ADVERTISEMENT

Karnataka Monsoon | ಮಳೆ ಅಬ್ಬರ: ಉಕ್ಕಿ ಹರಿದ ನದಿ

ಅತ್ತಿಕಟ್ಟೆ ಗ್ರಾಮದ ಕೆರೆ ಏರಿ ಒಡೆದು ನೀರು ಸಂಪೂರ್ಣ ಖಾಲಿ

​ಪ್ರಜಾವಾಣಿ ವಾರ್ತೆ
Published 25 ಜುಲೈ 2025, 19:04 IST
Last Updated 25 ಜುಲೈ 2025, 19:04 IST
ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲ್ಲೂಕಿನ ಭುವನಗಿರಿ ಸಮೀಪ ಕುಮಟಾ–ಕೊಡಮಡಗಿ ರಾಜ್ಯ ಹೆದ್ದಾರಿಯ ಅಂಚಿನಲ್ಲಿ ಭೂಕುಸಿತ ಉಂಟಾಗಿರುವುದು
ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲ್ಲೂಕಿನ ಭುವನಗಿರಿ ಸಮೀಪ ಕುಮಟಾ–ಕೊಡಮಡಗಿ ರಾಜ್ಯ ಹೆದ್ದಾರಿಯ ಅಂಚಿನಲ್ಲಿ ಭೂಕುಸಿತ ಉಂಟಾಗಿರುವುದು   

ಹುಬ್ಬಳ್ಳಿ/ಶಿವಮೊಗ್ಗ: ಉತ್ತರ ಕರ್ನಾಟಕ ಮತ್ತು ಮಲೆನಾಡು ವ್ಯಾಪ್ತಿಯಲ್ಲಿ ಶುಕ್ರವಾರವೂ ಉತ್ತಮ ಮಳೆಯಾಗಿದೆ. ಧಾರವಾಡ, ಉತ್ತರ ಕನ್ನಡ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಜೋರು ಮಳೆಯಾಗಿದ್ದು, ಕೃಷಿ ಚಟುವಟಿಕೆಗಳು ಬಿರುಸುಗೊಂಡಿವೆ. ಕೆಲವೆಡೆ ಬೆಳೆಗಳು ಜಲಾವೃತವಾಗಿವೆ. 

ಉತ್ತರ ಕನ್ನಡ ಜಿಲ್ಲೆಯಾದ್ಯಂತ ವ್ಯಾಪಕ ಮಳೆ ಸುರಿಯುತ್ತಿದೆ. ಹೊಳೆಗಳು ಭರ್ತಿಯಾಗಿವೆ. ಪ್ರಮುಖ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಕರಾವಳಿ ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದ ಭಟ್ಕಳ, ಹೊನ್ನಾವರ ಭಾಗದ ಹಲವೆಡೆ ಜಲಾವೃತವಾಗಿ ಸಮಸ್ಯೆ ಉಂಟಾಗಿದೆ. ಕುಮಟಾ ತಾಲ್ಲೂಕಿನಲ್ಲಿ ಹರಿಯುವ ಬಡಗಣಿ ಹೊಳೆಯಲ್ಲಿ ಪ್ರವಾಹ ಉಂಟಾಗಿದ್ದು, ಹೊಳೆಯ ಅಂಚಿನ 17 ಮನೆಗಳ ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

ನಿರಂತರ ಮಳೆಯ ಕಾರಣ ಸಿದ್ದಾಪುರ ತಾಲ್ಲೂಕಿನ ಭುವನಗಿರಿ ಸಮೀಪ ಕೊಡಮಡಗಿ– ಕುಮಟಾ ರಾಜ್ಯ ಹೆದ್ದಾರಿಯ ಅಂಚಿನಲ್ಲಿ ಭಾರಿ ಪ್ರಮಾಣದಲ್ಲಿ ಭೂಕುಸಿತ ಸಂಭವಿಸಿದೆ.

