ಕಾರವಾರ: ಕಾಳಿನದಿಯ ಹಳೆಯ ಸೇತುವೆ ಕುಸಿದು ತಿಂಗಳ ಬಳಿಕ ಅವಶೇಷ ತೆರವು ಪ್ರಕ್ರಿಯೆ ಆರಂಭಗೊಂಡಿದ್ದರೂ ಒಂದು ವಾರದಿಂದ ಸೇತುವೆಯ ಅಲ್ಪಭಾಗ ಮಾತ್ರ ತೆರವುಗೊಳಿಸಲಾಗಿದೆ. ಪ್ರಕ್ರಿಯೆಯ ನಿಧಾನಗತಿ ಮತ್ತು ಸುರಕ್ಷತೆಯ ಬಗ್ಗೆಯೂ ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ.
ಆ.7ರ ತಡರಾತ್ರಿ ಲಾರಿಯೊಂದರ ಸಮೇತ ಸೇತುವೆಯು ಭಾಗಶಃ ನದಿಗೆ ಕುಸಿದು ಬಿದ್ದಿತ್ತು. ದುರ್ಘಟನೆಯಲ್ಲಿ ಜೀವಹಾನಿ ಸಂಭವಿಸದಿದ್ದರೂ ನಿತ್ಯ ನೂರಾರು ಜನರು, ವಾಹನಗಳು ಸಂಚರಿಸಲು ಆಧಾರವಾಗಿದ್ದ ಸೇತುವೆ ದಿಢೀರನೆ ಕುಸಿದು ನೀರುಪಾಲಾಗಿದ್ದು ಜನರನ್ನು ಆತಂಕಕ್ಕೆ ದೂಡಿತು. ಸಂಚಾರಕ್ಕೆ ಆಸರೆಯಾಗಿ ಹೊಸ ಸೇತುವೆ ಇದ್ದರೂ ಹಳೆಯ ಸೇತುವೆಯ ಕುಸಿತದ ಆಘಾತದಿಂದ ಜನರು ಹೊರಬಂದಿಲ್ಲ.
1983ರಲ್ಲಿ ನಿರ್ಮಾಣ ಪೂರ್ಣಗೊಂಡು ಬಳಕೆಗೆ ಲಭಿಸಿದ್ದ ಸೇತುವೆ 41 ವರ್ಷ ಆಯಸ್ಸಿಗೆ ತನ್ನ ಸೇವೆ ಮುಗಿಸಿದೆ. 665 ಮೀ ಉದ್ದದ ಸೇತುವೆಯ 300 ಮೀ.ನಷ್ಟು ಭಾಗ ಸದ್ಯ ಕಾಳಿನದಿಯಲ್ಲಿ ಬಿದ್ದುಕೊಂಡಿದೆ. ತಂತ್ರಜ್ಞರ ಅಂದಾಜಿನ ಪ್ರಕಾರ ಸುಮಾರು 120 ಟನ್‍ಗೂ ಹೆಚ್ಚು ಅವಶೇಷವನ್ನು ನದಿಯಿಂದ ಹೊರತೆಗೆಯಬೇಕಿದೆ.
ಸೇತುವೆಯ ಉಳಿದಿರುವ 365 ಮೀ. ಭಾಗವನ್ನು ಅವಶೇಷ ತೆರವಿಗೆ ಮುನ್ನ ತೆರವುಗೊಳಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳ ತಂಡವು ಸಲಹೆ ನೀಡಿದೆ. ಹೀಗಾಗಿ ಅವುಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ವಾರದ ಹಿಂದೆ (ಸೆ.9) ಚಾಲನೆ ದೊರೆತಿದೆ. ಅವುಗಳನ್ನೂ ಕೆಡವಿ, ನದಿಯಲ್ಲಿ ಬಿದ್ದಿರುವ ಅವಶೇಷ ಹೊರಕ್ಕೆ ತೆಗೆದರೆ ಸುಮಾರು 300 ಟನ್‍ಗೂ ಅಧಿಕ ಕಾಂಕ್ರೀಟ್ ಮತ್ತು ಕಬ್ಬಿಣದ ತ್ಯಾಜ್ಯ ಸಿಗುತ್ತದೆ.
