ADVERTISEMENT

ಮನುಷ್ಯರ ಕೊಲೆಗೆ ನೀಡಿದಷ್ಟೇ ಮಹತ್ವ ಹಸುವಿನ ವಧೆ ಪ್ರಕರಣಕ್ಕೆ ನೀಡಿ ತನಿಖೆ: SP

​ಪ್ರಜಾವಾಣಿ ವಾರ್ತೆ
Published 21 ಜನವರಿ 2025, 15:43 IST
Last Updated 21 ಜನವರಿ 2025, 15:43 IST
ಹೊನ್ನಾವರ ತಾಲ್ಲೂಕಿನ ಸಾಲ್ಕೋಡ ಗ್ರಾಮದ ಕೊಂಡಾಕುಳಿಯಲ್ಲಿ ಹಸುವಿನ ವಧೆ ಮಾಡಿದ ಜಾಗಕ್ಕೆ ಮಂಗಳವಾರ ಭೇಟಿ ನೀಡಿದ ಎಸ್ಪಿ ನಾರಾಯಣ ಎಂ. ಅವರು ಹತ್ಯೆಯಾದ ಹಸುವಿನ ಮಾಲೀಕರಿಗೆ ಸಾಂತ್ವನ ಹೇಳಿದರು
ಹೊನ್ನಾವರ ತಾಲ್ಲೂಕಿನ ಸಾಲ್ಕೋಡ ಗ್ರಾಮದ ಕೊಂಡಾಕುಳಿಯಲ್ಲಿ ಹಸುವಿನ ವಧೆ ಮಾಡಿದ ಜಾಗಕ್ಕೆ ಮಂಗಳವಾರ ಭೇಟಿ ನೀಡಿದ ಎಸ್ಪಿ ನಾರಾಯಣ ಎಂ. ಅವರು ಹತ್ಯೆಯಾದ ಹಸುವಿನ ಮಾಲೀಕರಿಗೆ ಸಾಂತ್ವನ ಹೇಳಿದರು    

ಹೊನ್ನಾವರ: ‘ಮನುಷ್ಯರ ಕೊಲೆಯಾದ ಘಟನೆಯನ್ನು ಎಷ್ಟು ಗಂಭೀರವಾಗಿ ತೆಗೆದುಕೊಳ್ಳುತ್ತೇವೆಯೋ ಅಷ್ಟೇ ಮಹತ್ವವನ್ನು ಹಸುವಿನ ವಧೆ ಪ್ರಕರಣಕ್ಕೂ ನೀಡಿ ಅಗತ್ಯ ತನಿಖೆ ಕೈಗೊಂಡು  ದುಷ್ಕರ್ಮಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುತ್ತೇವೆ’ ಎಂದು ಎಸ್ಪಿ ನಾರಾಯಣ ಎಂ. ಭರವಸೆ ನೀಡಿದರು.

ತಾಲ್ಲೂಕಿನ ಸಾಲ್ಕೋಡ ಗ್ರಾಮದ ಕೊಂಡಾಕುಳಿಯಲ್ಲಿ ಗೋ ವಧೆ ನಡೆದ ಜಾಗಕ್ಕೆ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಮೊಬೈಲ್ ಫೋನ್‌, ಸಿಸಿಟಿವಿ ಕ್ಯಾಮೆರಾ ಮೊದಲಾದ ತಾಂತ್ರಿಕ ಸಹಾಯ ಪ್ರಸ್ತುತ ಗೋ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಲಭ್ಯವಾಗದ ಕಾರಣ ಆರೋಪಿಗಳ ಪತ್ತೆ ಸ್ವಲ್ಪ ವಿಳಂಬವಾಗಬಹುದು. ಗೋ ಹತ್ಯೆ ಮಾಡಿ ಅದರ ಮಾಂಸ ಸಾಗಾಟ ಮಾಡಿರುವುದು ಖಚಿತವಾಗಿದೆ. ಘಟನಾ ಸ್ಥಳ ಹಾಗೂ ಸುತ್ತಮುತ್ತ ತಿರುಗಿ ಕೆಲವು ಮಾಹಿತಿಯನ್ನು ಸಂಗ್ರಹಿಸಿದ್ದೇವೆ. ಮೂವರು ಸಿಪಿಐ ಒಳಗೊಂಡ ತಂಡ ರಚಿಸಲಾಗಿದ್ದು ಸಂಶಯದ ಮೇಲೆ ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚುವ ವಿಶ್ವಾಸವಿದೆ’ ಎಂದರು.

