ಶಿರಸಿ: ನಾಯಕರಿಗೆ ಅಸಮಾಧಾನವಿದ್ದರೆ ಪಕ್ಷದ ರಾಜ್ಯಾಧ್ಯಕ್ಷರ ಜತೆ ಚರ್ಚಿಸಬೇಕೇ ಹೊರತು ಬಹಿರಂಗವಾಗಿ ಹೇಳಿಕೆ ನೀಡುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಚ್.ವಿಶ್ವನಾಥ್ ಅವರು ಮುಖ್ಯಮಂತ್ರಿ ಅವರ ವಿರುದ್ಧ ಅಸಮಾಧಾನ ತೋಡಿಕೊಂಡು ಹೇಳಿಕೆ ನೀಡಿದ ಕುರಿತಂತೆ ಕೇಳಲಾದ ಪ್ರಶ್ನೆಗೆಪ್ರತಿಕ್ರಿಯಿಸಿ ‘ಪಕ್ಷದೊಳಗೆ ಚರ್ಚಿಸಲು ಅವಕಾಶ ಇದೆ. ಮನಸ್ಸಿಗೆ ಬೇಸರವಾಗಿದ್ದರೆ ರಾಜ್ಯಾಧ್ಯಕ್ಷರ ಬಳಿ ಮಾತನಾಡಬಹುದಿತ್ತು’ ಎಂದರು. ವಿಶ್ವನಾಥ್ ಅವರ ಹೇಳಿಕೆಗೆ ಇದಕ್ಕಿಂತ ಹೆಚ್ಚು ಮಾತನಾಡಲಾರೆ ಎಂದರು.
‘ನಾಲ್ಕು ವಿಧಾನಸಭಾ ಕ್ಷೇತ್ರಕ್ಕೆ ಒಂದು ಸಭೆ ನಡೆಸಲಾಗುತ್ತಿದೆ. ಬಿಜೆಪಿ ಗ್ರಾಮ ಪಂಚಾಯ್ತಿ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದೆ’ ಎಂದರು.
'ಕಾರ್ಯಕರ್ತರಿಗೆ ಸ್ಪೂರ್ತಿ ತುಂಬಲು, ಅವರನ್ನು ಪ್ರೋತ್ಸಾಹಿಸಲು ಇದು ನಾಯಕರಿಗೆ ಸದವಕಾಶ' ಎಂದು ಅವರು ಹೇಳಿದರು.
‘ಬಿಜೆಪಿ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯ ಜನರು ಸೇರುತ್ತಿದ್ದಾರೆ. ಇದು ರಾಜಕೀಯವಾಗಿ ಪಕ್ಷ ಮತ್ತಷ್ಟು ಗಟ್ಟಿಯಾಗುವ ಸೂಚನೆ. ಹಿಂದಿಗಿಂತ ಹೆಚ್ಚು ಸ್ಥಾನದಲ್ಲಿ ಗೆಲುವು ಸಾಧಿಸಲಿದ್ದೇವೆ’ ಎಂದರು.
'ನಿಗಮ ಮಂಡಳಿಯಲ್ಲಿ ಸ್ಥಾನಮಾನ ಸಿಗದ ಪ್ರಮುಖರ ಬಗ್ಗೆ ಚರ್ಚಿಸಲು ಸಚಿವರ ಸಭೆ ನಡೆಯಲಿದೆ' ಎಂದರು.
'ಹದಿನೇಳು ಶಾಸಕರು ಹೆಚ್.ವಿಶ್ವನಾಥ್ ಜತೆಗಿದ್ದೇವೆ. ಆದರೆ ಅವರು ಬಹಿರಂಗವಾಗಿ ಹೇಳಿಕೆ ನೀಡಬಾರದು. ಒಂದು ಗುರಿಯೊಂದಿಗೆ ಎಲ್ಲರೂ ಒಟ್ಟಗಿ ಹೋಗಿದ್ದೇವು. ಅದನ್ನು ಈಡೇರಿಸಿದ್ದೇವೆ' ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಸಿ.ಸಿ.ಪಾಟೀಲ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.