ADVERTISEMENT

ಭಟ್ಕಳದಲ್ಲಿ ತೀವ್ರ ವೈದ್ಯಕೀಯ ತಪಾಸಣಾ ಅಭಿಯಾನ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2020, 15:27 IST
Last Updated 8 ಏಪ್ರಿಲ್ 2020, 15:27 IST

ಕಾರವಾರ:‘ಜಿಲ್ಲೆಯಲ್ಲಿ ಕೋವಿಡ್ 19 ಪೀಡಿತ ಎಂಟು ಮಂದಿಯೂ ಮಾರ್ಚ್ 17ರಿಂದ 22ರ ಅವಧಿಯಲ್ಲೇ ವಿದೇಶದಿಂದ ವಾಪಸಾಗಿದ್ದಾರೆ. ಅವರ 14 ದಿನಗಳ ಕ್ವಾರಂಟೈನ್ ಅವಧಿಯು ಮುಕ್ತಾಯವಾಗಿದ್ದು, ಎಲ್ಲರಪ್ರಯಾಣದ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್‌ ತಿಳಿಸಿದ್ದಾರೆ.

‘ಎಲ್ಲರೂ ಹೋಮ್ ಕ್ವಾರಂಟೈನ್‌ನಲ್ಲಿದ್ದ ಕಾರಣ, ಅವರ ಕುಟುಂಬಗಳ ಸದಸ್ಯರ ವಿವರಮತ್ತುಅವರ ಆರೋಗ್ಯದ ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ. ಮಾರ್ಚ್ 17ರಿಂದ 22ರ ಅವಧಿಯಲ್ಲಿ ವಿದೇಶ ಪ್ರಯಾಣ ಮಾಡಿದ ಭಟ್ಕಳದ ನಾಗರಿಕರು, ತಾಲ್ಲೂಕು ಆಡಳಿತದೊಂದಿಗೆ ಸಹಕರಿಸಬೇಕು’ ಎಂದು ಅವರು ಮನವಿ ಮಾಡಿದ್ದಾರೆ.

‘ಮುಂದಿನ ಮೂರು ದಿನ ತೀವ್ರ ವೈದ್ಯಕೀಯ ತಪಾಸಣಾ ಅಭಿಯಾನವನ್ನು ಭಟ್ಕಳದಲ್ಲಿ ಹಮ್ಮಿಕೊಳ್ಳಲಾಗುವುದು. ಇದಕ್ಕೆ ಉಪ ವಿಭಾಗಾಧಿಕಾರಿ ಸ್ಥಳ ನಿಗದಿ ಪಡಿಸಲಿದ್ದು, ಸಂಬಂಧಿಸಿದವರಿಗೆ ಸಾಕಷ್ಟು ಮುಂಚಿತವಾಗಿ ತಿಳಿಸಲಾಗುವುದು’ ಎಂದೂ ಮಾಹಿತಿ ನೀಡಿದ್ದಾರೆ.

ADVERTISEMENT

‘ವಿದೇಶ ಪ್ರಯಾಣ ಮಾಡಿದವರು ಸ್ವಯಂಪ್ರೇರಿತರಾಗಿ ಆಡಳಿತದೊಂದಿಗೆ ಸಹಕರಿಸಬೇಕು. ತಮ್ಮ ಪ್ರಯಾಣದ ವಿವರಗಳನ್ನು ಕಡ್ಡಾಯವಾಗಿ ನೀಡಬೇಕು. ಈ ವಿಚಾರವು ಸಾರ್ವಜನಿಕರ ಆರೋಗ್ಯದೊಂದಿಗೆ ನೇರ ಪರಿಣಾಮ ಬೀರುವಂಥದ್ದಾಗಿದೆ. ಹಾಗಾಗಿ, ಅಗತ್ಯ ಮಾಹಿತಿಗಳನ್ನುಉದ್ದೇಶಪೂರ್ವಕವಾಗಿ ಮರೆ ಮಾಚುವುದು ಅಥವಾ ಉದಾಸೀನ ತೋರುವುದು ಕಂಡುಬಂದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.