ಉಡುಪಿ: ‘ಸೋಮೇಶ್ವರ ವನ್ಯಜೀವಿಧಾಮದ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡಿರುವ ಕಾಳಿಂಗ ಸರ್ಪ ಸಂಶೋಧನಾ ಕೇಂದ್ರಗಳಾದ ಆಗುಂಬೆ ರೈನ್‌ಫಾರೆಸ್ಟ್ ರೀಸರ್ಚ್ ಸ್ಟೇಷನ್ (ಎಆರ್‌ಆರ್‌ಎಸ್) ಮತ್ತು ಕಾಳಿಂಗ ಫೌಂಡೇಶನ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ಪರಿಸರ ಸೂಕ್ಷ್ಮ ಪ್ರದೇಶ ಮೇಲ್ವಿಚಾರಣಾ ಸಮಿತಿಗೆ ಈಚೆಗೆ ದೂರು ಸಲ್ಲಿಕೆಯಾಗಿದೆ.
ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿರುವ ಕಾರ್ಕಳ ಕುದುರೆಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಮ ಬಾಬು ಮೂಲಕ, ಪರಿಸರ ಕಾರ್ಯಕರ್ತ ನಾಗರಾಜ ಕೂವೆ ಮತ್ತು ತಂಡ ಎರಡು ಪ್ರತ್ಯೇಕ ದೂರುಗಳನ್ನು ನೀಡಿವೆ.
‘2020ರ ಆಗಸ್ಟ್ 28ರಂದು ಸೋಮೇಶ್ವರ ವನ್ಯಜೀವಿ ಧಾಮದ ಪರಿಸರ ಸೂಕ್ಷ್ಮ ಪ್ರದೇಶದ ಅಧಿಸೂಚನೆ ಆಗಿದ್ದು, ಅದರಲ್ಲಿನ ಸೆಕ್ಷನ್ 4ರ ಪ್ರಕಾರ ಹೊಸತಾಗಿ ರೆಸಾರ್ಟ್ ಮಾಡಲು ಅವಕಾಶವಿಲ್ಲ. ಆದರೂ ಎರಡು ಸಂಸ್ಥೆಗಳು ವಾಣಿಜ್ಯ ಚಟುವಟಿಕೆಗಳನ್ನು ನಡೆಸುತ್ತಿದ್ದು, ಇದು ಪರಿಸರ ಸಂರಕ್ಷಣಾ ಕಾಯ್ದೆ- 1986 ರ ಸ್ಪಷ್ಟ ಉಲ್ಲಂಘನೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ.
‘ಯಾವುದೇ ಅನುಮತಿ ಇಲ್ಲದಿದ್ದರೂ ವ್ಯಾಣಿಜ್ಯ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಅದಕ್ಕೆ ಕಾಳಿಂಗ ಸರ್ಪವನ್ನು ಸರಕಿನಂತೆ ಬಳಸಿಕೊಳ್ಳುತ್ತಿದ್ದಾರೆ. ಅವರ ವೆಬ್‌ಸೈಟ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಇದು ಬಹಿರಂಗವಾಗಿಯೇ ಕಂಡುಬರುತ್ತಿದೆ. ಅರಣ್ಯ ಸಚಿವರಿಗೆ ಈ ಕುರಿತು ದೂರು ನೀಡಿದ ನಂತರ, ವೆಬ್‌ಸೈಟ್‌ನಲ್ಲಿನ ಫೋಟೊ ಮತ್ತು ವಿಡಿಯೋಗಳನ್ನು ತೆಗೆದು ಹಾಕಿ ಸಾಕ್ಷಿ ನಾಶದ ಪ್ರಯತ್ನ ಮಾಡಲಾಗಿದೆ’ ಎಂದು ದೂರಿನಲ್ಲಿ ಹೇಳಲಾಗಿದೆ.
‘ಕಾನೂನು ಬಾಹಿರ ಕಟ್ಟಡಗಳನ್ನು ತೆರವುಗೊಳಿಸಲು ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಪರಿಸರ ಸಂರಕ್ಷಣಾ ಕಾಯ್ದೆಯನ್ನು ಉಲ್ಲಂಘಿಸಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು’ ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಪರಿಸರ ಕಾರ್ಯಕರ್ತರಾದ ನಾದ ಮಣಿನಾಲ್ಕೂರು, ಸಂಚಿತ್ ಜೈನ್, ಆತೀಶ್ ಎಚ್.ವೈ., ನಿಖಿಲ್, ಸಂದೀಪ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.