ADVERTISEMENT

ಹಸಿರ ಮಡಿಲ ಹಾಲು ನೊರೆ ‘ಕಲ್ಲಾರೆ’:ಚಾರಣಿಗರಿಗೆ ಪ್ರಿಯ ದಟ್ಟ ಅರಣ್ಯದ ದುರ್ಗಮ ದಾರಿ

ರಾಜೇಂದ್ರ ಹೆಗಡೆ
Published 4 ಜನವರಿ 2026, 8:09 IST
Last Updated 4 ಜನವರಿ 2026, 8:09 IST
ಕಲ್ಲಾರೆ ಜಲಪಾತ
ಕಲ್ಲಾರೆ ಜಲಪಾತ   

ಶಿರಸಿ: ಮಲೆನಾಡಿನ ಸೌಂದರ್ಯವೇ ಹಾಗೆ, ಇಲ್ಲಿ ಪ್ರತಿ ಹೆಜ್ಜೆಗೂ ಒಂದೊಂದು ಜಲಪಾತಗಳು ಕಣ್ಮನ ಸೆಳೆಯುತ್ತವೆ. ತಾಲ್ಲೂಕಿನ ಜಡ್ಡಿಗದ್ದೆ ಸಮೀಪದ ಗ್ರಾಮೀಣ ಪರಿಸರದಲ್ಲಿರುವ ‘ಕಲ್ಲಾರೆ ಜಲಪಾತ’ ಈಗ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದ್ದು, ಹಚ್ಚ ಹಸಿರಿನ ಕಾಡಿನ ನಡುವೆ ಅಡಗಿರುವ ಈ ಅದ್ಭುತ ಲೋಕ ಪ್ರಕೃತಿ ಪ್ರೇಮಿಗಳ ಪಾಲಿಗೆ ಸ್ವರ್ಗದಂತಿದೆ.

ಕಲ್ಲಾರೆ ಜಲಪಾತವನ್ನು ತಲುಪುವುದು ಒಂದು ಸಾಹಸಮಯ ಅನುಭವ. ನಗರದಿಂದ ಅಂದಾಜು 45 ಕಿ.ಮೀ ದೂರದ ಕೊಡ್ನಗದ್ದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಜಲಪಾತವಿದೆ. ಗದ್ದೆಹಳ್ಳಿ, ಹೊನ್ನೆಹಕ್ಕಲು ಮಾರ್ಗವಾಗಿ ಅಂದಾಜು 4ರಿಂದ 5 ಕಿ.ಮೀ ಅರಣ್ಯದಲ್ಲಿ ಕಾಲ್ನಡಿಗೆ ಮೂಲಕ ತಲುಪಬಹುದಾಗಿದೆ. ಇಲ್ಲಿನ ಬಿಳಿಹೊಳೆಯ ನೀರಿನಿಂದ ಇದು ಸೃಷ್ಟಿಯಾಗಿದೆ. ಈವರೆಗೆ ಹೆಚ್ಚಿನ ಪ್ರಚಾರ ಪಡೆಯದ ಈ ಜಲಪಾತಕ್ಕೆ ದಟ್ಟವಾದ ಅರಣ್ಯದ ನಡುವೆ ಇರುವ ಕಿರಿದಾದ ಮತ್ತು ದುರ್ಗಮವಾದ ಹಾದಿಯಲ್ಲಿ ಸಾಗುವಾಗ ಪ್ರಕೃತಿಯ ನೈಜ ಸೌಂದರ್ಯ ಅನಾವರಣಗೊಳ್ಳುತ್ತದೆ. ಕಾಡಿನ ಮೌನವನ್ನು ಸೀಳಿಕೊಂಡು ಬರುವ ಹಕ್ಕಿಗಳ ಚಿಲಿಪಿಲಿ ಕಲರವ ಮತ್ತು ಎತ್ತರದ ಮರಗಳ ನಡುವೆ ಬೀರುವ ಸೂರ್ಯನ ಕಿರಣಗಳು ಚಾರಣಿಗರಿಗೆ ಆಯಾಸದ ಅರಿವಾಗದಂತೆ ಮಾಡುತ್ತವೆ.

