ADVERTISEMENT

ಜಾಮೀನು ಪ್ರತಿ ‍ಪಡೆದುಕೊಂಡ ಜನಾರ್ದನ ರೆಡ್ಡಿ, ಆನಂದ ಸಿಂಗ್, ನಾಗೇಂದ್ರ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2022, 16:16 IST
Last Updated 7 ಮಾರ್ಚ್ 2022, 16:16 IST
   

ಅಂಕೋಲಾ (ಉತ್ತರ ಕನ್ನಡ): ತಾಲ್ಲೂಕಿನ ಬೇಲೆಕೇರಿ ಬಂದರಿನ ಮೂಲಕ ಅಕ್ರಮವಾಗಿ ಅದಿರು ರಫ್ತು ಸಾಗಣೆ ಪ್ರಕರಣಕ್ಕೆ ಸಂಬಂಧಿಸಿ, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ, ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಮತ್ತು ಶಾಸಕ ನಾಗೇಂದ್ರ ಅವರು ಇಲ್ಲಿನ ಜೆ.ಎಂ.ಎಫ್‌.ಸಿ ನ್ಯಾಯಾಲಯಕ್ಕೆ ಸೋಮವಾರ ಖುದ್ದು ಹಾಜರಾಗಿ ಜಾಮೀನು ಪ್ರತಿಯನ್ನು ಪಡೆದುಕೊಂಡರು. ಈ ವರ್ಷ ಜ.24ರಂದು ನಿರೀಕ್ಷಣಾ ಜಾಮೀನು ಪಡೆದಿದ್ದ ಅವರಿಗೆ, ಅಂಕೋಲಾ ನ್ಯಾಯಾಲಯವು ಸೋಮವಾರ ಜಾಮೀನು ಮಂಜೂರು ಮಾಡಿತು

ಬೇಲೆಕೇರಿಯ ಬಂದರಿನಿಂದ ಮ್ಯಾಂಗನೀಸ್ ಅದಿರನ್ನು ಅಕ್ರಮವಾಗಿ ರಫ್ತು ಮಾಡಿದ ಆರೋಪದಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, 2009ರ ಜನವರಿಯಿಂದ 2010 ಮೇವರೆಗೆ ಇಲ್ಲಿನ ಬಂದರು ಮೂಲಕ ವಹಿವಾಟು ನಡೆಸಲಾದ 50 ಲಕ್ಷ ಮೆಟ್ರಿಕ್ ಟನ್ ಅದಿರಿನ ಕುರಿತು ತನಿಖೆ ನಡೆಸುವಂತೆ ಸಿ.ಬಿ.ಐ.ಗೆ ಸೂಚಿಸಿತ್ತು.

ತನಿಖೆ ಕೈಗೊಂಡ ಸಿ.ಬಿ.ಐ 12 ಆರೋಪಿಗಳ ವಿರುದ್ಧ ದೂರು ದಾಖಲಿಸಿತ್ತು. ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಆರೋಪಿಗಳು, ಸ್ಥಳೀಯ ನ್ಯಾಯಾಲಯದಲ್ಲಿ ಜಾಮೀನು ಪಡೆಯಲು ಅವಕಾಶ ಕೊಡುವಂತೆ ಮಾಡಿದ್ದ ಮನವಿಯನ್ನು ಸುಪ್ರೀಂಕೋರ್ಟ್ ಪುರಸ್ಕರಿಸಿತ್ತು. ಕಾರವಾರದ ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದ ಆರೋಪಿಗಳ ಪರ ವಕೀಲ ನಾಗರಾಜ ನಾಯಕ ವಾದ ಮಂಡಿಸಿದ್ದರು. 12 ಆರೋಪಿಗಳಲ್ಲಿ ಏಳು ಜನರಿಗೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಇದರ ಪ್ರತಿಯನ್ನು ಜನಾರ್ದನ ರೆಡ್ಡಿ, ಆನಂದ ಸಿಂಗ್ ಮತ್ತು ನಾಗೇಂದ್ರ ಸೋಮವಾರ ಪಡೆದುಕೊಂಡರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.