ADVERTISEMENT

ಕಾರವಾರದಲ್ಲಿ ಮುಂದುವರೆದ ಮಳೆ: ಉಕ್ಕಿ ಹರಿಯುತ್ತಿರುವ ಕಾಳಿ ನದಿ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2019, 5:35 IST
Last Updated 7 ಆಗಸ್ಟ್ 2019, 5:35 IST
ತುಂಬಿ ಹರಿಯುತ್ತಿರುವ ಕಾಳಿ ನದಿ
ತುಂಬಿ ಹರಿಯುತ್ತಿರುವ ಕಾಳಿ ನದಿ   

ಕಾರವಾರ: ಜಿಲ್ಲೆಯಲ್ಲಿ ಅಬ್ಬರದ ಮಳೆ ಮತ್ತೆ ಮುಂದುವರಿದಿದೆ. ಕರಾವಳಿಯಲ್ಲಿ ಮಂಗಳವಾರ ರಾತ್ರಿಯಿಂದ ಸ್ವಲ್ಪ ಬಿಡುವು ನೀಡಿತ್ತು. ಆದರೆ, ಬುಧವಾರ ಬೆಳಿಗ್ಗೆಯಿಂದ ಮತ್ತೆ ಅಬ್ಬರಿಸುತ್ತಿದೆ. ಆಗಾಗ ರಭಸದ ಗಾಳಿಯೂ ಜೊತೆಯಾಗುತ್ತಿದೆ.

ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವೂ ಧಾರ್ಮಿಕ ಕ್ಷೇತ್ರವೂ ಆಗಿರುವ ಕುಮಟಾ ತಾಲ್ಲೂಕಿನ ಯ‌ಾಣದಲ್ಲಿ ಅಲ್ಪಪ್ರಮಾಣದಲ್ಲಿ ಮಣ್ಣು ಕುಸಿದಿದೆ. ಯಾವುದೇ ಹಾನಿಯಾಗಿಲ್ಲ.

ಚಂಡಿಕಾ ಹೊಳೆಯಲ್ಲಿ ನೀರಿನ ಮಟ್ಟ ಇಳಿಕೆಯಾಗಿದ್ದು, ಕುಮಟಾ- ಶಿರಸಿ ನಡುವೆ ಬಸ್ ಸಂಚಾರ ಶುರುವಾಗಿದೆ. ಆದರೆ, ಅಂಕೋಲಾ- ಯಲ್ಲಾಪುರ ನಡುವೆ ಬೆಳಿಗ್ಗೆ 10ರವರೆಗೂ ವಾಹನ ಸಂಚಾರ ಆರಂಭವಾಗಲಿಲ್ಲ. ಸುಂಕಸಾಳದಲ್ಲಿ ಗಂಗಾವಳಿ ನದಿಯ ನೀರು ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಹರಿಯುತ್ತಿದೆ. ಹಾಗಾಗಿ ಈ ರಸ್ತೆಯಿಂದ ನಿತ್ಯವೂ ಕರಾವಳಿಗೆ ಬರುವ ದಿನಪತ್ರಿಕೆ, ತರಕಾರಿ, ದಿನಸಿ ಸಾಗಣೆಯ ಹಲವು ವಾಹನಗಳು ಬುಧವಾರ ಸಂಚರಿಸಿಲ್ಲ.

ADVERTISEMENT

ಸುಂಕಸಾಳ ಗ್ರಾಮದ ಬಳಿ ಜಲಾವೃತಗೊಂಡಿದ್ದ ಹೈಲ್ಯಾಂಡ್ ಹೊಟೇಲ್ ನಿಂದ 112 ಜನ ಪ್ರಯಾಣಿಕರನ್ನು ದೋಣಿಗಳ ಮೂಲಕ ಸುರಕ್ಷಿತವಾಗಿ ಕರೆತರಲಾಗಿದೆ. ಅವರನ್ನು ವಿಶೇಷ ವಾಹನದ ಮೂಲಕ ಅಂಕೋಲಾದ ತಾತ್ಕಾಲಿಕ ಪುನರ್ವಸತಿ ಕೇಂದ್ರಕ್ಕೆ ತಲುಪಿಸಲಾಗಿದೆ ಎಂದು ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಅಧಿಕಾರಿಗಳು ತಿಳಿಸಿದ್ದಾರೆ.

ಕಾರವಾರ ತಾಲ್ಲೂಕಿನ ಕದ್ರಾ ಅಣೆಕಟ್ಟೆಯಿಂದ 1.7 ಲಕ್ಷ ಕ್ಯುಸೆಕ್ ನೀರನ್ನು ಕಾಳಿ ನದಿಗೆ ಹರಿಸಲಾಗುತ್ತಿತ್ತು. ಅದನ್ನು ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ 1.5 ಲಕ್ಷ ಕ್ಯುಸೆಕ್ ಗೆ ಇಳಿಸಲಾಗುವುದು. ಈ ಸಂದರ್ಭದಲ್ಲಿ ವಿವಿಧ ತಾತ್ಕಾಲಿಕ ಪುನರ್ವಸತಿ ಕೇಂದ್ರಗಳಿಗೆ ಆಹಾರ ಮತ್ತು ಇತರ ಅಗತ್ಯ ವಸ್ತುಗಳನ್ನು ಸರಬರಾಜು ಮಾಡಲಾಗುವುದು.

ನದಿಗೆ ಹರಿಯುವ ನೀರಿನ ಪ್ರಮಾಣ ಕಡಿಮೆ ಮಾಡುವುದು ಕೇವಲ ತಾತ್ಕಾಲಿಕ ವ್ಯವಸ್ಥೆ. ಹಾಗಾಗಿ ಈ ಸಂದರ್ಭದಲ್ಲಿ ಜನರು ತಮ್ಮ ಮನೆಗಳಿಗೆ ಹೋಗಬಾರದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.