ಕಾಡಿನ ಹಾದಿಯಲ್ಲಿ ಸ್ವಲ್ಪ ದೂರ ಸಾಗುತ್ತಿದ್ದಂತೆ ದೂರದಿಂದಲೇ ಜಲಪಾತದ ಭೋರ್ಗರೆತ ಕೇಳತೊಡಗುತ್ತದೆ. ದಟ್ಟವಾದ ಕಾಡಿನ ನಡುವೆ ಎತ್ತರವಾದ ಕಲ್ಲಿನ ಬಂಡೆಗಳ ಮೇಲಿಂದ ಹಾಲಿನ ನೊರೆಯಂತೆ ಜಿನುಗುವ ನೀರಿನ ದೃಶ್ಯ ಮನಮೋಹಕ. ನೀರಿನ ಜುಳು ಜುಳು ನಿನಾದವು ಪ್ರವಾಸಿಗರ ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಇಲ್ಲಿನ ಪರಿಸರ ಇನ್ನೂ ಮಾನವ ಹಸ್ತಕ್ಷೇಪದಿಂದ ದೂರ ಉಳಿದಿರುವುದರಿಂದ ಅದರ ನೈಸರ್ಗಿಕ ಸೊಬಗು ಹಾಗೆಯೇ ಉಳಿದುಕೊಂಡಿದೆ.

ADVERTISEMENT

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಈ ಜಲಪಾತದ ಮಾಹಿತಿ ಹರಡುತ್ತಿದ್ದು, ಶಿರಸಿ ಹಾಗೂ ಸುತ್ತಮುತ್ತಲಿನ ಪ್ರದೇಶದಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿದ್ದಾರೆ. ‘ಇಲ್ಲಿನ ಸ್ವಚ್ಛವಾದ ನೀರು ಮತ್ತು ತಂಪಾದ ಗಾಳಿ ನಗರದ ಜಂಜಾಟದಿಂದ ದೂರ ಉಳಿಯಲು ಬಯಸುವವರಿಗೆ ಸೂಕ್ತ ತಾಣವಾಗಿದೆ. ಕುಟುಂಬದೊಂದಿಗೆ ಬಂದು ಸಮಯ ಕಳೆಯಲು ಹಾಗೂ ಛಾಯಾಗ್ರಹಣ ಆಸಕ್ತರಿಗೆ ಇದು ಹೇಳಿ ಮಾಡಿಸಿದಂತಿದೆ’ ಎಂಬುದು ಇಲ್ಲಿಗೆ ಬರುವ ಪ್ರವಾಸಿಗರ ಮಾತಾಗಿದೆ.

ಚಾರಣದ ಜತೆಜತೆಗೆ ಪಶ್ಚಿಮಘಟ್ಟದ ಹಸಿರಿ ಸೌಂದರ್ಯ ಹಾಗೂ ಜಲಪಾತದ ಸೊಬಗು ಪಡೆಯಲು ಅತ್ಯುತ್ತಮ ತಾಣ ಕಲ್ಲಾರೆ ಜಲಪಾತವಾಗಿದೆ
ವಿನೋದ ಶೆಟ್ಟಿ ಹೊನ್ನಾವರ ಪ್ರವಾಸಿಗ
ಪರಿಸರ ಸಂರಕ್ಷಣೆ ಅಗತ್ಯ
‘ಜಲಪಾತದ ಸೌಂದರ್ಯವನ್ನು ಆಸ್ವಾದಿಸುವ ಜತೆಗೆ ಈ ಸುಂದರ ತಾಣವನ್ನು ಪ್ಲಾಸ್ಟಿಕ್ ಮುಕ್ತವಾಗಿಡುವುದು ಸ್ಥಳೀಯರ ಆದ್ಯತೆಯಾಗಿದೆ. ಪ್ರವಾಸಿಗರು ತರುವ ಕಸವನ್ನು ಅಲ್ಲಲ್ಲಿ ಬಿಸಾಡದೆ ಪರಿಸರದ ಹಿತ ಕಾಪಾಡಬೇಕಿದೆ. ಕಲ್ಲಾರೆ ಜಲಪಾತವು ಪ್ರವಾಸಿಗರ ದೃಷ್ಟಿಯಲ್ಲಿ ಗುರುತಿಸಿಕೊಳ್ಳುತ್ತಿರುವ ಬೆನ್ನಲ್ಲೇ ಸ್ಥಳೀಯ ರಸ್ತೆಗಳ ಅಭಿವೃದ್ಧಿ ಹಾಗೂ ಮೂಲಸೌಕರ್ಯದ ಅಗತ್ಯತೆಯೂ ಇದೆ’ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.