ADVERTISEMENT

ಸಮಾನ ಶಿಕ್ಷಣದಿಂದ ಬದುಕು ಸುಸ್ಥಿರ: ಮುಲ್ಲೈ ಮುಗಿಲನ್

ಮಹಿಳಾ ದಿನಾಚರಣೆ, ಸ್ತ್ರೀಶಕ್ತಿ ಸಮಾವೇಶ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2022, 15:08 IST
Last Updated 11 ಮಾರ್ಚ್ 2022, 15:08 IST
ಕಾರವಾರದಲ್ಲಿ ಶುಕ್ರವಾರ ಆಯೋಜಿಸಲಾದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಸ್ತ್ರೀಶಕ್ತಿ ಸಮಾವೇಶ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಉದ್ಘಾಟಿಸಿದರು. ನ್ಯಾಯಾಧೀಶ ಎನ್.ಸಂತೋಷ ಕುಮಾರ ಶೆಟ್ಟಿ, ನಗರಸಭೆ ಉಪಾಧ್ಯಕ್ಷ ಪ್ರಕಾಶ ನಾಯ್ಕ, ಜಿ.ಪಂ ಸಿ.ಇ.ಒ ಎಂ.ಪ್ರಿಯಾಂಗಾ ಇದ್ದಾರೆ
ಕಾರವಾರದಲ್ಲಿ ಶುಕ್ರವಾರ ಆಯೋಜಿಸಲಾದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಸ್ತ್ರೀಶಕ್ತಿ ಸಮಾವೇಶ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಉದ್ಘಾಟಿಸಿದರು. ನ್ಯಾಯಾಧೀಶ ಎನ್.ಸಂತೋಷ ಕುಮಾರ ಶೆಟ್ಟಿ, ನಗರಸಭೆ ಉಪಾಧ್ಯಕ್ಷ ಪ್ರಕಾಶ ನಾಯ್ಕ, ಜಿ.ಪಂ ಸಿ.ಇ.ಒ ಎಂ.ಪ್ರಿಯಾಂಗಾ ಇದ್ದಾರೆ   

ಕಾರವಾರ: ‘ಭವಿಷ್ಯದಲ್ಲಿ ಬದುಕು ಸುಸ್ಥಿರವಾಗಿರಲು ಲಿಂಗ ತಾರತಮ್ಯ ಮಾಡಬಾರದು. ಗಂಡು ಮತ್ತು ಹೆಣ್ಣು ಮಗುವಿಗೆ ಸಮಾನ ಶಿಕ್ಷಣ ನೀಡಬೇಕು’ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು.

ನಗರದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಸ್ತ್ರೀಶಕ್ತಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದೆ ಸ್ತ್ರೀಶಕ್ತಿ ಗುಂಪಿನ ಮುಖ್ಯ ಗುರಿಯಾಗಿದೆ. ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್.ಆರ್.ಎಲ್.ಎಂ) ಯೋಜನೆಯಡಿ, ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಕೌಶಲಾಭಿವೃದ್ಧಿ ತರಬೇತಿ ನೀಡಲಾಗುತ್ತಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಎಂ.ಪ್ರಿಯಾಂಗಾ ಮಾತನಾಡಿ, ‘ಮಹಿಳೆಯರು ಯಾವುದೇ ಹುದ್ದೆಯನ್ನು ಆಯ್ಕೆ ಮಾಡಿಕೊಂಡರೂ ಸಮಾನ ಅವಕಾಶ ಕೊಡಬೇಕು. ಸಾಧನೆ ಮಾಡುವಾಗ ಎದುರಾಗುವ ಅಡೆತಡೆಗಳನ್ನು ಮೀರಿ ಸಾಗಬೇಕು’ ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎನ್.ಸಂತೋಷ ಕುಮಾರ ಶೆಟ್ಟಿ ಮಾತನಾಡಿ, ‘ಲಿಂಗ ಸಮಾನತೆ ತಾಯಿಯ ಮಡಿಲಿನಿಂದಲೇ ಪ್ರಾರಂಭವಾಗಬೇಕು. ಗಂಡು– ಹೆಣ್ಣು ಎಂದು ಭೇದ ಭಾವ ಮಾಡದೆ ಸಮಾನ ಶಿಕ್ಷಣ ಹಾಗೂ ಸಂಸ್ಕಾರ ನೀಡಿದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

ಸನ್ಮಾನ:

ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಂಗನವಾಡಿ ಕಾರ್ಯಕರ್ತೆಯರಿಗೆ, ಸಹಾಯಕಿಯರಿಗೆ, ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಪ್ರಥಮ ಸ್ಥಾನ ಪಡೆದ ಕಾರವಾರದ ಕರಾವಳಿ ಸ್ತ್ರೀ ಶಕ್ತಿ ಒಕ್ಕೂಟಕ್ಕೆ, ಕಿತ್ತೂರು ರಾಣಿ ಚೆನ್ನಮ್ಮ ಸಾಹಿತ್ಯ ಪ್ರಶಸ್ತಿ ಪುರಸ್ಕೃತೆ ಕುಮಟಾದ ಶಾರದಾ ಕೆ.ಭಟ್ಟ ಅವರನ್ನು ಸನ್ಮಾನಿಸಲಾಯಿತು.

ನಗರಸಭೆ ಉಪಾಧ್ಯಕ್ಷ ಪ್ರಕಾಶ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ, ಡಿ.ವೈ.ಎಸ್‌.ಪಿ ಅರವಿಂದ ಕಲಗುಜ್ಜಿ, ಅಕ್ಬರ ಮುಲ್ಲಾ, ಸಾಹಿತಿಗಳಾದ ರಾಜೇಶ್ವರಿ ಕೆರೆಮನೆ, ಶ್ರೀದೇವಿ ಕೆರೆಮನೆ ಇದ್ದರು. ಪ್ರಿಯಾ ನಾಯ್ಕ ಹಾಗೂ ಜಯಶ್ರೀ ಪಟಗಾರ ಕಾರ್ಯಕ್ರಮ ನಿರೂಪಿಸಿದರು. ಶ್ಯಾಮಲಾ ಸಿ.ಕೆ. ಸ್ವಾಗತಿಸಿದರು. ನಾಗರತ್ನಾ ನಾಯ್ಕ ವಂದಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಹಾಗೂ ಪ್ರಗತಿ ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.