ADVERTISEMENT

‘ಸ್ವತಃ ಮುಖ್ಯಮಂತ್ರಿ, ಗೃಹಮಂತ್ರಿ ಘಟನೆಯ ಕುರಿತು ಮಾಹಿತಿ ಪಡೆದು ಕಠಿಣ ಕ್ರಮಕ್ಕೆ ಸೂಚಿಸಿದ್ದಾರೆ. ಗೋಮಾಂಸ ಸೇವಿಸುವ ಸಮುದಾಯದ ಸಂಘಟನೆಗಳೂ ಆರೋಪಿಗಳನ್ನು ಬಂಧಿಸುವಲ್ಲಿ ಅಗತ್ಯ ನೆರವು ನೀಡುವುದಾಗಿ ತಿಳಿಸಿವೆ. ಕಳೆದ ಎರಡು ವರ್ಷಗಳಲ್ಲಿ 600ಕ್ಕೂ ಹೆಚ್ಚು ಗೋಸಾಗಣೆ ಪ್ರಕರಣಗಳು ಜಿಲ್ಲೆಯಲ್ಲಿ ದಾಖಲಾಗಿದ್ದು ಪೊಲೀಸರು ಹಲವಾರು ಜಾನುವಾರುಗಳನ್ನು ರಕ್ಷಿಸಿದ್ದಾರೆ’ ಎಂದರು.

'ಗೋವುಗಳು ಕಾಣೆಯಾದ ಬಗ್ಗೆ ಈ ಹಿಂದೆ ಸಲ್ಲಿಸಲಾಗಿರುವ ದೂರುಗಳ ಕುರಿತು ತ್ವರಿತವಾಗಿ ವಿಚಾರಣೆ ಮಾಡುವ ಜೊತೆಗೆ ಗೋವುಗಳು ಕಾಣೆಯಾಗಿರುವ ಬಗ್ಗೆ ಹೇಳಿಕೊಂಡ ಇತರ ಕೆಲವರಿಗೂ ದೂರು ಸಲ್ಲಿಸಲು ತಿಳಿಸಿದ್ದೇನೆ. ಊರಿನಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸುವಂತೆ ಸ್ಥಳೀಯ ಗ್ರಾಮ ಪಂಚಾಯಿತಿಗೆ ಕೇಳಿಕೊಂಡಿದ್ದೇನೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಹೆಚ್ಚುವರಿ ಎಸ್ಪಿ ಎಂ.ಜಗದೀಶ, ಸಹಾಯಕ ಎಸ್ಪಿ ಮಹೇಶ, ಸಿಪಿಐ ಸಿದ್ಧರಾಮೇಶ್ವರ ಇದ್ದರು.

ಜೆಡಿಎಸ್ ಖಂಡನೆ: ಕೊಂಡಾಕುಳಿಯಲ್ಲಿ ನಡೆದ ಅಮಾನುಷ ಗೋ ಹತ್ಯೆ ಪ್ರಕರಣವನ್ನು ತಮ್ಮ ಪಕ್ಷ ತೀವ್ರವಾಗಿ ಖಂಡಿಸುತ್ತಿದ್ದು ಘಟನೆಗೆ ಸಂಬಂಧಿಸಿದ ಆರೋಪಿಗಳನ್ನು ಬಂಧಿಸಿ ಕಾನೂ ಕ್ರಮ ಕೈಗೊಳ್ಳಬೇಕು' ಎಂದು ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ ಆಗ್ರಹಿಸಿದರು.

ಘಟನಾ ಸ್ಥಳಕ್ಕೆ ತಮ್ಮ ಬೆಂಬಲಿಗರೊಂದಿಗೆ ಮಂಗಳವಾರ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಮುಖಂಡರಾದ ಟಿ.ಟಿ.ನಾಯ್ಕ ಮೂಡ್ಕಣಿ, ಎಚ್.ಆರ್.ಗಣೇಶ, ರಜನಿ ನಾಯ್ಕ, ಸಚಿನ್ ನಾಯ್ಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.