ADVERTISEMENT

ಕಾರವಾರ:‘ಕೆಸರು ಗದ್ದೆ’ಯಲ್ಲಿ ಕ್ರೀಡಾಕೂಟ

ಕ್ರೀಡಾಂಗಣಗಳಲ್ಲಿ ಸೌಲಭ್ಯ ಕೊರತೆ:ಕಮರುತ್ತಿರುವ ಕ್ರೀಡಾ ಪ್ರತಿಭೆ

ಗಣಪತಿ ಹೆಗಡೆ
Published 8 ಸೆಪ್ಟೆಂಬರ್ 2025, 5:28 IST
Last Updated 8 ಸೆಪ್ಟೆಂಬರ್ 2025, 5:28 IST
ಶಿರಸಿಯ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಕೆಸರಿನಿಂದ ಕೂಡಿದ್ದ ಟ್ರ್ಯಾಕ್‌ನಲ್ಲಿ ಓಡುವಾಗ ವಿದ್ಯಾರ್ಥಿನಿಯೊಬ್ಬರು ಕಾಲುಜಾರಿ ಬಿದ್ದಿರುವುದು.
ಶಿರಸಿಯ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಕೆಸರಿನಿಂದ ಕೂಡಿದ್ದ ಟ್ರ್ಯಾಕ್‌ನಲ್ಲಿ ಓಡುವಾಗ ವಿದ್ಯಾರ್ಥಿನಿಯೊಬ್ಬರು ಕಾಲುಜಾರಿ ಬಿದ್ದಿರುವುದು.   

ಕಾರವಾರ: ಕಳೆದ ಬಾರಿ 14ರ ವಯೋಮಿತಿ ಒಳಗಿನವರ ಕ್ರೀಡಾಕೂಟದಲ್ಲಿ ರಾಜ್ಯಮಟ್ಟ ಪ್ರತಿನಿಧಿಸಿದ್ದ ಶಿರಸಿಯ ಸಂಜನಾ ಈ ಬಾರಿ ವಲಯ ಮಟ್ಟದ ಸ್ಪರ್ಧೆ ನಡೆಯುವಾಗಲೆ ಬಿದ್ದು ಕಾಲು ಮುರಿತಕ್ಕೊಳಗಾದರು. ಜೊಯಿಡಾದ ಶಿವಾಜಿ ಓಟದ ಗುರಿ ತಲುಪುವಷ್ಟರಲ್ಲಿ ಬಿದ್ದಿದ್ದರಿಂದ ಮುಂದಿನ ಹಂತದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಾಗದೆ ವಂಚಿತರಾದರು.

ಇವು ಕೇವಲ ಒಂದೆರಡು ಉದಾಹರಣೆಗಳಷ್ಟೆ. ಸುಸಜ್ಜಿತವಾದ ಯಾವುದೇ ಮೈದಾನ ಜಿಲ್ಲೆಯಲ್ಲಿಲ್ಲ. ಮಳೆನೀರು ನಿಂತು ಕೆಸರುಮಯವಾದ ಬಯಲಿನಲ್ಲಿ ಕ್ರೀಡಾ ಸ್ಪರ್ಧೆ ನಡೆಯುತ್ತವೆ. ಇದರಿಂದ ಕ್ರೀಡಾಪಟುಗಳು ಇದ್ದು ಗಾಯಗೊಳ್ಳುವ ಘಟನೆ ನಿರಂತರವಾಗಿದೆ. ಪ್ರತಿ ತಾಲ್ಲೂಕುಗಳಲ್ಲಿ ಉತ್ತಮ ಕ್ರೀಡಾಪಟುಗಳಿದ್ದರೂ ಅವ್ಯವಸ್ಥೆಯ ಕ್ರೀಡಾಂಗಣ, ಸೌಲಭ್ಯದ ಕೊರತೆಯಿಂದ ಅವರ ಪ್ರತಿಭೆ ಅನಾವರಣಕ್ಕೆ ಅಡ್ಡಿಯಾಗುತ್ತಿದೆ. ಆರಂಭಿಕ ಹಂತದಲ್ಲೇ ಪ್ರತಿಭೆಗಳು ಕಮರುತ್ತಿವೆ.

ಇಲ್ಲಿನ ಮಾಲಾದೇವಿ ಮೈದಾನ ಮಳೆಗಾಲದಲ್ಲಿ ಕೆಸರುಗದ್ದೆಯಂತಾಗುತ್ತದೆ. ಅದರಲ್ಲೇ ಕ್ರೀಡಾ ಚಟುವಟಿಕೆ ನಡೆಸುವ ಅನಿವಾರ್ಯತೆ ಇದೆ. ಶೌಚಾಲಯ, ಡ್ರೆಸ್ಸಿಂಗ್ ಕೊಠಡಿಗಳೂ ಇಲ್ಲಿಲ್ಲ. ಕಾಯಂ ಕ್ರೀಡಾ ತರಬೇತುದಾರರು ಜಿಲ್ಲೆಯ ಬಹುತೇಕ ತಾಲ್ಲೂಕುಗಳಲ್ಲಿ ಇಲ್ಲ.

