ADVERTISEMENT

ಜಾಮೀನು ರಹಿತ ಪ್ರಕರಣ ದಾಖಲಿಸಲು ಅವಕಾಶ ನೀಡಿ: ಕೃಷಿಕರ ಹಿತರಕ್ಷಣಾ ಸಮಿತಿ

ಬೆಟ್ಟಭೂಮಿ ಅತಿಕ್ರಮಣ: ಬೆಟ್ಟ ಬಳಕೆದಾರರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 4:09 IST
Last Updated 8 ಡಿಸೆಂಬರ್ 2025, 4:09 IST
<div class="paragraphs"><p>ಕಡತ</p></div>

ಕಡತ

   

(ಸಾಂದರ್ಭಿಕ ಚಿತ್ರ)

ಶಿರಸಿ: ಬೆಟ್ಟಭೂಮಿ ಅತಿಕ್ರಮಣವನ್ನು ಜಾಮೀನು ರಹಿತ ಪ್ರಕರಣ ಎಂದು ಪರಿಗಣಿಸಿ ದಾಖಲು ಮಾಡಲು ಈ ಹಿಂದೆ ಕಾನೂನಿನಲ್ಲಿ ಅವಕಾಶ ಇತ್ತು. ಅದರಂತೆ ಈಗಿನ ಸಂಹಿತೆಗೆ ತಿದ್ದುಪಡಿ ಮಾಡಿ ಅತಿಕ್ರಮಣ ಪ್ರಕರಣವನ್ನು ತಡೆಯಲು ರಾಜ್ಯದ ಕಾನೂನು ಇಲಾಖೆಗೆ ವಿನಂತಿಸಲು ಕೃಷಿಕರ ಹಿತರಕ್ಷಣಾ ಸಮಿತಿ ನಿರ್ಣಯಿಸಿದೆ.

ADVERTISEMENT

ನಗರದ ಗಡಿಗುಂಟ ಇರುವ ಹಳ್ಳಿಗಳ ಬೆಟ್ಟ ಪ್ರದೇಶದಲ್ಲಿ ಅವಿರತವಾಗಿ ಆಗುತ್ತಿರುವ ಅತಿಕ್ರಮಣ ಪ್ರಕರಣದ ಗಂಭೀರತೆ ಹಾಗೂ ಬೆಟ್ಟದ ಅಭಿವೃದ್ಧಿ ಕುರಿತು ಸಮಿತಿಯು ಲಿಂಗದಕೋಣ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ವಿವಿಧ ನಿರ್ಣಯ ಕೈಗೊಳ್ಳಲಾಯಿತು. ಈ ಹಿಂದೆ ಕರ್ನಾಟಕ ಸರ್ಕಾರದ ಐಪಿಸಿ ಕಾಯ್ದೆಯಲ್ಲಿ ಸೆಕ್ಷನ್ 441/2014ರ ತಿದ್ದುಪಡಿಯು ಬೆಟ್ಟಭೂಮಿ ಅತಿಕ್ರಮಣವನ್ನು ಜಾಮೀನು ರಹಿತ ಪ್ರಕರಣ ಎಂದು ಪರಿಗಣಿಸಿ ದಾಖಲು ಮಾಡಲು ಅವಕಾಶ ಇತ್ತು. ಈಗಲೂ ಅದನ್ನು ಮರು ಜಾರಿಗೊಳಿಸುವ ಅವಗತ್ಯವಿದೆ’ ಎಂದು ಸಭೆಯಲ್ಲಿ ಪಾಲ್ಗೊಂಡ ಬೆಟ್ಟ ಬಳಕೆದಾರರು ಆಗ್ರಹಿಸಿದರು. 

‘ಬೆಟ್ಟದ ಅಭಿವೃದ್ಧಿ ಹಾಗೂ ರಕ್ಷಣೆ ಕುರಿತು ವಿಸ್ತಾರವಾಗಿ ಸಭೆ ವಿಮರ್ಶಿಸಿ ಈ ಕೆಳಗಿನಂತೆ ನಿರ್ಣಯ ಕೈಗೊಳ್ಳಲಾಯಿತು. ಬೆಟ್ಟದ ಅಭಿವೃದ್ಧಿ ಬೆಟ್ಟಬಳಕೆದಾರರ ನೈತಿಕ ಹೊಣೆಗಾರಿಕೆ ಆಗಿದೆ. ಕಾರಣ ಎಲ್ಲರೂ ಬೆಟ್ಟದ ಅಭಿವೃದ್ಧಿ ಕುರಿತು ಕ್ರಮ ಕೈಗೊಳ್ಳಬೇಕು. ಕೆನರಾ ಪ್ರಿವಿಲೇಜ್ ಕಾಯಿದೆ ಆಶಯಕ್ಕೆ ವಿರುದ್ಧವಾಗಿರುವ ಹಾಗೂ ತಪ್ಪಾಗಿ ನಮೂದಾಗಿರುವ ‘ಬ’ ಖರಾಬ ವ್ಯಾಪ್ತಿಯಿಂದ ಬೆಟ್ಟದ ಕ್ಷೇತ್ರವನ್ನು ತೆಗೆದು ಹಾಕಬೇಕು. ಈ ಕುರಿತು ಜನಪ್ರತಿನಿಧಿಗಳು ಆಸಕ್ತಿ ತೋರುವುದು ಅವಶ್ಯವಾಗಿದೆ.  ಈ ಸಮಸ್ಯೆಯು ಬೆಟ್ಟದ ಅಭಿವೃದ್ದಿ ದಾರಿಯಲ್ಲಿ ಆತಂಕಕ್ಕೆ ಕಾರಣವಾಗಿದೆ. ಕಾರಣ ಇದರ ನಿವಾರಣೆಗೆ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಲಾಯಿತು. 

‘ಬೆಟ್ಟದ ಕ್ಷೇತ್ರವನ್ನು ಅತಿಕ್ರಮಣ ಮಾಡುತ್ತಿರುವ ಹಲವು ಸಂದರ್ಭಗಳನ್ನು ಸಭೆಯು ಗಂಭೀರವಾಗಿ ಪರಿಗಣಿಸಿತು. ಎಲ್ಲರೂ ಒಟ್ಟಾಗಿ ಈ ಘಟನೆಗಳ ವಿರುದ್ಧ ‌ಸಂಘಟಿತವಾಗಿ, ಕಾನೂನು ರೀತಿಯಿಂದಲೂ ಹೋರಾಡಬೇಕು ಎಂದು ನಿರ್ಣಯಿಸಿತು. ಈ ಕುರಿತು ಭಾರತೀಯ ನ್ಯಾಯ ಸಂಹಿತೆಯಲ್ಲಿ ಸೂಕ್ತ ತಿದ್ದುಪಡಿ ಆಗಬೇಕು ಎಂಬುದನ್ನು ಜನಪ್ರತಿನಿಧಿಗಳ ಗಮನಕ್ಕೆ ತರಲು’ ನಿರ್ಣಯಿಸಿತು.

ಸಮಿತಿ ಪ್ರಮುಖರಾದ ಎಂ.ಎನ್.ಹೆಗಡೆ ಬಳಗಂಡಿ ಮುಂಡಿಗೇಸರ ಪ್ರಾಸ್ತಾವಿಕ ಮಾತನಾಡಿ, ಬೆಟ್ಟದ ಇತಿಹಾಸ ಹಾಗೂ ಅದರ ಹಿಂದೆ ಇರುವ ಪವಿತ್ರ ಆಶಯವನ್ನು ತಿಳಿಸಿದರು. ಶ್ರೀಕೃಷ್ಣ ಹೆಗಡೆ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.