ADVERTISEMENT

ಕೈಗಾದಲ್ಲಿ ಇಂದು ಅಣಕು ಕಾರ್ಯಾಚರಣೆ

ರಕ್ಷಣಾ ಉಪಕರಣ ವೀಕ್ಷಣೆ: ಆತಂಕ ಪಡದಂತೆ ಜಿಲ್ಲಾಧಿಕಾರಿ ಭರವಸೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 5:09 IST
Last Updated 11 ಡಿಸೆಂಬರ್ 2025, 5:09 IST
ಕಾರವಾರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಎನ್‌ಡಿಆರ್‌ಎಫ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಗೆ ಬಳಸುವ ಉಪಕರಣಗಳ ಕುರಿತು ವಿವರಣೆ ನೀಡಿದರು. ರಾಷ್ಟ್ರೀಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸದಸ್ಯ ದಿನೇಶ ಕುಮಾರ್ ಅಸ್ವಾಲ್, ಜಿಲ್ಲಾಧಿಕಾರಿ ಕೆ.ಲಕ್ಷ್ಮಪ್ರಿಯಾ ಇತರರು ಮಾಹಿತಿ ಪಡೆದರು.
ಕಾರವಾರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಎನ್‌ಡಿಆರ್‌ಎಫ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಗೆ ಬಳಸುವ ಉಪಕರಣಗಳ ಕುರಿತು ವಿವರಣೆ ನೀಡಿದರು. ರಾಷ್ಟ್ರೀಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸದಸ್ಯ ದಿನೇಶ ಕುಮಾರ್ ಅಸ್ವಾಲ್, ಜಿಲ್ಲಾಧಿಕಾರಿ ಕೆ.ಲಕ್ಷ್ಮಪ್ರಿಯಾ ಇತರರು ಮಾಹಿತಿ ಪಡೆದರು.   

ಕಾರವಾರ: ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ವಿಕಿರಣ ಸೋರಿಕೆ ಉಂಟಾದರೆ ಪರಿಸ್ಥಿತಿ ಹೇಗೆ ನಿಭಾಯಿಸಬೇಕು ಎಂಬ ಕುರಿತು ಗುರುವಾರ ಅಣಕು ಕಾರ್ಯಾಚರಣೆ ನಡೆಯಲಿದೆ. ಕಾರ್ಯಾಚರಣೆಗೆ ಪೂರ್ವಭಾವಿಯಾಗಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ರಕ್ಷಣಾ ಉಪಕರಣಗಳ ಪ್ರದರ್ಶನ ನಡೆಸಿತು.

ಅಣು ವಿಕಿರಣ ಸೋರಿಕೆಯಾದ ಪ್ರದೇಶದಲ್ಲಿನ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಕೈಗೊಳ್ಳಲು ಬಳಸುವ ಸಾಮಗ್ರಿಗಳ ಜೊತೆಗೆ ನೆರೆ ಹಾವಳಿ, ಭೂಕುಸಿತ, ಇತರ ಪ್ರಾಕೃತಿಕ ಅವಘಡಗಳ ವೇಳೆ ಸಂತ್ರಸ್ತರನ್ನು ರಕ್ಷಣೆ ಮಾಡುವ ವಿಧಾನಗಳ ಬಗ್ಗೆ ಎನ್‌ಡಿಆರ್‌ಎಫ್ ಸಿಬ್ಬಂದಿ ಪ್ರಾತ್ಯಕ್ಷಿಕೆ ಮೂಲಕ ವಿವರಣೆ ನೀಡಿದರು.

ಅಣು ಸ್ಥಾವರದಲ್ಲಿ ನಡೆಯುವ ಅಣಕು ಕಾರ್ಯಾಚರಣೆಯ ಸಿದ್ಧತೆ ಕುರಿತು ಪೂರ್ವಭಾವಿ ಸಭೆ ನಡೆಸಿದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸದಸ್ಯ ದಿನೇಶ ಕುಮಾರ್ ಅಸ್ವಾಲ್, ಹಿರಿಯ ಸಲಹೆಗಾರ ಮೇಜರ್ ಜನರಲ್ ಅಜಯ ಕುಮಾರ್ ವರ್ಮಾ, ಸಿಎಂಜಿ ಸದಸ್ಯ ಕಾರ್ಯದರ್ಶಿ ಶರಣ ಸೆತ್ ಕೂಡ ರಕ್ಷಣಾ ಉಪಕರಣಗಳ ಪ್ರದರ್ಶನ ವೀಕ್ಷಣೆ ನಡೆಸಿದರು.