ADVERTISEMENT

ಕೆರೆ ಏರಿ ಒಡೆದು ಬೆಳೆ ಜಲಾವೃತ: ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಅತ್ತಿಕಟ್ಟೆ ಗ್ರಾಮದಲ್ಲಿರುವ ಜೀನ ವಡ್ಡ ಕೆರೆಯ ಏರಿ ಒಡೆದಿದ್ದು, ಕೆರೆಯ ನೀರು ಸಂಪೂರ್ಣ ಖಾಲಿಯಾಗಿದೆ. ರೈತರ ಜಮೀನಿಗೆ ನೀರು ನುಗ್ಗಿದ್ದು, ಬೆಳೆಗಳು ಜಲಾವೃತಗೊಂಡು ಹಾನಿ ಉಂಟಾಗಿದೆ.

ಸುಮಾರು 13 ಎಕರೆ ವಿಸ್ತೀರ್ಣದಲ್ಲಿ ಕೆರೆಯಿದೆ. ಬ್ಯಾಡಗಿ ತಾಲ್ಲೂಕಿನಲ್ಲಿ ಹಲವು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಇದೇ ನೀರು ಕೆರೆ ಸೇರುತ್ತಿತ್ತು. ಗುಡ್ಡದಮಲ್ಲಾಪುರ ಏತ ನೀರಾವರಿ ಯೋಜನೆ ಮೂಲಕವೂ ಕೆರೆಗೆ ನೀರು ಹರಿಸಲಾಗುತ್ತಿತ್ತು. ಕೆರೆಯಲ್ಲಿ ನೀರು ಹೆಚ್ಚಾಗಿದ್ದರಿಂದ, ಶುಕ್ರವಾರ ನಸುಕಿನ ಜಾವದಲ್ಲಿ 30 ಅಡಿಯಷ್ಟು ಏರಿ ಒಡೆದಿದೆ. ಈ ನೀರು ಸಂಪೂರ್ಣವಾಗಿ ಹೊರಗೆ ಬಂದು, ಸುಮಾರು 15 ರೈತರ ಜಮೀನಿಗೆ ನುಗ್ಗಿದೆ. ಕರ್ಜಗಿ ಹಾಗೂ ಚಿಕ್ಕಮಗದೂರು ನಡುವಿನ ಕಿರು ಸೇತುವೆ ಭಾಗಶಃ ಮುಳುಗಿದೆ.

ಮಲೆನಾಡಿನಲ್ಲಿ ಮುಂದುವರಿದಿದೆ ಆರ್ಭಟ: ಶಿವಮೊಗ್ಗ ಸೇರಿದಂತೆ ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡ 24 ಗಂಟೆಗಳಲ್ಲಿ ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆಯಲ್ಲಿ ಅತಿಹೆಚ್ಚು 16.2 ಸೆಂ.ಮೀ ಮಳೆಯಾಗಿದೆ. ಹೊಸನಗರ ತಾಲ್ಲೂಕಿನ ವಾರಾಹಿ ಜಲಾನಯನ ಪ್ರದೇಶದ ಹುಲಿಕಲ್‌ನಲ್ಲಿ 16 ಸೆಂ.ಮೀ, ಮಾಸ್ತಿಕಟ್ಟೆಯಲ್ಲಿ 13.8, ಸಾವೇಹಕ್ಲು 13.5, ಮಾಣಿ 13.2, ಚಕ್ರಾದಲ್ಲಿ 11 ಸೆಂ.ಮೀ ಮಳೆ ಸುರಿದಿದೆ.

ನಿರಂತರ ಮಳೆಯ ಕಾರಣ ಶಿವಮೊಗ್ಗ ಹೊರತುಪಡಿಸಿ ಉಳಿದ ತಾಲ್ಲೂಕುಗಳಲ್ಲಿ ಶಾಲೆ–ಅಂಗನವಾಡಿಗಳಿಗೆ ರಜೆ ಘೋಷಿಸಲಾಗಿತ್ತು. ಇಡೀ ದಿನ ಸುರಿದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿತ್ತು.

