ADVERTISEMENT

ಕಾಳಿ ನದಿ: ಸೇತುವೆ ನಿರ್ಮಾಣಕ್ಕೆ ‘ಅಡಿಪಾಯ’ದ ಸವಾಲು

ಪೈಲಿಂಗ್ ಪ್ರಕ್ರಿಯೆ ಚುರುಕು

ಗಣಪತಿ ಹೆಗಡೆ
Published 16 ಜನವರಿ 2026, 7:29 IST
Last Updated 16 ಜನವರಿ 2026, 7:29 IST
ಕಾರವಾರದ ಕಾಳಿ ನದಿಗೆ ಹೊಸ ಸೇತುವೆ ನಿರ್ಮಿಸಲು ಕಾಮಗಾರಿ ನಡೆದಿರುವುದು
ಕಾರವಾರದ ಕಾಳಿ ನದಿಗೆ ಹೊಸ ಸೇತುವೆ ನಿರ್ಮಿಸಲು ಕಾಮಗಾರಿ ನಡೆದಿರುವುದು   

ಕಾರವಾರ: ಒಂದೂವರೆ ವರ್ಷದ ಹಿಂದೆ ಕುಸಿದು ಬಿದ್ದಿದ್ದ ಇಲ್ಲಿನ ಕಾಳಿ ನದಿಯ ಹಳೆಯ ಸೇತುವೆಯ ಜಾಗದಲ್ಲೇ ಉಕ್ಕಿನ ಕಮಾನಿನ ಮಾದರಿಯ ಹೊಸ ಸೇತುವೆ ನಿರ್ಮಾಣದ ಕೆಲಸ ಚುರುಕು ಪಡೆದಿದೆ. ಆದರೆ, ಕೆಲವಷ್ಟು ಸವಾಲು ಎದುರಾಗುವ ಸಾಧ್ಯತೆಯಿದೆ.

ಹಳೆ ಸೇತುವೆ ಇದ್ದ ಜಾಗದಲ್ಲಿ ಸಾಲು ಸಾಲಾಗಿ 8ಕ್ಕೂ ಹೆಚ್ಚು ಅಡಿಪಾಯ ಕಂಬಗಳಿವೆ. 1965ರಿಂದ 18 ವರ್ಷಗಳ ಅವಧಿಯಲ್ಲಿ ಸೇತುವೆ ನಿರ್ಮಾಣಕ್ಕೆ ಮೂರು ಕಂಪನಿಗಳು ಪ್ರತ್ಯೇಕವಾಗಿ ಪ್ರಯತ್ನ ನಡೆಸಿದ್ದವು. ತಾಂತ್ರಿಕ ಸಮಸ್ಯೆಯಿಂದ ಅಡಿಪಾಯ ಕಂಬಗಳನ್ನು ಬದಲಿಸಲಾಗಿತ್ತು. ಇವುಗಳನ್ನು ಬಿಟ್ಟು ಹೊಸದಾಗಿ 6 ಅಡಿಪಾಯ ಕಂಬಗಳನ್ನು ಈಗ ನಿರ್ಮಿಸಬೇಕಿದೆ.

‘ಸೇತುವೆ ನಿರ್ಮಾಣಕ್ಕೂ ಮೊದಲು ಕಾಮಗಾರಿ ನಡೆಸುವ ಜಾಗದ ಆಳದಲ್ಲಿನ ಮಣ್ಣು, ಕಲ್ಲುಗಳ ಗುಣಮಟ್ಟದ ಬಗ್ಗೆ ಅಧ್ಯಯನ ನಡೆಸಲು ಪೈಲಿಂಗ್ ಪರೀಕ್ಷೆ ನಡೆಸಲಾಗುವುದು. ಎರಡು ತಿಂಗಳ ಹಿಂದೆಯೇ ಈ ಚಟುವಟಿಕೆಯನ್ನು ಆರಂಭಿಸಿದ್ದೆವು. ಆದರೆ, ನಿಗದಿತ ಮಟ್ಟಕ್ಕಿಂತ ಮೇಲ್ಮೈನಲ್ಲೇ ಕಲ್ಲಿನ ಪದರ ಸಿಕ್ಕಿದ್ದರಿಂದ ಕೆಲಸ ಸ್ಥಗಿತಗೊಂಡಿತ್ತು. ಈಗ ಹೊಸದಾಗಿ ಜಾಗ ಗುರುತಿಸಿ ಪೈಲಿಂಗ್ ಪ್ರಕ್ರಿಯೆ ಆರಂಭಿಸಲಾಗಿದೆ’ ಎಂದು ಐಆರ್‌ಬಿ ಇನ್‌ಫ್ರಾಸ್ಟ್ರಕ್ಚರ್ ಸಂಸ್ಥೆ ತಿಳಿಸಿದೆ. ಸೇತುವೆಯನ್ನು ಈ ಸಂಸ್ಥೆಯು ನಿರ್ಮಿಸುತ್ತಿದೆ.