‘ಸೇತುವೆಯ ಅವಶೇಷ ತೆರವುಗೊಳಿಸಿದ ಬಳಿಕ ಅವುಗಳನ್ನು ಎಲ್ಲಿ ದಾಸ್ತಾನು ಮಾಡಬೇಕು ಎಂಬುದರ ಸ್ಪಷ್ಟತೆ ಇನ್ನೂ ಸಿಕ್ಕಿಲ್ಲ. ಸೂಕ್ತ ಜಾಗ ಒದಗಿಸಲು ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದೆ. ಜಾಗ ಅಂತಿಮಗೊಳಿಸದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ನದಿಯ ದಡದಲ್ಲೇ ತ್ಯಾಜ್ಯ ದಾಸ್ತಾನು ಮಾಡಲಾಗುತ್ತದೆ’ ಎಂಬುದಾಗಿ ಸೇತುವೆ ಅವಶೇಷ ತೆರವುಗೊಳಿಸುತ್ತಿರುವ ಐ.ಆರ್.ಬಿ ಕಂಪನಿಯ ಅಧಿಕಾರಿಗಳು ಹೇಳುತ್ತಾರೆ.
‘ಸೇತುವೆ ಅವಶೇಷ ತೆರವುಗೊಳಿಸಲು ಈಗಾಗಲೆ ದೊಡ್ಡ ಗಾತ್ರದ ಕಟ್ಟಡ ಒಡೆಯುವ ಯಂತ್ರ ತರಲಾಗಿದ್ದು, ಅಷ್ಟು ಭಾರದ ಯಂತ್ರವನ್ನು ಕೋಡಿಬಾಗದಲ್ಲಿ ಕೆಲ ತಿಂಗಳ ಹಿಂದೆ ನಿರ್ಮಿಸಿದ ಕಾಂಕ್ರೀಟ್ ರಸ್ತೆಯ ಮೂಲಕ ಸಾಗಿಸಲಾಗಿದೆ. ಚೈನ್ ಜೆಸಿಬಿ ಚಲನೆಯಿಂದ ರಸ್ತೆಗೆ ಹಾನಿಯಾಗುವ ಸಾಧ್ಯತೆ ಇದೆ. ಭಾರಿ ಗಾತ್ರದ ಯಂತ್ರವನ್ನು ಈ ಮಾರ್ಗದ ಮೂಲಕ ಸಾಗಿಸದಂತೆ ಮನವಿ ಮಾಡಲಾಗಿದೆ’ ಎನ್ನುತ್ತಾರೆ ಅಳ್ವೆವಾಡಾ ಭಾಗದ ನಗರಸಭೆ ಸದಸ್ಯೆ ಸ್ನೇಹಾ ಸದಾನಂದ ಮಾಂಜ್ರೇಕರ್.
‘ಕಾಳಿಸೇತುವೆಯ ಸುತ್ತಮುತ್ತ ಮೀನುಗಾರಿಕೆ ನಡೆಸಿ ಜೀವನ ನಿರ್ವಹಣೆ ಮಾಡಲಾಗುತ್ತಿದೆ. ಸೇತುವೆ ಬಿದ್ದ ದಿನದಿಂದಲೂ ಮೀನುಗಾರಿಕೆ ನಡೆಸಲು ಕಷ್ಟವಾಗಿದೆ. ಉಳಿದಿರುವ ಸೇತುವೆ ಕುಸಿದು ಬೀಳುವ ಭಯ ಒಂದೆಡೆಯಾದರೆ, ಅವಶೇಷಗಳಿಂದ ದೋಣಿ ಸಾಗಲು ಅಡ್ಡಿ ಉಂಟಾಗುತ್ತಿದೆ. ಸೇತುವೆ ಅವಶೇಷ ತೆರವು ಕಾರ್ಯ ಆರಂಭಗೊಂಡಿದ್ದರೂ ನಿಧಾನಗತಿಯಲ್ಲಿ ಪ್ರಕ್ರಿಯೆ ನಡೆದಿದೆ’ ಎಂಬುದಾಗಿ ದೂರುತ್ತಾರೆ ಸ್ಥಳೀಯ ಮೀನುಗಾರ ನಾಗರಾಜ ಮೇಥಾ.
