ADVERTISEMENT

ಕಾರವಾರ: ಶಿರಸಿಗೆ ಭೀಮಣ್ಣ, ಯಲ್ಲಾಪುರಕ್ಕೆ ಪಾಟೀಲ್ ಕಾಂಗ್ರೆಸ್ ಅಭ್ಯರ್ಥಿ

ಕಾಂಗ್ರೆಸ್ ಎರಡನೇ ಪಟ್ಟಿಯಲ್ಲೂ ಘೋಷಣೆಯಾಗದ ಕುಮಟಾ ಟಿಕೆಟ್

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2023, 6:27 IST
Last Updated 6 ಏಪ್ರಿಲ್ 2023, 6:27 IST
ಭೀಮಣ್ಣ ನಾಯ್ಕ ಮತ್ತು ವಿ.ಎಸ್.ಪಾಟೀಲ್
ಭೀಮಣ್ಣ ನಾಯ್ಕ ಮತ್ತು ವಿ.ಎಸ್.ಪಾಟೀಲ್   

ಕಾರವಾರ: ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಎರಡನೇ ಹಂತದ ಅಭ್ಯರ್ಥಿಗಳ ಪಟ್ಟಿಯನ್ನು ಗುರುವಾರ ಬಿಡುಗಡೆಗೊಳಿಸಿದ್ದು ಪೈಪೋಟಿ ಹೆಚ್ಚಿರುವ ಕುಮಟಾ ಕ್ಷೇತ್ರಕ್ಕೆ ಟಿಕೆಟ್ ಅಂತಿಮಗೊಳಿಸಿಲ್ಲ.

ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರದ ಪೈಕಿ ಈಗಾಗಲೆ ಐದು ಕ್ಷೇತ್ರಗಳಿಗೆ ಅಭ್ಯರ್ಥಿಗಳು ಅಂತಿಮವಾದಂತಾಗಿದೆ. ಕುಮಟಾದಲ್ಲಿ 14ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದರು. ಮಾಜಿ ಶಾಸಕಿ ಶಾರದಾ ಶೆಟ್ಟಿ ಸಹಿತ ನಾಲ್ವರು ಪ್ರಬಲ ಪೈಪೋಟಿಗೆ ಇಳಿದಿದ್ದಾರೆ. ಟಿಕೆಟ್ ಸ್ಪರ್ಧೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಿವೇದಿತ್ ಆಳ್ವಾ ಸೇರಿಕೊಂಡಿರುವುದು ಕ್ಷೇತ್ರದ ಕೈ ಪಾಳಯದಲ್ಲಿ ಭಿನ್ನಮತಕ್ಕೆ ಎಡೆಮಾಡಿಕೊಟ್ಟಿದೆ. ಹೀಗಾಗಿ ಈ ಕ್ಷೇತ್ರಕ್ಕೆ ಇನ್ನೂ ಅಭ್ಯರ್ಥಿ ಅಂತಿಮಗೊಳಿಸಲು ಪಕ್ಷ ಹಿಂದೇಟು ಹಾಕಿದೆ ಎಂಬ ಚರ್ಚೆ ಆರಂಭಗೊಂಡಿದೆ.

ಅಭ್ಯರ್ಥಿ ಯಾರಾಗಬಹುದು ಎಂಬ ಕುತೂಹಲವಿದ್ದ ಶಿರಸಿ ಕ್ಷೇತ್ರಕ್ಕೆ ಭೀಮಣ್ಣ ನಾಯ್ಕ, ಯಲ್ಲಾಪುರ ಕ್ಷೇತ್ರಕ್ಕೆ ವಿ.ಎಸ್.ಪಾಟೀಲ್ ಅವರನ್ನು ಅಭ್ಯರ್ಥಿಯಾಗಿಸಲಾಗಿದೆ.

ADVERTISEMENT

ಭೀಮಣ್ಣ ನಾಯ್ಕ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರಾಗಿ 13 ವರ್ಷ ಕೆಲಸ ಮಾಡಿದ್ದರು. ಕೆಲ ತಿಂಗಳ ಹಿಂದಷ್ಟೆ ಹುದ್ದೆಯಿಂದ ಅವರ ನ್ನು ಬದಲಿಸಲಾಗಿತ್ತು. 2008ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ, 2018ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಅವರು ಶಿರಸಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು. 2019ರ ಉಪಚುನಾವಣೆಯಲ್ಲಿ ಯಲ್ಲಾಪುರ ಕ್ಷೇತ್ರದಿಂದ ಸ್ಪರ್ಧಿಸುವ ಜತೆಗೆ 2021ರ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಆದರೆ ಈವರೆಗೆ ಗೆಲುವು ದಕ್ಕಿರಲಿಲ್ಲ.

ಶಿರಸಿ ಕ್ಷೇತ್ರದಲ್ಲಿ ಭೀಮಣ್ಣ ಸೇರಿದಂತೆ ಆರಕ್ಕೂ ಹೆಚ್ಚು ಮಂದಿ ಆಕಾಂಕ್ಷಿಗಳಿದ್ದರು. ಇದೀಗ ಸತತ ನಾಲ್ಕನೆ ಬಾರಿಗೆ ಪಕ್ಷ ಅವರಿಗೆ ಮಣೆ ಹಾಕಿದೆ.

ಬಿಜೆಪಿಯಲ್ಲಿದ್ದ ವಿ.ಎಸ್.ಪಾಟೀಲ್ 2008ರಲ್ಲಿ ಶಾಸಕರಾಗಿದ್ದರು. 2019 ರಿಂದ 2022ರ ವರೆಗೆ ವಾಯುವ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು. ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಜತೆಗಿನ ಮುನಿಸಿನಿಂದ ಪಕ್ಷ ತ್ಯಜಿಸಿ ಈಚೆಗೆ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಪಕ್ಷದ ಟಿಕೆಟ್ ಭರವಸೆಯೊಂದಿಗೆ ಕಾಂಗ್ರೆಸ್ ಸೇರಿದ್ದಾರೆ ಎಂದು ಹೇಳಲಾಗಿತ್ತಾದರೂ ಉದ್ಯಮಿ ಶ್ರೀನಿವಾಸ ಭಟ್ಟ ಧಾತ್ರಿ ಪೈಪೋಟಿಗೆ ಇಳಿದಿದ್ದರು. ಆದರೆ ಪಕ್ಷ ಪಾಟೀಲ್ ಅವರಿಗೆ ಮಣೆ ಹಾಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.