
ಹೊನ್ನಾವರ: ‘ಇಂದಿರಾ ಕ್ಯಾಂಟೀನ್ ಸ್ಥಾಪನೆಯಿಂದ ಕಡಿಮೆ ದರದಲ್ಲಿ ಶ್ರಮಿಕರು, ಬಡವರು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ತಳಮಟ್ಟದ ಜನರ ಶ್ರೇಯೋಭಿವೃದ್ಧಿಗೆ ರಾಜ್ಯ ಸರ್ಕಾರ ಸದಾಕಾಲ ಬದ್ಧವಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.
ತಾಲ್ಲೂಕಿನ ಮಂಕಿಯಲ್ಲಿ ಸ್ಥಾಪನೆಗೊಂಡಿರುವ ಇಂದಿರಾ ಕ್ಯಾಂಟೀನ್‌ನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿಯೂ ಇಂದಿರಾ ಕ್ಯಾಂಟೀನ್ ಸೇವೆ ಉತ್ತಮವಾಗಿ ನಡೆಯುತ್ತಿದೆ. ಜಿಲ್ಲೆಯ ಬಹುತೇಕ ನಗರಗಳಲ್ಲಿ ಕ್ಯಾಂಟೀನ್ ತೆರೆಯಲಾಗಿದ್ದು, ನಿತ್ಯ ಸಾವಿರಾರು ಜನರಿಗೆ ಉಪಯುಕ್ತವಾಗುತ್ತಿದೆ’ ಎಂದರು.
‘ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮೊದಲ ಅವಧಿಯಲ್ಲಿ ಈ ಯೋಜನೆ ಪರಿಚಯಿಸಿತ್ತು. ಈ ಬಾರಿ ಗ್ಯಾರಂಟಿ ಯೋಜನೆ ಮೂಲಕ ಬಡವರ ಕಲ್ಯಾಣಕ್ಕೆ ಕಂಕಣಬದ್ಧವಾಗಿದೆ. ಕೋಟ್ಯಂತರ ಕುಟುಂಬಗಳು ಯೋಜನೆಗಳ ಲಾಭ ಪಡೆದುಕೊಂಡು, ಆರ್ಥಿಕ ಸಬಲತೆ ಸಾಧಿಸುತ್ತಿವೆ’ ಎಂದರು.
ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಣ್ಣಪ್ಪ ನಾಯ್ಕ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಜಹೀರ ಅಬ್ಬಾಸ್ ಎಸ್., ಮಂಕಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೇಶವ ಚೌಗುಲೆ, ಪಟ್ಟಣ ಪಂಚಾಯಿತಿ ಸದಸ್ಯರು ಪಾಲ್ಗೊಂಡಿದ್ದರು.
ಬಳಿಕ ಸಚಿವರು ತಾಲ್ಲೂಕಿನ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವತಿಯಿಂದ ಪಶ್ಚಿಮವಾಹಿನಿ ಯೋಜನೆಯಡಿ ₹19.98 ಕೋಟಿ ವೆಚ್ಚದಲ್ಲಿ ಮಂಜೂರಾಗಿರುವ ಮಂಕಿ ಹೊಸಹಿತ್ಲು ಸೇತುವೆಯಿಂದ ಬೋಳೆಬಸ್ತಿ ಸೇತುವೆವರೆಗೆ ದೊಡ್ಡ ಹೊಳೆ ಬಲದಂಡೆಗೆ ಮತ್ತು ಎಡದಂಡೆಗೆ ಖಾರ್‌ಲ್ಯಾಂಡ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.