ADVERTISEMENT

ಎನ್‌ಡಿಆರ್‌ಎಫ್‌ನ 10ನೇ ಬೆಟಾಲಿಯನ್‌ನ 30ಕ್ಕೂ ಹೆಚ್ಚು ಸಿಬ್ಬಂದಿ ಹಾಗೂ ಎಸ್‌ಡಿಆರ್‌ಎಫ್ ಸಿಬ್ಬಂದಿ ಹಲವು ಬಗೆಯ ರಕ್ಷಣಾ ಉಪಕರಣಗಳ ಬಗ್ಗೆ ವಿವರಣೆ ನೀಡಿದರು.

ರಕ್ಷಣಾ ಉಪಕರಣಗಳ ವೀಕ್ಷಣೆ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ, ‘ಕೈಗಾದಲ್ಲಿ ಅಣು ವಿದ್ಯುತ್ ಸ್ಥಾವರ ಇರುವುದರಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ನಿರ್ದೇಶನ ಆಧರಿಸಿ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜಿಲ್ಲೆಯು ಯಾವ ರೀತಿ ಸನ್ನದ್ಧವಾಗಿದೆ ಎಂಬುದರ ಬಗ್ಗೆ ಅಣಕು ಕಾರ್ಯಾಚರಣೆ ಮಾಡಲಾಗುತ್ತಿದೆ’ ಎಂದರು.

ಕೈಗಾ ಮತ್ತು ಸುತ್ತಮುತ್ತ ನಡೆಯುವ ಅಣಕು ಕಾರ್ಯಾಚರಣೆಯು ಸುರಕ್ಷತೆಯನ್ನು ಖಾತ್ರಿಪಡಿಸುವ ಕಾರ್ಯಕ್ರಮವಾಗಿದ್ದು ಜನರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ
ಕೆ.ಲಕ್ಷ್ಮಿಪ್ರಿಯಾ, ಜಿಲ್ಲಾಧಿಕಾರಿ

‘ಅಣು ವಿಕಿರಣ ಸೋರಿಕೆಯಾದ ಅಣಕು ಸನ್ನಿವೇಶ ಸೃಷ್ಟಿಸಿ ಜನರನ್ನು ಸ್ಥಳಾಂತರಿಸುವ, ಔಷಧೋಪಚಾರ, ಆಹಾರ ಸಾಮಗ್ರಿ ಒದಗಿಸುವ ಕಾರ್ಯಾಚರಣೆ ನಡೆಸಲಾಗುತ್ತದೆ. ರಕ್ಷಣಾ ಪಡೆಗಳ ಜೊತೆಗೆ 34 ಇಲಾಖೆಗಳು ಕೈಜೋಡಿಸಲಿವೆ’ ಎಂದರು.

ಎನ್‌ಡಿಆರ್‌ಎಫ್ ಕಮಾಂಡೆಂಟ್ ವಿ.ವಿ.ಎನ್ ಪ್ರಸನ್ನ, ಕೈಗಾ ಅಣು ವಿದ್ಯುತ್ ಸ್ಥಾವರದ ಸ್ಥಳ ನಿರ್ದೇಶಕ ಬಿ.ವಿನೋದ ಕುಮಾರ್, ಜಿಲ್ಲಾ ಪಂಚಾಯಿತಿ ಸಿಇಒ ಡಾ.ದಿಲೀಷ್ ಶಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್, ಡಿಸಿಎಫ್ ಸಿ.ರವಿಶಂಕರ, , ಉಪ ವಿಭಾಗಾಧಿಕಾರಿ ಶ್ರವಣ ಕುಮಾರ್, ತರಬೇತಿ ನಿರತ ಐಎಎಸ್ ಅಧಿಕಾರಿ ಜೂಫಿಶಾನ್ ಹಕ್, ಹೆಚ್ಚುವರಿ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ, ಇತರರು ಪಾಲ್ಗೊಂಡಿದ್ದರು.