ADVERTISEMENT

‘ಹಳೆಯ ಸೇತುವೆ ನಿರ್ಮಾಣಕ್ಕೆ ಬಳಕೆಯಾಗಿದ್ದ ಅಡಿಪಾಯ ಕಂಬಗಳನ್ನು ಸಂಸ್ಥೆಯು ಬಳಸುವುದಿಲ್ಲ. ಪ್ರತ್ಯೇಕವಾಗಿ 6 ಹೊಸ ಕಂಬಗಳನ್ನು ನಿರ್ಮಿಸಲಿದೆ. ಅದಕ್ಕೆ ಪೂರಕವಾಗಿ ನದಿಯೊಳಗೆ 40 ಮೀಟರ್‌ಗೂ ಹೆಚ್ಚು ಆಳದಲ್ಲಿ ರಂದ್ರ ಕೊರೆದು ಉಕ್ಕಿನ ಕಂಬಗಳನ್ನು ಅಳವಡಿಸಿ, ಕಾಂಕ್ರೀಟ್ ಭರ್ತಿ ಮಾಡುವ ಪೈಲಿಂಗ್ ಚಟುವಟಿಕೆ ಕೈಗೊಳ್ಳಲಾಗುವುದು’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಕೆ.ಶಿವಕುಮಾರ್ ತಿಳಿಸಿದರು.

‘ಪ್ರತಿ ಕಂಬಕ್ಕೆ ಒಂದರಂತೆ 6 ಸ್ಥಳದಲ್ಲಿ ಪೈಲಿಂಗ್ ನಡೆಯಲಿದೆ. ಸೇತುವೆಗೆ ಭದ್ರ ಅಡಿಪಾಯ ಒದಗಿಸುವ ಈ ಪ್ರಕ್ರಿಯೆ ಉಕ್ಕಿನ ಕಂಬಗಳ ಅಳವಡಿಕೆ, ಕಾಂಕ್ರೀಟ್ ಪದರ ಸೇರಿ ಆರು ಹಂತಗಳನ್ನು ಒಳಗೊಳ್ಳಲಿದೆ. ಪ್ರತಿ ಪೈಲಿಂಗ್‌ ಪೂರ್ಣಗೊಳ್ಳಲು ಕನಿಷ್ಠ ಎರಡು ತಿಂಗಳು ಸಮಯ ಬೇಕಾಗಬಹುದು’ ಎಂದರು.

ಕಾಳಿ ನದಿಗೆ ಹೊಸ ಸೇತುವೆ ನಿರ್ಮಿಸುವ ಪೂರಕ ಕಾರ್ಯಗಳಿಗೆ ನೆರವಾಗಲು ಬಾರ್ಜ್ ನಿಂತಿರುವುದು

ಒಂದು ಪೈಲಿಂಗ್ ಪ್ರಕ್ರಿಯೆಗೆ 2 ತಿಂಗಳು ಬೇಕು ಹೊಸದಾಗಿ 6 ಕಂಬಗಳ ನಿರ್ಮಾಣಕ್ಕೆ ನಿರ್ಣಯ 40 ಮೀಟರ್‌ಗೂ ಹೆಚ್ಚು ಆಳವುಳ್ಳ ರಂದ್ರ

ಕಾಳಿ ನದಿಗೆ ಹೊಸ ಸೇತುವೆ ನಿರ್ಮಾಣ ಜವಾಬ್ದಾರಿಯನ್ನು ಐಆರ್‌ಬಿ ಇನ್‌ಫ್ರಾಸ್ಟ್ರಕ್ಚರ್ ಕಂಪನಿಗೆ ವಹಿಸಲಾಗಿದೆ. ಎರಡು ವರ್ಷದ ಗಡುವು ನೀಡಲಾಗಿದೆ
ಕೆ.ಶಿವಕುಮಾರ್ ಯೋಜನಾ ನಿರ್ದೇಶಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ
ವಾಹನ ದಟ್ಟಣೆ ತಗ್ಗಿಸಲು ಕಾಳಿ ನದಿಗೆ ಎರಡು ಸೇತುವೆ ನಿರ್ಮಿಸಲಾಗಿತ್ತು. ಈಗ ಒಂದೇ ಸೇತುವೆ ಮೇಲೆ ವಾಹನಗಳ ಒತ್ತಡ ಹೆಚ್ಚಿದೆ. ಹೊಸ ಸೇತುವೆ ನಿರ್ಮಾಣ ಬೇಗನೇ ಪೂರ್ಣಗೊಳ್ಳಲಿ.
ಸದಾನಂದ ಮಾಂಜ್ರೇಕರ್ ಸ್ಥಳೀಯ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.