ADVERTISEMENT

ರಾಮನಗರದಿಂದ ಕೈಗಾಕ್ಕೆ ಜಲ್ಲಿಕಲ್ಲು ಪೂರೈಸುವ ಟ್ರಕ್‌ಗಳು: ಕದ್ರಾ ಸೇತುವೆಗೆ ಅಪಾಯ

ಗಣಪತಿ ಹೆಗಡೆ
Published 12 ನವೆಂಬರ್ 2025, 4:32 IST
Last Updated 12 ನವೆಂಬರ್ 2025, 4:32 IST
ಕದ್ರಾ ಜಲಾಶಯದ ಎದುರಿನ ರಸ್ತೆಯಲ್ಲಿ 10 ಟನ್‌ಗಿಂತ ಹೆಚ್ಚು ಭಾರದ ಸರಕು ಹೊತ್ತಿದ್ದ ಟ್ರಕ್‌ಗಳನ್ನು ತಡೆಹಿಡಿದು ನಿಲ್ಲಿಸಿರುವುದು
ಕದ್ರಾ ಜಲಾಶಯದ ಎದುರಿನ ರಸ್ತೆಯಲ್ಲಿ 10 ಟನ್‌ಗಿಂತ ಹೆಚ್ಚು ಭಾರದ ಸರಕು ಹೊತ್ತಿದ್ದ ಟ್ರಕ್‌ಗಳನ್ನು ತಡೆಹಿಡಿದು ನಿಲ್ಲಿಸಿರುವುದು   

ಕಾರವಾರ: ತಾಲ್ಲೂಕಿನ ಕದ್ರಾ ಜಲಾಶಯದ ಕೆಳಭಾಗದಲ್ಲಿರುವ ಸೇತುವೆ ಅತಿಭಾರದ ವಾಹನಗಳ ಸಚಾರದಿಂದ ಶಿಥಿಲಗೊಳ್ಳುವ ಅಪಾಯಕ್ಕೆ ಸಿಲುಕಿದೆ. ಕೈಗಾ ಅಣು ವಿದ್ಯುತ್ ಸ್ಥಾವರದ 5 ಮತ್ತು 6ನೇ ಘಟಕ ನಿರ್ಮಾಣ ಕಾಮಗಾರಿಗೆ ಇದೇ ಸೇತುವೆ ಬಳಸಿ ಸರಕುಗಳನ್ನು ಸಾಗಿಸುತ್ತಿರುವುದು ಆತಂಕ ತಂದಿದೆ.

ಅಣು ಸ್ಥಾವರ ಕಾಮಗಾರಿಗೆ ವಿವಿಧ ಸರಕುಗಳನ್ನು ಕಾರವಾರ–ಇಳಕಲ್ ರಾಜ್ಯ ಹೆದ್ದಾರಿಯ ಮೂಲಕ ಸಾಗಿಸಲಾಗುತ್ತಿದ್ದರೆ, ಟನ್‌ಗಟ್ಟಲೆ ಜಲ್ಲಿಕಲ್ಲುಗಳನ್ನು ಜೊಯಿಡಾ ತಾಲ್ಲೂಕಿನ ರಾಮನಗರ ಭಾಗದಿಂದ ಸದಾಶಿವಗಡ–ಔರಾದ್ ರಾಜ್ಯ ಹೆದ್ದಾರಯ ಮೂಲಕ ತಂದು, ಕದ್ರಾ ಮಾರ್ಗವಾಗಿ ಕೈಗಾಕ್ಕೆ ಸಾಗಿಸಲಾಗುತ್ತಿದೆ.

