ADVERTISEMENT

ಕಳಚೆ: ಕೆರೆ ಕಟ್ಟಿದರೂ ಕುಸಿಯುತ್ತಿದೆ ಗುಡ್ಡ!

ಭಯಾನಕವಾಗಿ ಭೂ ಕುಸಿತವಾಗಿದ್ದ ಯಲ್ಲಾಪುರ ತಾಲ್ಲೂಕಿನ ಕಳಚೆ ಗ್ರಾಮಸ್ಥರಿಗೆ ಚಿಂತೆ

ಸದಾಶಿವ ಎಂ.ಎಸ್‌.
Published 21 ಫೆಬ್ರುವರಿ 2022, 19:30 IST
Last Updated 21 ಫೆಬ್ರುವರಿ 2022, 19:30 IST
ಕಳಚೆಯಲ್ಲಿ ಕೆಲವು ದಿನಗಳ ಹಿಂದೆ ಕೆರೆ ಮತ್ತು ತೋಟದ ಪ್ರದೇಶವು ಸಂಪೂರ್ಣವಾಗಿ ಕುಸಿದಿರುವುದು
ಕಳಚೆಯಲ್ಲಿ ಕೆಲವು ದಿನಗಳ ಹಿಂದೆ ಕೆರೆ ಮತ್ತು ತೋಟದ ಪ್ರದೇಶವು ಸಂಪೂರ್ಣವಾಗಿ ಕುಸಿದಿರುವುದು   

ಕಾರವಾರ: ಕಳೆದ ಜುಲೈನಲ್ಲಿ ಭೂಕುಸಿತವಾಗಿದ್ದ ಕಳಚೆ ಗ್ರಾಮದಲ್ಲಿ ಈಗ ಮತ್ತೆ ಗುಡ್ಡ ಕುಸಿದಿದೆ. ರೈತರೊಬ್ಬರು ಸಣ್ಣ ಕೆರೆಯಲ್ಲಿ ನೀರು ಸಂಗ್ರಹಿಸಿದ್ದರು. ಆ ಪ್ರದೇಶ 30–40 ಅಡಿಕೆ ಮರಗಳೊಂದಿಗೆ ಹಳ್ಳಕ್ಕೆ ಜಾರಿದೆ.

ಈ ಬೆಳವಣಿಗೆಯಿಂದಾಗಿ ಗ್ರಾಮಸ್ಥರು ಚಿಂತೆಗೀಡಾಗಿದ್ದಾರೆ. ‘ಮುಂದಿನ ಮಳೆಗಾಲದಲ್ಲೂ ಇದೇ ಸ್ಥಿತಿಯಾದರೆ ನಾವೆಲ್ಲಿಗೆ ಹೋಗಬೇಕು?’ ಎಂಬ ಯೋಚನೆ ಅವರನ್ನು ಕಾಡುತ್ತಿದೆ.

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮರುದಿನವೇ ಈ ಗ್ರಾಮಕ್ಕೆ ಭೇಟಿ ನೀಡಿದ್ದರು. ಇಡೀ ಗ್ರಾಮ ಸ್ಥಳಾಂತರಿಸಲು ಅಧಿಕಾರಿಗಳಿಗೆ ಆದೇಶಿಸಿದ್ದರು. ಆ ನಂತರದ ಬೆಳವಣಿಗೆಗಳ ಮಾಹಿತಿಯಿಲ್ಲ ಎಂದು ಗ್ರಾಮಸ್ಥರು ಬೇಸರಿಸುತ್ತಾರೆ.

ADVERTISEMENT

ಯಲ್ಲಾಪುರ ತಾಲ್ಲೂಕಿನ ವಜ್ರಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳಚೆಯಲ್ಲಿ ಜುಲೈ 22, 23ರಂದು ಭಾರಿ ಪ್ರಮಾಣದಲ್ಲಿ ಬೆಟ್ಟ, ಗುಡ್ಡ ಕುಸಿದಿದ್ದವು. ಊರಿನ ಚಿತ್ರಣವೇ ಬದಲಾಗಿತ್ತು. ಅಂದು ಪ್ರವಾಹ ಕಂಡಿದ್ದ ಗ್ರಾಮದಲ್ಲಿ ಈಗ ಕುಡಿಯುವ ನೀರಿಗೂ ಸಮಸ್ಯೆ ಎದುರಾಗಿದೆ.