ADVERTISEMENT

ಮುಂಡಗೋಡ ಪಟ್ಟಣದಲ್ಲಿ ತಾಲ್ಲೂಕು ಕ್ರೀಡಾಂಗಣ ನಿರ್ಮಿಸಿ ದಶಕಗಳೇ ಕಳೆದಿವೆ. ಆದರೆ, ಮೂಲಸೌಕರ್ಯಗಳು ಇಲ್ಲ. ತಗ್ಗುಗಳಿಂದ ತುಂಬಿಕೊಂಡಿರುವ ಓಟದ ಟ್ರ್ಯಾಕ್‌, ಸುಣ್ಣ ಬಣ್ಣ ಕಾಣದ ಪ್ರೇಕ್ಷಕರ ಆಸನದಂತಿರುವ ಮೆಟ್ಟಿಲುಗಳು, ನೀರು ಹಾಗೂ ನಿರ್ವಹಣೆ ಇಲ್ಲದ ಶೌಚಾಲಯಗಳು, ಕುಡಿಯುವ ನೀರಿಗೂ ಪರದಾಟ..ಹೀಗೆ ಸಾಲು ಸಾಲು ಸಮಸ್ಯೆಗಳು ಇಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ಕಂಡುಬರುತ್ತವೆ.

‘ಈಚೆಗೆ ಇಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆದಿದ್ದ ವಲಯಮಟ್ಟದ ಕ್ರೀಡಾಕೂಟದಲ್ಲಿ ಕೆಸರಿನಲ್ಲಿಯೇ ಏಳುತ್ತ, ಬೀಳುತ್ತ ಆಟವಾಡಿದರೆ, ಇನ್ನೂ ಕೆಲವು ಶಾಲೆಯ ಮಕ್ಕಳು ಕೆಸರಿನಂತಾಗಿರುವ ಮೈದಾನದಲ್ಲಿ ಆಡುವುದಿಲ್ಲ ಎಂದು ಹೇಳಿದ್ದರಿಂದ, ಬೇರೆ ದಿನಕ್ಕೆ ಆಟಗಳನ್ನು ಮುಂದೂಡಿದ ಘಟನೆ ಜರುಗಿದೆ’ ಎಂದು ಸಾಮಾಜಿ ಕಾರ್ಯಕರ್ತ ಪ್ರಕಾಶ ಬಡಿಗೇರ ಹೇಳಿದರು.

ಜೊಯಿಡಾದಲ್ಲಿ ಕ್ರೀಡಾಕೂಟ ಆಯೋಜಿಸಲು ಸುಸಜ್ಜಿತ ಕ್ರೀಡಾಂಗಣ ವ್ಯವಸ್ಥೆ ಇಲ್ಲ. ತಾಲ್ಲೂಕು ಕೇಂದ್ರದಲ್ಲಿ ಒಂದು ಭಾಗದಲ್ಲಿ ಜನರು ಕುಳಿತುಕೊಳ್ಳಲು ಗ್ಯಾಲರಿ ವ್ಯವಸ್ಥೆ ಇರುವ ಮೈದಾನವಿದೆ. ಅದು ಬೇಸಿಗೆಯಲ್ಲಿ ಕ್ರಿಕೆಟ್ ಪಂದ್ಯಾಟಗಳಿಗೆ ಮಾತ್ರ ಬಳಕೆಯಾಗುತ್ತದೆ. ಮಳೆಗಾಲದಲ್ಲಿ ಕೆಸರು ಗದ್ದೆಯಂತಾಗುತ್ತದೆ.

ಭಟ್ಕಳದ ತಾಲ್ಲೂಕು ಕ್ರೀಡಾಂಗಣದಲ್ಲಿ ಮೂಲಸೌಕರ್ಯ ಇರದ ಕಾರಣ ದಸರಾ ಕ್ರೀಡಾಕೂಟ, ವಲಯ ಮಟ್ಟದ ಕ್ರೀಡಾಕೂಟಗಳನ್ನು ಶಾಲಾ, ಕಾಲೇಜು ಮೈದಾನದಲ್ಲಿಯೇ ನಡೆಸಲಾಗುತ್ತದೆ. ‘ಹೊನಲು ಬೆಳಕಿನ ಪಂದ್ಯಾಟ ನಡೆಸಲು ಕ್ರಿಡಾಂಗಣದಲ್ಲಿ ರಾತ್ರಿ ಬೆಳಕಿನ ವ್ಯವಸ್ಥೆ ಕೂಡ ಇಲ್ಲ. ಕ್ರೀಡಾಂಗಣವನ್ಜು ಪಂದ್ಯಾಟಕ್ಕೆ ಅನುಕೂಲವಾಗುವಂತೆ ರೂಪಿಸಬೇಕು’ ಎನ್ನುತ್ತಾರೆ ಮುಬಾಶೀರ ಹಲ್ಲಾರೆ.