‘ಸೇತುವೆ ಮೇಲೆ ಏಕಕಾಲಕ್ಕೆ 10 ಟನ್‌ಗಿಂತ ಹೆಚ್ಚು ಭಾರದ ವಾಹನ ಸಾಗಿದರೆ ಅಪಾಯ ಉಂಟಾಗಬಹುದು. ಈ ಬಗ್ಗೆ ಎಚ್ಚರಿಕೆ ಫಲಕ ಅಳವಡಿಸಿದ್ದಾರೆ. ಆದರೂ, ಅತಿಭಾರದ ವಾಹನಗಳು ಸೇತುವೆ ಮೇಲೆ ಸಾಗುತ್ತಿವೆ. ಪ್ರತಿ ವಾಹನ ಕನಿಷ್ಠ 30ರಿಂದ 40 ಟನ್‍ಗೂ ಹೆಚ್ಚು ಭಾರ ಹೊತ್ತು ಸಾಗುತ್ತಿರುವ ಶಂಕೆ ಇದೆ’ ಎನ್ನುತ್ತಾರೆ ಸ್ಥಳೀಯರು.

ADVERTISEMENT

‘ಮಲ್ಲಾಪುರ, ವಿರ್ಜೆ, ಕುರ್ನಿಪೇಟ್ ಸೇರಿದಂತೆ ಈ ಭಾಗದ ಹತ್ತಾರು ಗ್ರಾಮಸ್ಥರಿಗೆ ಕಾರವಾರ, ಗೋವಾ ಸಂಪರ್ಕಿಸಲು ಕದ್ರಾ ಮಾರ್ಗದ ರಸ್ತೆ ಹೆಚ್ಚು ಅನುಕೂಲ. ಈ ಮಾರ್ಗದ ಕದ್ರಾ ಜಲಾಶಯದ ಸೇತುವೆ ಅತಿಭಾರದ ವಾಹನಗಳ ಓಡಾಟದಿಂದ ಅಪಾಯಕ್ಕೆ ಸಿಲುಕುತ್ತಿದೆ. ಮಳೆಗಾಲದಲ್ಲಿ ಜಲಾಶಯದಿಂದ ನೀರು ಹರಿಬಿಟ್ಟಾಗ ಸೇತುವೆಗೆ ಧಕ್ಕೆ ಬರುತ್ತಲೇ ಇರುತ್ತದೆ. ಸಣ್ಣಪುಟ್ಟ ದುರಸ್ತಿ ಕೆಲಸ ನಡೆಯುತ್ತದೆ. ಆದರೆ, ಅತಿ ಭಾರಕ್ಕೆ ಸೇತುವೆ ಮುರಿದರೆ ಸಂಚಾರಕ್ಕೆ ಪರ್ಯಾಯ ಮಾರ್ಗ ಕಷ್ಟ’ ಎನ್ನುತ್ತಾರೆ ಮಲ್ಲಾಪುರ ಗ್ರಾಮ ಪಂಚಾಯಿತಿ ಸದಸ್ಯ ಚಂದ್ರಶೇಖರ ಬಾಂದೇಕರ.

‘ಕೈಗಾ ಅಣು ಸ್ಥಾವರ ಘಟಕ ಕಾಮಗಾರಿಗೆ ಸಾಮಗ್ರಿ ಪೂರೈಸುತ್ತಿರುವ ಅತಿಭಾರದ ವಾಹನಗಳಿಂದ ಕಾರವಾರ–ಇಳಕಲ್ ಮಾರ್ಗ ಹದಗೆಟ್ಟಿದೆ. ಅಲ್ಲಿಯೂ ಆಗಾಗ ವಾಹನ ಹುಗಿದು ನಿಲ್ಲುತ್ತಿದೆ. ಕದ್ರಾ ಸೇತುವೆಗೆ ಅಪಾಯ ಎದುರಾದರೆ ಮಲ್ಲಾಪುರ ಭಾಗ ಸಂಪರ್ಕ ಕಡಿದುಕೊಳ್ಳಬೇಕಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಕದ್ರಾ ಜಲಾಶಯದ ಕೆಳಭಾಗದ ಸೇತುವೆ ಮೇಲೆ 10 ಟನ್‌ಗಿಂತ ಹೆಚ್ಚು ಭಾರದ ವಾಹನ ಓಡಾಡದಂತೆ ಎಚ್ಚರಿಕೆ ಫಲಕ ಹಿಂದಿನಿಂದಲೂ ಇದೆ. ಭಾರದ ವಾಹನಗಳನ್ನು ಭದ್ರತಾ ಸಿಬ್ಬಂದಿ ತಡೆದು ಹಿಂದಕ್ಕೆ ಕಳಿಸುತ್ತಿದ್ದಾರೆ
ಶ್ರೀಧರ ಕಲಗಾರೆ ಕೆಪಿಸಿಎಲ್ ಕಾರ್ಯನಿರ್ವಾಹಕ ಎಂಜಿನಿಯರ್