ಇಲ್ಲಿ ಪ್ರಕೃತಿ ವಿಕೋಪಕ್ಕೂ ಮೊದಲು, ನೈಸರ್ಗಿಕವಾಗಿ ಸಿಗುತ್ತಿದ್ದ ನೀರನ್ನೇ ಮನೆಗಳಲ್ಲಿ ಬಳಸಲಾಗುತ್ತಿತ್ತು. ಈಗ ಅಂಥ ಬಹುತೇಕ ಜಲಮೂಲಗಳು ನಾಶವಾಗಿವೆ. ಗುಡ್ಡಗಳೇ ಕೊಚ್ಚಿಕೊಂಡು ಹೋಗಿದ್ದು ಮತ್ತು ನೀರಿನ ಹರಿವು ಬದಲಾದ್ದರಿಂದ ಹಳ್ಳಗಳು ಒಣಗಿವೆ. ಕಳಚೆಯ ಒಂದು ಭಾಗದಲ್ಲಿ ಕೆಲವರು ತಲಾ ₹ 10 ಸಾವಿರ ಖರ್ಚು ಮಾಡಿ ಪೈಪ್‌ಲೈನ್ ಅಳವಡಿಸಿಕೊಂಡಿದ್ದಾರೆ. ಮತ್ತೊಂದು ಕಡೆಗೆ ಅದೂ ಸಾಧ್ಯವಾಗಿಲ್ಲ. ಇದರಿಂದ ಬೇಸತ್ತ ಕೆಲವರು ಊರು ಬಿಟ್ಟು ಯಲ್ಲಾಪುರದಲ್ಲಿ ವಾಸವಿದ್ದಾರೆ.

ಮುನ್ನೆಚ್ಚರಿಕೆ ಅಗತ್ಯ

ಕಳಚೆಯಲ್ಲಿ ಮತ್ತೆ ಭೂ ಕುಸಿತವಾಗಿರುವ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿವೃತ್ತ ಹಿರಿಯ ವಿಜ್ಞಾನಿ ಡಾ.ಜಿ.ವಿ.ಹೆಗಡೆ, ‘ಹಳ್ಳದ ಕಡೆ ಇಳಿಜಾರಿನಲ್ಲಿ, ಮೇಲೆ ಕಾಲುವೆ ಮೂಲಕ ನೀರು ಹರಿಸಿದ್ದು, ಕೆಳಗೆ ಹಳ್ಳ ಇರುವ ಕಾರಣ ಮಣ್ಣು ಒದ್ದೆಯಾಗಿದೆ. ಇಂಥ ಕಡೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ’ ಎಂದು ತಿಳಿಸಿದ್ದಾರೆ.

* ಸಂತ್ರಸ್ತರಿಗೆ ಪರ್ಯಾಯ ಜಾಗ ಕೊಡಲಾಗದಿದ್ದರೆ ಅರಣ್ಯ ಇಲಾಖೆಯಿಂದ ಈ ಭೂಭಾಗವನ್ನು ವನ್ಯಜೀವಿ ವಲಯಕ್ಕೆ ಸೇರಿಸಿ ಪರಿಹಾರ ನೀಡಲಿ.

- ವೆಂಕಟ್ರಮಣ ಬೆಳ್ಳಿ, ಸ್ಥಳೀಯ ಮುಖಂಡ, ಕಳಚೆ ಗ್ರಾಮ

* ವನ್ಯಜೀವಿ ವಲಯದ ಮಾದರಿಯಲ್ಲಿ ಪರಿಹಾರಕ್ಕೆ ಸ್ಥಳೀಯರು ಮನವಿ ಮಾಡಿದ್ದು, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಿಂದ ‍ಪ್ರಸ್ತಾವ ಬಂದಿದೆ. ಅದನ್ನು ಸರ್ಕಾರಕ್ಕೆ ಕಳುಹಿಸಲಾಗುವುದು.

- ಮುಲ್ಲೈ ಮುಗಿಲನ್, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.