೇನಾಪೂರ್ವ ತರಬೇತಿ ಸಂಸ್ಥೆಯನ್ನು ಆರಂಭಿಸಲಾಗುತ್ತದೆ. ಜಿಲ್ಲೆಯಲ್ಲಿ ಮೀನುಗಾರಿಕೆಗೆ ಅನುಕೂಲವಾಗುವಂತೆ ರಾಜ್ಯ ಸರ್ಕಾರವು 25 ಆಳಸಮುದ್ರ ಮೀನುಗಾರಿಕೆಗೆ ದೋಣಿಗಳನ್ನು ಸಬ್ಸಿಡಿ ದರದಲ್ಲಿ ನೀಡಲಿದೆ. ವಿದ್ಯುತ್ ಇಲ್ಲದ 9 ಸಾವಿರ ಮನೆಗಳಿಗೆ ಸಂಪರ್ಕ ನೀಡಲಾಗುತ್ತಿದೆ’ ಎಂದರು.

ಅಭಿನಂದನೆ:

ಸ್ವಾತಂತ್ರ್ಯ ಹೋರಾಟಗಾರ ಅಂಕೋಲಾ ತಾಲ್ಲೂಕಿನ ಸೂರ್ವೆ ಗ್ರಾಮದ ವೆಂಕಣ್ಣ ಸುಬ್ಬಯ್ಯ ನಾಯಕ ಅವರನ್ನು ಜಿಲ್ಲಾಡಳಿತದಿಂದ ಅಭಿನಂದಿಸಲಾಯಿತು.

ಪುರಸ್ಕಾರ:

ಹಳಿಯಾಳ ತಾಲ್ಲೂಕಿನ ಸಮಗ್ರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಲಕ್ಷ್ಮಿದೇವಿ.ಎಸ್ ಅವರಿಗೆ ‘ಸರ್ವೋತ್ತಮ ಸೇವಾ ಪ್ರಶಸ್ತಿ’ ಪ್ರದಾನ ಮಾಡಲಾಯಿತು. 2020-21ನೇ ಸಾಲಿನ ದ್ವಿತೀಯ ಪಿ.ಯು ಪರೀಕ್ಷೆಯಲ್ಲಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳಲ್ಲಿ ಹೆಚ್ಚು ಅಂಕ ಗಳಿಸಿದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ಗಳನ್ನು ವಿತರಿಸಲಾಯಿತು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

ಕಾರ್ಮಿಕ ಇಲಾಖೆಯಿಂದ ಕಟ್ಟಡ ಕಾರ್ಮಿಕರಿಗೆ ಮದುವೆ ಸಹಾಯ ಧನ, ಹೆರಿಗೆ ಸಹಾಯಧನ ಹಾಗೂ ಪೌಷ್ಟಿಕ ಆಹಾರ ಕಿಟ್, ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಕಿಟ್‌ಗಳನ್ನು ವಿತರಿಸಲಾಯಿತು.

ಅಪಾರ ಜನಸ್ತೋಮ:

ಕೋವಿಡ್ ಕಾರಣದಿಂದ ಎರಡು ವರ್ಷಗಳಿಂದ ಮಂಕಾಗಿದ್ದ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮವು ಈ ಬಾರಿ ಮೇಳೈಸಿತ್ತು. 15 ವಿವಿಧ ತುಕಡಿಗಳಿಂದ ಪಥಸಂಚಲನ ಗಮನ ಸೆಳೆಯಿತು. ವಿವಿಧ ಶಾಲಾ ಕಾಲೇಜುಗಳ ಮಕ್ಕಳು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಪರೇಡ್ ಮೈದಾನದಲ್ಲಿ ಸಾವಿರಾರು ಜನ ಸೇರಿ ಸಡಗರವನ್ನು ಕಣ್ತುಂಬಿಕೊಂಡರು.

‘ಶೀಘ್ರವೇ ಅನುಮೋದನೆ ನಿರೀಕ್ಷೆ’:

‘ಅಲಗೇರಿಯಲ್ಲಿ ಉದ್ದೇಶಿತ ನಾಗರಿಕ ವಿಮಾನ ನಿಲ್ದಾಣಕ್ಕೆ ಇನ್ನೊಂದೆರಡು ಸಚಿವ ಸಂಪುಟ ಸಭೆಗಳಲ್ಲಿ ಅನುಮೋದನೆ ಸಿಗಬಹುದು’ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಕಾರವಾರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಿಮಾನ ನಿಲ್ದಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆಗಳು ನಡೆಯುತ್ತಿವೆ’ ಎಂದರು.

‘ಜಿಲ್ಲೆಯಲ್ಲಿ ಗ್ರಾಮ ಲೆಕ್ಕಿಗರ 102 ಹುದ್ದೆಗಳು ಖಾಲಿಯಿದ್ದು, ನೇಮಕಾತಿಗೆ ಅನುಮೋದನೆ ನೀಡಲಾಗಿದೆ’ ಎಂದೂ ತಿಳಿಸಿದರು.

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ವಲ್ಪ ದಿನಗಳಲ್ಲಿ ಜಿಲ್ಲೆಗೆ ಬರಲಿದ್ದಾರೆ. ಕುಮಟಾ ಆಸುಪಾಸಿನಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಿಸಲು ಖಾಸಗಿಯವರು ಕೂಡ ಭೇಟಿ ನೀಡಲಿದ್ದಾರೆ. ಸರ್ಕಾರದ ಸಹಭಾಗಿತ್ವದಲ್ಲಿ ಹಣಕಾಸು ನೆರವು ನೀಡಲು ಸಾಧ್ಯವೇ ಎಂದು ಪರಿಶೀಲಿಸಲಾಗುತ್ತಿದೆ’ ಎಂದರು.

‘ಅಪ್ಸರಕೊಂಡದಲ್ಲಿಭೂಕುಸಿತವಾಗುವ ಆತಂಕವಿದ್ದು, ರಕ್ಷಣಾ ಕಾರ್ಯ ಮಾಡಲಾಗುತ್ತಿದೆ. ರಾಜ್ಯ ವಿಪತ್ತು ನಿರ್ವಹಣಾ ಪಡೆಯು ಬೀಡುಬಿಟ್ಟಿದೆ. ದಾಂಡೇಲಿಯಲ್ಲಿ ಮೊಸಳೆ ದಾಳಿಯಿಂದ ಜೀವ ಹಾನಿಯಾಗಿರುವುದು ಆಘಾತ ತಂದಿದೆ. ರಕ್ಷಣಾ ಗೋಡೆ ನಿರ್ಮಾಣ ಹಾಗೂ ಪರಿಹಾರ ನೀಡಲಾಗುತ್ತದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.