ADVERTISEMENT

ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್ ಕಾಲ ಮುಗಿದಿದೆ: ಜಗದೀಶ ಶೆಟ್ಟರ್

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2020, 8:18 IST
Last Updated 3 ಡಿಸೆಂಬರ್ 2020, 8:18 IST
ಜಗದೀಶ ಶೆಟ್ಟರ್
ಜಗದೀಶ ಶೆಟ್ಟರ್   

ಶಿರಸಿ: ರಾಜ್ಯದಲ್ಲಿ ಕಾಂಗ್ರೆಸ್‌ನಲ್ಲಿ ಕಚ್ಚಾಟ ಹೆಚ್ಚಿದೆ. ಜೆಡಿಎಸ್ ಅಡ್ರೆಸ್ ಇಲ್ಲದಂತಾಗಿದೆ. ಈಗ ಏನಿದ್ದರೂ ಬಿಜೆಪಿ ಯುಗ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೇಳಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಗುರುವಾರ ಆಯೋಜಿಸಲಾಗಿದ್ದ 'ಗ್ರಾಮ ಸ್ವರಾಜ್ಯ ಸಮಾವೇಶ'ದಲ್ಲಿ ದಿಕ್ಸೂಚಿ ಭಾಷಣ ಮಾಡಿ ಮಾತನಾಡಿದ ಅವರು, 'ಕಾರ್ಯಕರ್ತರನ್ನು ಗೆಲ್ಲಿಸಿ ನಾಯಕರನ್ನಾಗಿಸುವುದು ನಮ್ಮ ಈಗಿನ ಗುರಿ. ಪ್ರತಿ ಕಾರ್ಯಕರ್ತರನ್ನು ಗೌರವಿಸುವ ಪರಂಪರೆ ಬಿಕೆಪಿಯಲ್ಲಿ ಇದೆ. ಕುಟುಂಬ ರಾಜಕಾರಣ ನಮ್ಮ ಪಕ್ಷದಲ್ಲಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಒಂದೇ ಕುಟುಂಬದ ಪಾರುಪತ್ಯ. ಗಾಂಧಿ ಕುಟುಂಬ ಬಿಟ್ಟು ಬೇರೆಯವರಿಗೆ ಅಧಿಕಾರ ಇಲ್ಲ. ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಅಧಃಪತನಕ್ಕೆ ಹೋಗುತ್ತದೆ' ಎಂದರು.

'ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ, ಡಿಕೆಶಿ, ಪರಮೇಶ್ವರ್‌ರ ಪ್ರತ್ಯೇಕ ಗುಂಪುಗಳಿದೆ. ಅವರಲ್ಲೇ ಕಚ್ಚಾಟ ಹೆಚ್ಚಿತ್ತಿದೆ. ಜೆಡಿಎಸ್ ಪಕ್ಷದ ಕಥೆ ಮುಗಿದು ಯಾವುದೋ ಕಾಲವಾಗಿದೆ' ಎಂದು ವ್ಯಂಗ್ಯವಾಡಿದರು.

ADVERTISEMENT

'ಗ್ರಾಮ ಪಂಚಾಯ್ತಿ ಅಧ್ಯಕ್ಷ ಆಗುವವರು ಮುಖ್ಯಮಂತ್ರಿ ಇದ್ದಂತೆ. ಅವರು ಜನರಿಗೆ ಒಳ್ಳೆಯ ಆಡಳಿತ ನೀಡಬೇಕು. ಪೈಪೋಟಿ ಹೆಚ್ಚಿದೆ‌‌. ಕಾಂಗ್ರೆಸ್ ಗೆ ಅಭ್ಯರ್ಥಿ ಸಿಗುವುದಿಲ್ಲ. ಬಿಜಪಿಯಲ್ಲಿ ಅಭ್ಯರ್ಥಿಗಳಾಗಲು ಆಕಾಂಕ್ಷಿಗಳ ಸರತಿ ಇದೆ. ಆದರೆ ಭಿನ್ನಾಭಿಪ್ರಾಯ ಬರದಂತೆ ನೋಡಿಕೊಂಡು, ಸಮರ್ಥರನ್ನು ಚುನಾವಣೆಗೆ ನಿಲ್ಲಿಸಿ' ಎಂದು ಹೇಳಿದರು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಸಿ.ಸಿ.ಪಾಟೀಲ್ ಮಾತನಾಡಿ, 'ದೇಶಪ್ರೇಮ ಕೇವಲ ಪ್ರಧಾನಿಗೆ ಸೀಮಿತವಾಗಬಾರದು. ಗ್ರಾಮ ಪಂಚಾಯ್ತಿ ಸದಸ್ಯರಲ್ಲೂ ಇರಬೇಕು. ಅಂತಹವರನ್ನೇ ಗೆಲ್ಲಿಸಬೇಕು. ಸ್ವಾರ್ಥಕ್ಕೆ ಚುನಾವಣೆಗೆ ನಿಂತವರಿಗೆ ಬೆಂಬಲ ಬೇಡ' ಎಂದರು.

ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಮಾತನಾಡಿ, 'ಚುನಾವಣೆಗೆ ಸೈನಿಕರನ್ನು ಸಿದ್ದಗೊಳಿಸಿದ್ದೇವೆ. ಸ್ಥಳೀಯ ಕ್ಷೇತ್ರದ ಚುನಾವಣೆಗೆ ಗೆಲ್ಲಲು ಗ್ರಾಮ ಪಂಚಾಯ್ತಿ ಚುನಾವಣೆ ದಿಕ್ಸೂಚಿ. ಹೀಗಾಗಿ ಮೇಲ್ಮನೆಯಲ್ಲಿ ಬಿಜೆಪಿ ಬಹುಮತ ಪಡೆಯಲು ಈ ಚುನಾವಣೆ ಗೆಲ್ಲುವುದು ಅನಿವಾರ್ಯ' ಎಂದರು.

'ಗ್ರಾಮ ಪಂಚಾಯ್ತಿ ಚುನಾವಣೆಗೆ ಪಕ್ಷದ ಬೆಂಬಲಿತ ಅಭ್ಯರ್ಥಿ ಯಾರು ಎಂಬುದನ್ನು ಕಾರ್ಯಕರ್ತರೇ ನಿರ್ಧರಿಸಲಿ. ನಾಯಕರ ಹಸ್ತಕ್ಷೇಪ ಇರದು' ಎಂದರು.

ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ಧಿ ಮಾತನಾಡಿದರು.

ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ನಾಯಕ ಪ್ರಾಸ್ತಾವಿಕ ಭಾಷಣ ಮಾಡಿ, 'ಪಂಚಸೂತ್ರಗಳ ಆಧಾರದಲ್ಲಿ ಬಿಜೆಪಿ ಚುನಾವಣೆ ಎದುರಿಸುತ್ತಿದೆ. ಪಕ್ಷ ಘೋಷಿಸಿದ ಅಭ್ಯರ್ಥಿಗಳು ಮಾತ್ರ ಅಖಾಡದಲ್ಲಿರಬೇಕು' ಎಂದರು.

ಪ್ರಮೋದ ಹೆಗಡೆ ಮಾತನಾಡಿ, 'ಗ್ರಾಮ ಪಂಚಾಯ್ತಿ ಚುನಾವಣೆ ಎದುರಿಸುವ ನೈತಿಕತೆ ಇದ್ದರೆ ಅದು ಬಿಜೆಪಿಗೆ ಮಾತ್ರ. ವಿಕೇಂದ್ರೀಕರಣ ವ್ಯವಸ್ಥೆ ಬಲಪಡಿಸಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ'ಎಂದರು.

ರಾಜ್ಯ ಉಪಾಧ್ಯಕ್ಷ ರಾಜೇಂದ್ರ, ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಮುಖಂಡರಾದ ವಿ.ಎಸ್.ಪಾಟೀಲ್, ಸುನೀಲ ಹೆಗಡೆ, ವಿವೇಕಾನಂದ ವೈದ್ಯ, ಕೆ.ಜಿ.ನಾಯ್ಕ, ವಿನೋದ ಪ್ರಭು, ಅಜಿತ್ ಹೆಗಡೆ, ನಾಗರಾಜ ನಾಯ್ಕ ಇದ್ದರು. ಚಂದ್ರು ದೇವಾಡಿಗ ಎಸಳೆ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.