ADVERTISEMENT

Karnataka Bandh: ‘ಕರ್ನಾಟಕ ಬಂದ್‍’ಗೆ ಉತ್ತರ ಕನ್ನಡದಲ್ಲಿ ಸಿಗದ ಸ್ಪಂದನೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2025, 14:52 IST
Last Updated 22 ಮಾರ್ಚ್ 2025, 14:52 IST
ಕರ್ನಾಟಕ ಬಂದ್ ನಡುವೆಯೂ ಕಾರವಾರದ ಮಾರುಕಟ್ಟೆಯಲ್ಲಿ ಜನರ ಓಡಾಟ, ವಾಹನ ಸಂಚಾರ ಎಂದಿನಂತೆ ಇತ್ತು
ಕರ್ನಾಟಕ ಬಂದ್ ನಡುವೆಯೂ ಕಾರವಾರದ ಮಾರುಕಟ್ಟೆಯಲ್ಲಿ ಜನರ ಓಡಾಟ, ವಾಹನ ಸಂಚಾರ ಎಂದಿನಂತೆ ಇತ್ತು   

ಕಾರವಾರ: ಬೆಳಗಾವಿಯಲ್ಲಿ ಮರಾಠಿಗರ ದಬ್ಬಾಳಿಕೆ ಖಂಡಿಸಿ ವಾಟಾಳ್ ಚಳವಳಿ ಪಕ್ಷ ಹಾಗೂ ಇತರೆ ಕನ್ನಡಪರ ಸಂಘಟನೆಗಳು ನೀಡಿದ್ದ ಕರ್ನಾಟಕ ಬಂದ್‌ಗೆ ಜಿಲ್ಲೆಯಲ್ಲಿ ಸ್ಪಂದನೆ ದೊರೆಯಲಿಲ್ಲ.

ಜಿಲ್ಲೆಯಲ್ಲಿ ಯಾವೊಂದೂ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಲು ಮುಂದಾಗಲಿಲ್ಲ. ಸಿದ್ದಾಪುರದಲ್ಲಿ ಕನ್ನಡಪರ ಸಂಘಟನೆಗಳ ಬೆರಳೆಣಿಕೆಯಷ್ಟು ಕಾರ್ಯಕರ್ತರು ಮರಾಠಿಗರ ದಬ್ಬಾಳಿಕೆ ವಿರೋಧಿಸಿ ಮನವಿ ಸಲ್ಲಿಸಿದರು.

ಕಾರವಾರ ಸೇರಿದಂತೆ ಜಿಲ್ಲೆಯಾದ್ಯಂತ ಎಲ್ಲ ನಗರ, ಪಟ್ಟಣಗಳಲ್ಲಿ ವ್ಯಾಪಾರ, ಸಾರಿಗೆ ಸಂಚಾರ, ಜನರ ಓಡಾಟ ಎಂದಿನಂತೆಯೇ ಇತ್ತು. ಬಂದ್‌ ಕರೆ ಜಿಲ್ಲೆಯ ಯಾವುದೇ ತಾಲ್ಲೂಕಿನಲ್ಲೂ ಪರಿಣಾಮ ಬೀರಲಿಲ್ಲ. ನಸುಕಿನಿಂದಲೇ ಬಸ್, ಆಟೊ, ಮ್ಯಾಕ್ಸಿ ಕ್ಯಾಬ್‍ಗಳು ಎಂದಿನಂತೆ ಸಂಚಾರ ನಡೆಸಿದವು.

ADVERTISEMENT

ಅಂಗಡಿಗಳು ಎಲ್ಲೆಡೆ ತೆರೆದಿದ್ದವು. ನಾಲ್ಕನೇ ಶನಿವಾರ ಆಗಿದ್ದರಿಂದ ಸರ್ಕಾರಿ ಕಚೇರಿಗಳು, ಬ್ಯಾಂಕ್‍ಗಳು ಬಾಗಿಲು ಮುಚ್ಚಿದ್ದವು. ಸರ್ಕಾರಿ ರಜೆ ಇದ್ದ ಕಾರಣ ಕಾರವಾರದಲ್ಲಿ ಜನರ ಓಡಾಟ ಕಡಿಮೆ ಇತ್ತು. ಉಳಿದಂತೆ ಮಾರುಕಟ್ಟೆಯಲ್ಲಿ ವಹಿವಾಟು ನಡೆಯಿತು.

‘ಎಸ್ಎಸ್ಎಲ್‍ಸಿ ಪರೀಕ್ಷೆಗಳು ನಡೆಯುತ್ತಿರುವ ಸಮಯದಲ್ಲಿ ಬಂದ್‍ಗೆ ಕರೆ ನೀಡಿದ್ದು ಸಮಂಜಸ ಎನಿಸಲಿಲ್ಲ. ಈ ಕಾರಣಕ್ಕೆ ಬಂದ್‍ಗೆ ಸಂಘಟನೆ ಬೆಂಬಲಿಸಲಿಲ್ಲ’ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ಜಿಲ್ಲಾ ಘಟಕದ ಅಧ್ಯಕ್ಷ ಅಕ್ಷಯ ಬಿ.ಎಸ್ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.