‘ಸೇತುವೆ ಅವಶೇಷ ತೆರವುಗೊಳಿಸಲು ಕ್ರೇನ್ ಸಹಿತ ಬಾರ್ಜ್ ಸೇರಿದಂತೆ ಅತ್ಯಾಧುನಿಕ ಯಂತ್ರೋಪಕರಣ ತರಿಸಲಾಗುತ್ತಿದೆ. ಸಮುದ್ರ ಮಾರ್ಗದ ಮೂಲಕ ಅವನ್ನು ತರಬೇಕಿದ್ದು, ಹವಾಮಾನ ವೈಪರಿತ್ಯದ ಕಾರಣಕ್ಕೆ ವಿಳಂಬವಾಗಿದೆ. ನುರತ ತಂತ್ರಜ್ಞರು, 50ಕ್ಕೂ ಹೆಚ್ಚು ಕಾರ್ಮಿಕರು ಕೆಲಸದಲ್ಲಿ ತೊಡಗಿಕೊಳ್ಳಲಿದ್ದಾರೆ. ಕೆಲವೇ ದಿನದಲ್ಲಿ ಅವಶೇಷ ತೆರವು ಕಾರ್ಯ ವೇಗ ಪಡೆದುಕೊಳ್ಳಲಿದೆ’ ಎಂದು ಐ.ಆರ್.ಬಿ ಕಂಪನಿಯ ಅಧಿಕಾರಿಯೊಬ್ಬರು ತಿಳಿಸಿದರು.
ಹಳೆಯ ಸೇತುವೆ ಅವಶೇಷವನ್ನು ತ್ವರಿತವಾಗಿ ತೆರವುಗೊಳಿಸಲು ಸೂಚಿಸಲಾಗಿದೆ. ಹೊಸ ಸೇತುವೆಗೆ ಧಕ್ಕೆ ಬಾರದ ರೀತಿಯಲ್ಲಿ ಕಾರ್ಯನಿರ್ವಹಿಸಲು ನಿರ್ದೇಶನ ನೀಡಲಾಗಿದೆವಿಶ್ವೇಶ್ವರ ಹೆಗಡೆ ಕಾಗೇರಿ ಸಂಸದ
ಸೇತುವೆ ಅವಶೇಷ ತೆರವುಗೊಳಿಸಲು ಕನಿಷ್ಠ ಮೂರು ತಿಂಗಳ ಸಮಯ ತಗುಲಬಹುದು. ಹಿರಿಯ ತಂತ್ರಜ್ಞ ಅಧಿಕಾರಿಗಳ ಸೂಚನೆ ಆಧರಿಸಿ ಕಾರ್ಯಾಚರಣೆ ನಡೆಸುತ್ತಿದ್ದೇವೆಪ್ರದೀಪ ನಾಯ್ಕ ಐ.ಆರ್.ಬಿ ಕಂಪನಿಯ ಎಂಜಿನಿಯರ್
ಸೇತುವೆಯ ಅವಶೇಷಗಳನ್ನು ನದಿ ದಡದಲ್ಲಿಯೇ ದಾಸ್ತಾನಿಡದೆ ವ್ಯವಸ್ಥಿತವಾಗಿ ವಿಲೇವಾರಿಗೊಳಿಸಬೇಕು. ಸ್ಥಳೀಯ ಪ್ರದೇಶದ ರಸ್ತೆ ಸೌಕರ್ಯಗಳಿಗೆ ಹಾನಿಯುಂಟು ಆಗದಂತೆ ಎಚ್ಚರವಹಿಸಲಿಸದಾನಂದ ಮಾಂಜ್ರೇಕರ್ ಸಾಮಾಜಿಕ ಕಾರ್ಯಕರ್ತ
ಸೇತುವೆ ಕುಸಿದಾಗಿನಿಂದಲೂ ಸಾಂಪ್ರದಾಯಿಕ ಮೀನುಗಾರರಿಗೆ ಮೀನುಗಾರಿಕೆ ನಡೆಸಲು ಆತಂಕ ಅಡ್ಡಿ ಉಂಟಾಗುತ್ತಿದೆ. ಸೇತುವೆ ಅವಶೇಷ ತೆರವು ಕಾರ್ಯ ತ್ವರಿತವಾಗಿ ಮುಗಿಯಬೇಕುಸೂರಜ ಸಾರಂಗ್ ಮೀನುಗಾರ
ಸೇತುವೆ ವೀಕ್ಷಣೆಯ ಕುತೂಹಲ
