ADVERTISEMENT

ಶಿರಸಿ: ಹಸಿರು ಪರಿಸರದ ಹಳ್ಳಿಗೆ ಬಂದ ಐಟಿ ಕಂಪನಿ

ಶಿರಸಿ ತಾಲ್ಲೂಕಿನ ಒಡ್ಡಿನಕೊಪ್ಪದಲ್ಲಿ ಕಚೇರಿ ಆರಂಭ: ಸ್ಥಳೀಯರೇ ಉದ್ಯೋಗಿಗಳು

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2023, 19:30 IST
Last Updated 10 ಫೆಬ್ರುವರಿ 2023, 19:30 IST
ಶಿರಸಿಯ ಒಡ್ಡಿನಕೊಪ್ಪದಲ್ಲಿ ನಿರ್ಮಿಸಿರುವ ಐಟಿ ಕಂಪನಿ ಕಚೇರಿ
ಶಿರಸಿಯ ಒಡ್ಡಿನಕೊಪ್ಪದಲ್ಲಿ ನಿರ್ಮಿಸಿರುವ ಐಟಿ ಕಂಪನಿ ಕಚೇರಿ   

ಶಿರಸಿ: ಹಸಿರು ಪರಿಸರ ಹೊದ್ದ ಅರಣ್ಯ ಜಿಲ್ಲೆಯಾದ ಉತ್ತರ ಕನ್ನಡದಲ್ಲಿ ಬೃಹತ್ ಕೈಗಾರಿಕೆಗಳು, ಐಟಿ–ಬಿಟಿಯಂಥ ಕಂಪನಿಗಳು ನೆಲೆಯೂರದ ಕಾರಣ ಉದ್ಯೋಗ ಅರಸಿ ಪರ ಸ್ಥಳಕ್ಕೆ ತೆರಳುವವರೇ ಹೆಚ್ಚಿದ್ದಾರೆ. ಇಂಥ ಉದ್ಯೋಗ ವಲಸೆ ತಡೆಯುವ ಜತೆಗೆ ಐಟಿ ಉದ್ಯೋಗಿಗಳಿಗೆ ತಾವಿರುವ ಪರಿಸರದ ನಡುವೆ ಕೆಲಸ ನೀಡಲು ಐ.ಟಿ ಕಂಪನಿಯೊಂದು ಹಳ್ಳಿಗೆ ಅಡಿಯಿಟ್ಟಿದೆ.

ತಾಲ್ಲೂಕಿನ ಬೆಂಗಳೆ ಗ್ರಾಮದ ಒಡ್ಡಿನಕೊಪ್ಪದಲ್ಲಿ ಅಲ್ಟ್ ಡಿಜಿಟಲ್ ಟೆಕ್ನಾಲಜೀಸ್ ಎಂಬ ಐಟಿ ಕಂಪನಿ ತನ್ನ ಅಧಿಕೃತ ಶಾಖೆಯನ್ನು ಫೆ.11 ರಂದು ತೆರೆಯುತ್ತಿದೆ. ಉತ್ತರ ಪ್ರದೇಶ ಮೂಲದ ವಿಕಾಸ ಗೋಯಲ್ ಈ ಕಂಪನಿಯ ಸಂಸ್ಥಾಪಕರಾಗಿದ್ದು, ಬೆಂಗಳೆ ಗ್ರಾಮದ ಗೌತಮ್ ಕಂಪನಿಯ ಸಹ ಸಂಸ್ಥಾಪಕರಾಗಿದ್ದಾರೆ. 8 ವರ್ಷಗಳ ಹಿಂದೆ ಪ್ರಾರಂಭವಾದ ಸಂಸ್ಥೆಯ ಮುಖ್ಯ ಕಚೇರಿ ಉತ್ತರ ಪ್ರದೇಶದ ನೋಯ್ಡಾದಲ್ಲಿದೆ.

ಈಗ ಸಾಮಾನ್ಯ ಹಳ್ಳಿಯೊಂದರಲ್ಲಿ ಕಂಪನಿ ತನ್ನ ಶಾಖೆ ಆರಂಭಿಸುವ ಸಾಹಸಕ್ಕೆ ಕೈಹಾಕಿದೆ. ಒಡ್ಡಿನಕೊಪ್ಪದಲ್ಲಿ ಈ ಹಿಂದೆ ರೆಸಾರ್ಟ್ ಆಗಿದ್ದ ಕಟ್ಟಡವನ್ನು ಖರೀದಿ ಮಾಡಲಾಗಿದೆ. ಅಲ್ಲಿ 50 ಜನ ಕಾರ್ಯನಿರ್ವಹಿಸಬಹುದಾದ ಸ್ಥಳಾವಕಾಶ, ಸೌಲಭ್ಯ ನಿರ್ಮಿಸಲಾಗಿದೆ.