ಮಳೆಯಿಂದ ಲಿಂಗನಮಕ್ಕಿ, ಮಾಣಿ, ಭದ್ರಾ ಹಾಗೂ ತುಂಗಾ ಜಲಾಶಯಗಳಿಗೆ ಒಳಹರಿವು ಹೆಚ್ಚಿದೆ. ಮಾಣಿ ಜಲಾಶಯದಿಂದ ಯಾವುದೇ ಸಂದರ್ಭದಲ್ಲಿ ನೀರು ಹರಿಸಲಾಗುವುದು. ನದಿಯ ಆಸುಪಾಸಿನ ಜನರು ಸುರಕ್ಷಿತ ಪ್ರದೇಶಕ್ಕೆ ತೆರಳಬೇಕು ಎಂದು ಕರ್ನಾಟಕ ವಿದ್ಯುತ್ ನಿಗಮದ ಪ್ರಕಟಣೆ ತಿಳಿಸಿದೆ. ಶಿವಮೊಗ್ಗದ ಅಶೋಕನಗರದ ಕುಮಾರ್ ಎಂಬವರ ಮನೆಯ ಚಾವಣಿ ಕುಸಿದುಬಿದ್ದಿದೆ. ಅದೃಷ್ಟವಶಾತ್, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಮನೆಗೆ ಹಾನಿ (ಬೀದರ್‌ ವರದಿ): ಸತತ ಮಳೆಗೆ  ಔರಾದ್‌ ತಾಲ್ಲೂಕಿನ ಚಿಂತಾಕಿಯ ಅಶೋಕ‌ ನಗರ ತಾಂಡಾ ಹಾಗೂ ಬರದಾಪೂರದಲ್ಲಿ ತಲಾ ಎರಡು ಮನೆಗಳ ಗೋಡೆ ಕುಸಿದು ಬಿದ್ದಿವೆ. ಕಮಲನಗರ ತಾಲ್ಲೂಕಿನ ಮುಧೋಳ (ಬಿ) ಗ್ರಾಮದಲ್ಲಿ ಮನೆಗೆ ಹಾನಿಯಾಗಿದೆ.

ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಅತ್ತಿಕಟ್ಟೆ ಗ್ರಾಮದ ಕೆರೆಯ ಏರಿ ಒಡೆದಿರುವುದು
ಹಾವೇರಿ ತಾಲ್ಲೂಕಿನ ಕರ್ಜಗಿ ಹಾಗೂ ಚಿಕ್ಕಮಗದೂರು ನಡುವಿನ ಕಿರು ಸೇತುವೆ ಭಾಗಶಃ ಮುಳುಗಡೆಯಾಗಿರುವುದು
ಹೆತ್ತೂರು ಸಮೀಪದ ಐಗೂರು ಗ್ರಾಮದಲ್ಲಿ ಹೇಮಾವತಿ ಉಪನದಿ ಉಕ್ಕಿ ಹರಿದು ಭತ್ತದ ಗದ್ದೆಗಳು ಜಲಾವೃತವಾಗಿವೆ.

ಮರ ಉರುಳಿ ಸಂಚಾರ ಸ್ಥಗಿತ:

ಮಡಿಕೇರಿ: ಭಾರಿ ಗಾಳಿ ಮಳೆಯಿಂದಾಗಿ ಮಡಿಕೇರಿ– ಸುಂಟಿಕೊಪ್ಪ ಮಾರ್ಗದ ಗದ್ದೆಹಳ್ಳದ ಬಳಿ ರಸ್ತೆಗೆ ಮರ ಉರುಳಿ ಸಂಚಾರ ಸ್ಥಗಿತಗೊಂಡಿತ್ತು. ಶಾಂತಳ್ಳಿಯಲ್ಲಿ 15 ಸೆಂ.ಮೀ ಭಾಗಮಂಡಲದಲ್ಲಿ 13 ಸಂಪಾಜೆ 10 ಸೆಂ.ಮೀ ಮಳೆಯಾಗಿದೆ. ಮಳೆ ಹಾನಿ ಪ್ರದೇಶಗಳಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.