ಕಾಳಿನದಿಯ ಹಳೆಯ ಸೇತುವೆ ಕಾರವಾರದ ಜನರೊಂದಿಗೆ ಭಾವನಾತ್ಮಕ ನಂಟು ಹೊಂದಿತ್ತು ಎಂಬುದಕ್ಕೆ ಗಣೇಶ ಚತುರ್ಥಿ ವೇಳೆ ತವರಿಗೆ ಬಂದಿದ್ದ ನೂರಾರು ಜನರು ಅವಶೇಷ ವೀಕ್ಷಣೆಗೆ ಬರುತ್ತಿರುವುದೇ ಸಾಕ್ಷಿಯಾಗಿದೆ. ಕಳೆದ ಒಂದು ವಾರದಿಂದ ನಿತ್ಯ ನೂರಾರು ಜನರು ಸೇತುವೆ ಕುಸಿದು ಬಿದ್ದ ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ. ಕುಸಿದು ಬಿದ್ದಿರುವ ಅವಶೇಷ ಕಂಡು ಮರಗುತ್ತಿದ್ದಾರೆ. ಅವರ ಪೈಕಿ ದೂರದ ಮಹಾರಾಷ್ಟ್ರ ಗೋವಾ ಬೆಂಗಳೂರಿನಲ್ಲಿ ನೆಲೆಸಿದ ಕಾರವಾರ ಮೂಲದ ಕುಟುಂಬಗಳ ಸದಸ್ಯರೇ ಹೆಚ್ಚಿದ್ದಾರೆ.
ಹೊಸ ಸೇತುವೆಯ ಸುರಕ್ಷತೆ ಬಗ್ಗೆಯೂ ಆತಂಕ
ಹಳೆಯ ಸೇತುವೆ ಕುಸಿದು ಬಿದ್ದ ಬಳಿಕ ಏಳು ವರ್ಷಗಳ ಹಿಂದೆ ನಿರ್ಮಿಸಿರುವ ಸೇತುವೆ ವಾಹನ ಸಂಚಾರಕ್ಕೆ ಆಧಾರವಾಗಿದೆ. ದ್ವಿಮುಖ ಸಂಚಾರ ಭಾರಿ ಗಾತ್ರದ ವಾಹನ ಓಡಾಟದಿಂದ ಸೇತುವೆಯ ಸುರಕ್ಷತೆಯ ಬಗ್ಗೆಯೂ ಸ್ಥಳೀಯರಲ್ಲಿ ಆತಂಕ ಹೆಚ್ಚುತ್ತಿದೆ. ‘ಹಳೆಯ ಸೇತುವೆ ತೆರವು ಕಾರ್ಯದ ವೇಳೆ ಹೊಸ ಸೇತುವೆಯ ಮೇಲೆ ಕ್ರೇನ್ ಅಥವಾ ಇನ್ನಿತರ ಯಾವುದೇ ಯಂತ್ರೋಪಕರಣ ಇಟ್ಟು ಕೆಲಸ ಮಾಡಬಾರದು’ ಎಂಬುದಾಗಿ ಸ್ಥಳೀಯರಾದ ಸದಾನಂದ ಮಾಂಜ್ರೇಕರ್ ಆಗ್ರಹಿಸುತ್ತಾರೆ. ‘ಹಳೆಯ ಸೇತುವೆ ಕುಸಿದು ಬಿದ್ದಿದ್ದರಿಂದ ಹೊಸ ಸೇತುವೆಗೆ ಯಾವುದೇ ಧಕ್ಕೆ ಆಗಿಲ್ಲ. ಅವಶೇಷ ತೆರವು ಕಾರ್ಯ ನಡೆಸುವಾಗಲೂ ಎಚ್ಚರದಿಂದ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ. ಜನರು ಆತಂಕಪಡುವ ಅಗತ್ಯವಿಲ್ಲ’ ಎಂಬುದಾಗಿ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.