ADVERTISEMENT

ಕೈಗಾ: ಜನಜಾಗೃತಿ ಸಮಾವೇಶ 17ಕ್ಕೆ

ಅಣು ವಿದ್ಯುತ್ ಸ್ಥಾವರದ ಐದು, ಆರನೇ ಘಟಕವನ್ನು ವಿರೋಧಿಸಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2019, 14:43 IST
Last Updated 14 ನವೆಂಬರ್ 2019, 14:43 IST
ಶಾಂತ ಬಾಂದೇಕರ
ಶಾಂತ ಬಾಂದೇಕರ   

ಕಾರವಾರ: ಕೈಗಾ ಅಣು ವಿದ್ಯುತ್ ಸ್ಥಾವರದ ಐದು ಹಾಗೂ ಆರನೇ ಘಟಕಗಳ ಸ್ಥಾಪನೆ ವಿರೋಧಿಸಿ ನ.17ರಂದು ತಾಲ್ಲೂಕಿನ ಮಲ್ಲಾಪುರದಲ್ಲಿ ಜನಜಾಗೃತಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದುಅಣು ವಿದ್ಯುತ್ ಸ್ಥಾವರದ ಐದು ಮತ್ತು ಆರನೇ ಘಟಕ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಶಾಂತ ಬಾಂದೇಕರ್ ಹೇಳಿದರು.

ಅವರು ನಗರದಲ್ಲಿ ಗುರುವಾರಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮಾವೇಶದ ಕುರಿತು ಮಾಹಿತಿ ನೀಡಿದರು.

‘ಭಾರತೀಯ ಅಣು ವಿದ್ಯುತ್ಪ್ರಾಧಿಕಾರವು ಕೈಗಾದಲ್ಲಿ ತಲಾ 700 ಮೆಗಾವಾಟ್ ಸಾಮರ್ಥ್ಯದ ಎರಡು ಘಟಕಗಳ ನಿರ್ಮಾಣಕ್ಕೆ ಕೇಂದ್ರ ಪರಿಸರ ಅರಣ್ಯ ಹಾಗೂ ಹವಾಮಾನ ಬದಲಾವಣೆ ಮಂತ್ರಾಲಯ ಪರವಾನಗಿ ನೀಡಿದೆ. ಇದು ದುರದೃಷ್ಟಕರ. ಸಮೀಕ್ಷೆ ಪ್ರಕಾರ 2010ರಿಂದ 2013ರವರೆಗೆ ಕೈಗಾ ಯೋಜನೆಯ ಸುತ್ತಮುತ್ತಲಿನ ಹಳ್ಳಿಗಳಲ್ಲಿ 316 ವಿವಿಧ ಬಗೆಯ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗಿವೆ. ಇನ್ನು ಮುಂದೆ ಇದು ಮೂರು ಪಟ್ಟು ಜಾಸ್ತಿಯಾಗುವ ಸಂಭವವಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

‘ಕೈಗಾ ಘಟಕದ ವಿಸ್ತರಣೆಯು ಮಾನವ ಕುಲಕ್ಕೆ ಕಂಟಕವಾಗಿದ್ದು, ಇದನ್ನು ವಿರೋಧಿಸಿ ಜನ ಜಾಗೃತಿ ಮೂಡಿಸಲು ಈ ಸಮಾವೇಶ ನಡೆಯಲಿದೆ. ಇದರಲ್ಲಿ ಶಿರಸಿಯ ಸ್ವರ್ಣವಲ್ಲಿಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ, ಉಡುಪಿ ಪೇಜಾವರಮಠದ ವಿಶ್ವೇಶ ತೀರ್ಥ ಸ್ವಾಮೀಜಿ, ಸೋದೆ ವಾದಿರಾಜ ಮಠದ ವಿಶ್ವವಲ್ಲಭ ತೀರ್ಥ ಸ್ವಾಮಿ, ಭಟ್ಟಾಕಲಂಕ ಭಟ್ಟಾಕರ ಪಟ್ಟಾಚಾರ್ಯ, ರಾಮಕೃಷ್ಣಾಶ್ರಮದ ಭವೇಶಾನಂದ ಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಬೆಂಗಳೂರು ವಿಶ್ವ ವಿದ್ಯಾಲಯದ ವಿಷಯ ತಜ್ಞ ಪಿ.ವಿಷ್ಣು ಕಾಮತ್, ಪರಿಸರ ತಜ್ಞ ಹಾಗೂ ವಿಜ್ಞಾನ ಲೇಖಕ ನಾಗೇಶ ಹೆಗಡೆ, ಅಣುವಿದ್ಯುತ್ ತಜ್ಞ ವೈ.ಬಿ.ರಾಮಕೃಷ್ಣ, ಭಾರತೀಯ ವಿಜ್ಞಾನ ಮಂದಿರದ ಟಿ.ವಿ.ರಾಮಚಂದ್ರ, ಇಂಧನ ತಜ್ಞ ಶಂಕರ ಶರ್ಮಾ, ಪಶ್ಚಿಮ ಘಟ್ಟ ಉಳಿಸಿ ಅಭಿಯಾನದ ಸಂಚಾಲಕ ಬಿ.ಎಂ.ಕುಮಾರಸ್ವಾಮಿ ಮುಂತಾದ ಗಣ್ಯರು ಉಪಸ್ಥಿತರಿರಲಿದ್ದಾರೆ. ಪಕ್ಷಾತೀತವಾಗಿ ಎಲ್ಲ ರಾಜಕೀಯ ಮುಖಂಡರು ಪಾಲ್ಗೊಳ್ಳುತ್ತಾರೆ ಎಂಬ ಭರವಸೆಯಿದೆ. ಪರಿಸರವಾದಿಗಳು, ನ್ಯಾಯವಾದಿಗಳು, ಸಾಹಿತಿಗಳು, ವಿವಿಧ ಸಂಘಟನೆಗಳ ಕಾರ್ಯಕರ್ತರುಭಾಗಿಯಾಗಲಿದ್ದಾರೆ’ ಎಂದರು.

ಗೋಟೆಗಾಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸುಲಕ್ಷಾ ಪೆಡ್ನೇಕರ್ ಹಾಗೂ ಉಪಾಧ್ಯಕ್ಷ ಪೂರ್ಣಾನಂದ, ಪ್ರಕಾಶ ಥಾಮ್ಸೆ, ಸಂತೋಷ ಗೌಡ, ಸಮಿತಿ ಕಾರ್ಯದರ್ಶಿ ರಾಮದಾಸ ನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.