ADVERTISEMENT

ಯುವಕರಿಗೆ ಕೃಷಿ ತರಬೇತಿ ನೀಡಿ: ಪ್ರಿಯಾಂಗಾ.ಎಂ

‘ಜಲಶಕ್ತಿ’ ಅಭಿಯಾನ ತಂಡದಿಂದ ಕಾಮಗಾರಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2022, 15:49 IST
Last Updated 19 ಜುಲೈ 2022, 15:49 IST
ಕೇಂದ್ರ ಸರ್ಕಾರದ ‘ಜಲಶಕ್ತಿ ಅಭಿಯಾನ’ ತಂಡದ ಸದಸ್ಯರು ಕಾರವಾರ ತಾಲ್ಲೂಕಿನ ಭೀಮಕೋಲ್ ಕೆರೆಯ ಪ್ರದೇಶದ ಅಭಿವೃದ್ಧಿ ಕಾಮಗಾರಿಯನ್ನು ಮಂಗಳವಾರ ವೀಕ್ಷಿಸಿದರು. ಕೇಂದ್ರ ಸರ್ಕಾರದ ಉಪ ಕಾರ್ಯದರ್ಶಿ ಅಂಕಿತಾ ಮಿಶ್ರಾ, ವಿಜ್ಞಾನಿ ಎನ್.ಎ.ಸೋನಾವಾನೆ, ಜಿ.ಪಂ ಸಿ.ಇ.ಒ ಪ್ರಿಯಾಂಗಾ ಇದ್ದಾರೆ
ಕೇಂದ್ರ ಸರ್ಕಾರದ ‘ಜಲಶಕ್ತಿ ಅಭಿಯಾನ’ ತಂಡದ ಸದಸ್ಯರು ಕಾರವಾರ ತಾಲ್ಲೂಕಿನ ಭೀಮಕೋಲ್ ಕೆರೆಯ ಪ್ರದೇಶದ ಅಭಿವೃದ್ಧಿ ಕಾಮಗಾರಿಯನ್ನು ಮಂಗಳವಾರ ವೀಕ್ಷಿಸಿದರು. ಕೇಂದ್ರ ಸರ್ಕಾರದ ಉಪ ಕಾರ್ಯದರ್ಶಿ ಅಂಕಿತಾ ಮಿಶ್ರಾ, ವಿಜ್ಞಾನಿ ಎನ್.ಎ.ಸೋನಾವಾನೆ, ಜಿ.ಪಂ ಸಿ.ಇ.ಒ ಪ್ರಿಯಾಂಗಾ ಇದ್ದಾರೆ   

ಕಾರವಾರ: ‘ರೈತರಿಗೆ ನೀರಿನ ಸದ್ಬಳಕೆ ಕುರಿತು, ಯುವಕರಿಗೆ ವಿವಿಧ ಬೆಳೆ ಬೆಳೆಯಲು ತರಬೇತಿ ನೀಡಬೇಕು. ಅವರಿಗೆ ನಿರಂತರವಾಗಿ ಆದಾಯ ಬರುವಂಥ ಕಾರ್ಯ ಮಾಡಬೇಕು’ ಎಂದು ಕೇಂದ್ರ ಸರ್ಕಾರದ ಉಪ ಕಾರ್ಯದರ್ಶಿ ಅಂಕಿತಾ ಮಿಶ್ರಾ ಅವರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಿಯಾಂಗಾ.ಎಂ ಅವರಿಗೆ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ‘ಜಲಶಕ್ತಿ ಅಭಿಯಾನ’ ಅಡಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು. ವಿಜ್ಞಾನಿ ಎನ್.ಎ.ಸೋನಾವಾನೆ ಅವರೂ ಇದ್ದರು.

ಜುಲೈ 21ರವರೆಗೆ ಜಿಲ್ಲೆಯ ವಿವಿಧೆಡೆ ಸಂಚರಿಸಿ ಅಭಿವೃದ್ಧಿ ಕಾಮಗಾರಿಗಳನ್ನು ತಂಡವು ಪರಿಶೀಲಿಸಲಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಸಿ.ಇ.ಒ ಪ್ರಿಯಾಂಗಾ ಅವರು ಕಾಮಗಾರಿಗಳ ಮಾಹಿತಿ ನೀಡಿದರು.

ADVERTISEMENT

ಕೇಂದ್ರ ತಂಡವು ಸಭೆಗೂ ಮೊದಲು ಕೃಷಿ ಇಲಾಖೆಯಲ್ಲಿ ಜಲಶಕ್ತಿ ಕೇಂದ್ರಕ್ಕೆ ಭೇಟಿ ನೀಡಿತು. ನಂತರ ಕಾರವಾರ ತಾಲ್ಲೂಕಿನ ಭೀಮಕೋಲ್ ಕೆರೆ, ಕೋಡಿಭಾಗದಲ್ಲಿ ಅರಣ್ಯ ಇಲಾಖೆಯ ಸಾಮಾಜಿಕ ವಲಯದ ಸಸ್ಯ ಪಾಲನಾ ಕೇಂದ್ರ, ಚೆಂಡಿಯಾದ ಕೇಶವ ದೇವಸ್ಥಾನದ ಕಲ್ಯಾಣಿಯನ್ನು ವೀಕ್ಷಿಸಿತು.

ಅಂಕೋಲಾ ತಾಲ್ಲೂಕಿನ ಗೋಳೆ ಗ್ರಾಮದ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಜಲಚೇತನ ಧಾಮ ವನ ನಿರ್ಮಾಣ, ಅಮೃತ ಸರೋವರ ಕೆರೆ ಅಭಿವೃದ್ಧಿ, ಸುಂಕಸಾಳ ಗ್ರಾಮದ ಕಿಂಡಿ ಅಣೆಕಟ್ಟೆ ಮತ್ತು ಕಾಲುಸಂಕ ಕಾಮಗಾರಿ, ಅಂಕೋಲಾ ತಾಲ್ಲೂಕಿನ ಹಟ್ಟಿಕೇರಿ ಗ್ರಾಮದಲ್ಲಿ ಕೆರೆ ನಿರ್ಮಾಣ ಕಾಮಗಾರಿ, ಅಗಸೂರಿನಲ್ಲಿ ‘ಬಿಂದಿಗೆ’ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿತು.

ಜಿಲ್ಲಾ ಪಂಚಾಯಿತಿಯ ಮುಖ್ಯ ಲೆಕ್ಕಾಧಿಕಾರಿ ಸತೀಶ ಪವಾರ್, ಮುಖ್ಯ ಯೋಜನಾಧಿಕಾರಿ ವಿನೋದ ಅಣ್ವೇಕರ್, ಅಭಿವೃದ್ಧಿ ವಿಭಾಗದ ಉಪ ಕಾರ್ಯದರ್ಶಿ ದಿಲೀಪ್ ಜಕ್ಕಪ್ಪಗೋಳ್, ಅರಣ್ಯ ಇಲಾಖೆಯ ಸಾಮಾಜಿ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ನಾವಿ, ಅಂಕೋಲಾ ಹಾಗೂ ಕಾರವಾರ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಪಿ.ವೈ. ಸಾವಂತ, ಡಾ. ಬಾಲಪ್ಪನವರ ಆನಂದಕುಮಾರ, ನರೇಗಾ ಸಹಾಯಕ ನಿರ್ದೇಶಕ ರಾಮದಾಸ ನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.