
ಕಾರವಾರ: ತಾಲ್ಲೂಕಿನ ಕೈಗಾದಲ್ಲಿನ ಅಣು ವಿದ್ಯುತ್ ಸ್ಥಾವರದಿಂದ ವಿಕಿರಣ ಸೋರಿಕೆಯಾದರೆ ಗತಿ ಏನು? ಎಂಬ ಆತಂಕಭರಿತ ಪ್ರಶ್ನೆ ಆ ಪ್ರದೇಶದ ಸುತ್ತಮುತ್ತಲಿನವರಲ್ಲಿ ಆಗಾಗ ಕಾಡುತ್ತಿರುತ್ತದೆ. ಜನರ ಭಯ ದೂರ ಮಾಡುವ ಜೊತೆಗೆ ಸುರಕ್ಷತೆ ವ್ಯವಸ್ಥೆಗಳ ಪರಿಶೀಲನೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮಾರ್ಗದರ್ಶನದೊಂದಿಗೆ ಜಿಲ್ಲಾಡಳಿತವು ಗುರುವಾರ ನಡೆಸಿದ ಕಲ್ಪಿತ ಕಾರ್ಯಾಚರಣೆ ಯಶಸ್ವಿಯಾಯಿತು.
ಅಣು ಸ್ಥಾವರದಿಂದ ವಿಕಿರಣ ಸೋರಿಕೆಯಾದ ಘಟನೆಯನ್ನು ನಸುಕಿನ ಜಾವವೇ ಕಲ್ಪಿಸಲಾಯಿತು. ರಕ್ಷಣಾ ಪಡೆಗಳು, ವಿಪತ್ತು ನಿರ್ವಹಣಾ ಪಡೆ ಸೇರಿದಂತೆ ಎಲ್ಲ ಇಲಾಖೆಗಳಿಗೆ ಸುರಕ್ಷತಾ ಕ್ರಮ ಅನುಸರಿಸಲು ಸೂಚನೆ ನೀಡಲಾಯಿತು.
ಹರ್ಟುಗಾ, ಬೊಳ್ವೆ, ನಗೆಕೋವೆ, ಕುಚೆಗಾರ, ಶಿರ್ವೆ, ಕೆರವಡಿ, ದೇವಳಮಕ್ಕಿ ಗ್ರಾಮಗಳನ್ನು ಪ್ರಭಾವಿತ ಗ್ರಾಮಗಳೆಂದು ಗುರುತಿಸಿ ಈ ಕಾರ್ಯಾಚರಣೆ ನಡೆಸಲಾಯಿತು.
ವಿಕಿರಣ ಸೋರಿಕೆಯ ಘಟನೆ ಕಲ್ಪಿಸುತ್ತಿದ್ದಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ತೆರೆದಿದ್ದ ನಿರ್ವಹಣಾ ಕೇಂದ್ರದಲ್ಲಿ ಜಿಲ್ಲಾಧಿಕಾರಿ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ತುರ್ತು ರಕ್ಷಣಾ ಕಾರ್ಯಾಚರಣೆಗೆ ಸೂಚನೆ ನೀಡಿದರು. ಪ್ರಭಾವಿತ ಗ್ರಾಮಗಳಲ್ಲಿನ ಜನರನ್ನು ಬಸ್, ಇತರ ವಾಹನಗಳ ಮೂಲಕ ಸ್ಥಳಾಂತರಿಸುವ ಕೆಲಸ ನಡೆಯಿತು.
ವಿಕಿರಣ ಸೋರಿಕೆಯಿಂದ ಬಾಧಿತರಾದ ಜನರನ್ನು ಕದ್ರಾದಲ್ಲಿ ಎನ್‌ಡಿಆರ್‌ಎಫ್ ನಿರ್ಮಿಸಿದ್ದ ವಿಕಿರಣ ನಿವಾರಣೆಯ ತಾತ್ಕಾಲಿಕ ಕೇಂದ್ರಕ್ಕೆ ಕರೆತರಲಾಯಿತು. ಅಲ್ಲಿ ವಿಕಿರಣ ಪ್ರಭಾವ ತಗ್ಗಿಸುವ ಮಾತ್ರೆಗಳನ್ನು ಜನರಿಗೆ ನೀಡಲಾಯಿತು. ತುರ್ತು ಚಿಕಿತ್ಸೆ ಒದಗಿಸಿ, ಅಲ್ಲಿಂದ ಸುರಕ್ಷಿತ ತಾಣಗಳಾದ ಸಿದ್ಧರ, ಜೊಯಿಡಾದ ಕುಂಬಾರವಾಡದಲ್ಲಿ ತೆರೆದಿದ್ದ ಆರೈಕೆ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು.
ಕೈಗಾ ಮತ್ತು ಮಲ್ಲಾಪುರ ಭಾಗಕ್ಕೆ ಸಂಪರ್ಕಿಸುವ ಎಲ್ಲ ಮಾರ್ಗಗಳಲ್ಲಿ ವಾಹನ ಸಂಚಾರವನ್ನು ಪೊಲೀಸ್ ಸಿಬ್ಬಂದಿ ತಡೆದಿದ್ದರು. ಕಾರ್ಯಾಚರಣೆ ಪೂರ್ಣಗೊಳ್ಳುವವರೆಗೆ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸದಸ್ಯ ಡಿ.ಕೆ.ಆಸ್ವಾಲ್, ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ, ಕೈಗಾ ಅಣು ಸ್ಥಾವರದ ಸ್ಥಳ ನಿರ್ದೇಶಕ ಬಿ.ವಿನೋದ ಕುಮಾರ್, ಜಿಲ್ಲಾ ಪಂಚಾಯಿತಿ ಸಿಇಒ ಡಾ.ದಿಲೀಷ್ ಶಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್, ಇತರ ಅಧಿಕಾರಿಗಳು ಕಾರ್ಯಾಚರಣೆಯ ಪ್ರತಿ ಹಂತದ ಮೇಲೆ ನಿಗಾ ಇರಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.