ಸಂಚಾರ ಅವಕಾಶಕ್ಕೆ ಒತ್ತಡ

‘10 ಟನ್‌ಗಿಂತ ಹೆಚ್ಚು ಭಾರದ ವಾಹನ ಓಡಾಟಕ್ಕೆ ಅನುಮತಿ ಇಲ್ಲದಿದ್ದರೂ ಅತಿಭಾರದ ಟ್ರಕ್‌ಗಳನ್ನು ಕದ್ರಾ ಮಾರ್ಗವಾಗಿ ಬಿಡುವಂತೆ ಪೊಲೀಸ್ ಅಧಿಕಾರಿಗಳು ರಾಜಕೀಯ ಮುಖಂಡರ ಮೂಲಕ ಕರೆ ಮಾಡಿಸಿ ಒತ್ತಡ ಹೇರುವ ಕೆಲಸ ನಡೆಯುತ್ತಿದೆ’ ಎಂದು ಕೆಪಿಸಿಎಲ್ ಅಧಿಕಾರಿಯೊಬ್ಬರು ಹೇಳಿದರು. ‘ಹಲವು ಬಾರಿ ಅತಿಭಾರದ ವಾಹನಗಳು ಇಲ್ಲಿ ಸಾಗಿವೆ. ಬಹುತೇಕ ಬಾರಿ ಸಾಲುಸಾಲಾಗಿ ಐದಾರು ವಾಹನಗಳು ಸಾಗಲು ಪ್ರಯತ್ನಿಸುತ್ತಿವೆ. ಇಂತಹ ಸಂದರ್ಭದಲ್ಲಿ ತಡೆದು ವಾಪಸ್ ಕಳಿಸುತ್ತಿದ್ದೇವೆ. ಜಲ್ಲಿಕಲ್ಲುಗಳನ್ನು ಕೈಗಾಕ್ಕೆ ಸಾಗಿಸಲು ಕಾರವಾರಕ್ಕೆ ಸಾಗಿ ಅಲ್ಲಿಂದ ಕೆರವಡಿ ಮಾರ್ಗದ ಮೂಲಕ ಕೈಗಾಕ್ಕೆ ಪೂರೈಸಲು 70 ಕಿ.ಮೀ. ಸುತ್ತು ಬಳಸಬೇಕು ಎಂಬ ಕಾರಣಕ್ಕೆ ಇದೇ ಮಾರ್ಗ ಆಯ್ದಕೊಳ್ಳಲು ಪ್ರಯತ್ನ ನಡೆದಿದೆ. ಒಂದು ವೇಳೆ ಸೇತುವೆ ಕುಸಿದರೆ ಅಣೆಕಟ್ಟೆಯ ಮೇಲೆ ವಾಹನಗಳ ಸಂಚಾರಕ್ಕೆ ಅವಕಾಶ ನೀಡಬೇಕಾದ ಸ್ಥಿತಿ ಬರುತ್ತದೆ. ಆದರೆ ಸದ್ಯದ ಸ್ಥಿತಿಯಲ್ಲಿ ಇದು ಕಷ್ಟಸಾಧ್ಯ’ ಎಂದೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.