ADVERTISEMENT

‘ಜಿಲ್ಲೆಯ ಸಾವಿರಾರು ಯುವಕ, ಯುವತಿಯರು ಬೆಂಗಳೂರಿನ ಐಟಿ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಪ್ಪ ಅಮ್ಮನ ಜತೆ ಊರಲ್ಲೇ ಇರಬೇಕು, ಐಟಿ ಉದ್ಯೋಗವೂ ಬೇಕು ಎಂಬ ಮನೋಭಾವದವರಿಗೆ ಅನುಕೂಲವಾಗಲು ಹೊಸ ಪ್ರಯತ್ನಕ್ಕೆ ಕೈಹಾಕಿದ್ದೇವೆ. ಸದ್ಯ ಕಂಪನಿಯಲ್ಲಿ ಉಡುಪಿಯ ಒಬ್ಬರನ್ನು ಬಿಟ್ಟರೆ ಉಳಿದ 12 ಜನ ಸುತ್ತಲಿನ ಹಳ್ಳಿಯವರೇ ಆಗಿದ್ದಾರೆ’ ಎನ್ನುತ್ತಾರೆ ಗೌತಮ್ ಬೆಂಗಳೆ.

‘ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ವರ್ಕ್ ಫ್ರಂ ಹೋಂ ಸ್ವರೂಪದಲ್ಲಿ ಕಾರ್ಯನಿರ್ವಹಿಸಬೇಕಾಗಿ ಬಂತು. ಕಂಪನಿಯ ಬಳಿ ಸಾಕಷ್ಟು ಪ್ರೊಜೆಕ್ಟ್‌ ಳಿದ್ದ ಕಾರಣ ಸ್ಥಳೀಯವಾಗಿ ಎಂಜಿನಿಯರ್ ಹುಡುಕಾಟ ಆರಂಭಿಸಿದ್ದೆವು. ತಾಲ್ಲೂಕಿನ ಗ್ರಾಮೀಣ ಭಾಗದಲ್ಲೇ ನಮಗೆ ಅಗತ್ಯ ಉದ್ಯೋಗಿಗಳು ದೊರೆತರು. ಅವರಿಗೆ ತರಬೇತಿ ನೀಡಿ ಕೆಲಸಕ್ಕೆ ನೇಮಿಸಿಕೊಳ್ಳಲಾಗಿದೆ’ ಎಂದು ಗೌತಮ್ ವಿವರಿಸಿದರು.

‘ಕಂಪನಿ ಮುಖ್ಯವಾಗಿ ಆಸ್ಟ್ರೇಲಿಯಾ, ಮೆಕ್ಸಿಕೋ, ಅಮೆರಿಕ ಮುಂತಾದ ದೇಶಗಳ ಪ್ರಸಿದ್ಧ ಕಂಪನಿಗಳಿಗೆ ಸಾಫ್ಟ್ ವೇರ್ ಅಭಿವೃದ್ಧಿ ಮಾಡಿಕೊಡುವ ಜತೆಗೆ ಅವುಗಳ ನಿರ್ವಹಣೆ ಮಾಡುವ ಕಾರ್ಯ ಮಾಡುತ್ತಿದೆ’ ಎಂದು ವಿವರಿಸಿದರು.

***
ಹಳ್ಳಿಯಿಂದ ಕಾರ್ಯ ಮಾಡುವುದರಿಂದ ಕಂಪನಿ ಕಾರ್ಯನಿರ್ವಹಣೆಯಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ. ಉದ್ಯೋಗಿಗಳಿಗೆ ಉತ್ತಮ ವಾತಾವರಣ, ಕಡಿಮೆ ಖರ್ಚು, ಸಮಯದ ಉಳಿತಾಯ ಆಗುತ್ತದೆ.
-ಗೌತಮ್ ಬೆಂಗಳೆ, ಅಲ್ಟ್ ಡಿಜಿಟಲ್ ಟೆಕ್ನಾಲಜೀಸ್ ಸಹ ಸಂಸ್ಥಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.