ಯಲ್ಲಾಪುರ ಪಟ್ಟಣದ ಕಾಳಮ್ಮ ನಗರದಲ್ಲಿರುವ ತಾಲ್ಲೂಕು ಕ್ರೀಡಾಂಗಣ ನಿರ್ವಹಣೆಯ ಕೊರತೆ ಎದುರಿಸುತ್ತಿದೆ. ಮಳೆಗಾಲದಲ್ಲಿ ನೀರು ನಿಂತು ಕ್ರೀಡಾಕೂಟ ನಡೆಸಲು ತೊಂದರೆ ಉಂಟಾಗುತ್ತಿದೆ. ಕ್ರೀಡಾಂಗಣದಲ್ಲಿ ಎರಡು ವಾಲಿಬಾಲ್ ಅಂಗಳದ ವ್ಯವಸ್ಥೆ ಇತ್ತಾದರೂ ಈಗ ಅದು ನಿರ್ವಹಣೆ ಇಲ್ಲದೆ ಹಾಳಾಗಿದೆ. ವಿದ್ಯಾರ್ಥಿಗಳಿಗೆ ಓಟಕ್ಕೆ ಅನುಕೂಲವಾಗುವಂತೆ ಟ್ರ್ಯಾಕ್ ಹಾಕಲಾಗಿತ್ತು, ಈಗ ಅದರ ಗುರುತು ಸಿಗುವಂತಿಲ್ಲ ಎಂಬುದು ಹಿರಿಯ ಕ್ರೀಡಾಪಟು ಜಿ.ಎನ್.ತಾಂಡುರಾಯನ್ ಅವರ ದೂರು.

ಸಿದ್ದಾಪುರ ಪಟ್ಟಣದ ಧನ್ವಂತರಿ ಆಯುರ್ವೇದ ಕಾಲೇಜು ಪಕ್ಕದಲ್ಲಿರುವ ತಾಲ್ಲೂಕು ಕ್ರೀಡಾಂಗಣ ಕೋಲಸಿರ್ಸಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರುತ್ತದೆ. ಪೆವಿಲಿಯನ್ ಇದ್ದರೂ ಸರಿಯಾದ ನಿರ್ವಹಣೆ ಇಲ್ಲ, ರಾತ್ರಿ ವೇಳೆ ಮದ್ಯ ವ್ಯಸನಿಗಳು ಕ್ರೀಡಾಂಗಣದಲ್ಲಿಯೇ ಮದ್ಯಪಾನ ಮಾಡಿ ಬಾಟಲಿ ಮತ್ತು ಕಸವನ್ನು ಅಲ್ಲಿಯೇ ಬಿಟ್ಟು ಹೋಗುತ್ತಾರೆ ಎಂಬ ದೂರು ಹೆಚ್ಚಿದೆ.

‘ಕೆಲ ದಿನಗಳ ಹಿಂದೆ ತಂತಿ ಬೇಲಿಯನ್ನು ನಿರ್ಮಿಸಲಾಗಿತ್ತು. ಕಿಡಿಗೇಡಿಗಳು ಅದನ್ನು ಹಾಳು ಮಾಡಿದ್ದಾರೆ. ಸದ್ಯ ಗೇಟ್ ವ್ಯವಸ್ಥೆಯನ್ನು ಮಾಡಲಾಗಿದೆ’ ಎಂದು ಪಿಡಿಒ ಸುಬ್ರಹ್ಮಣ್ಯ ಹೆಗಡೆ ತಿಳಿಸಿದರು.

ಹೊನ್ನಾವರ ತಾಲ್ಲೂಕಿನಲ್ಲಿ ಹೆಚ್ಚಿನ ಕ್ರೀಡಾಂಗಣಗಳು ಖಾಸಗಿ ಸಂಸ್ಥೆಗಳ ಸುಪರ್ದಿಯಲ್ಲಿವೆ. ಯುಜಿಸಿ ಅನುದಾನದಲ್ಲಿ ಕೆಲ ವರ್ಷಗಳ ಹಿಂದೆ ನವೀಕರಿಸಲಾಗಿರುವ ಪಟ್ಟಣದ ಎಸ್‍ಡಿಎಂ ಕಾಲೇಜಿನ ವಿಶಾಲ ಕ್ರೀಡಾಂಗಣದಲ್ಲಿ ಇಲಾಖಾ ಕ್ರೀಡಾಕೂಟ ಸೇರಿದಂತೆ ದೊಡ್ಡ ಮಟ್ಟದ ಹಲವು ಕ್ರೀಡಾ ಚಟುವಟಿಕೆಗಳು ನಡೆಯುತ್ತವೆ.

‘ಗ್ರಾಮೀಣ ಹಾಗೂ ಪಟ್ಟಣದಲ್ಲಿ ಸುಸಜ್ಜಿತ ಆಟದ ಮೈದಾನ ಇಲ್ಲದಿರುವುದು ಕ್ರೀಡಾ ಪ್ರತಿಭೆಗಳ ಅನಾವರಣಕ್ಕೆ ಹಿನ್ನೆಡೆಯಾಗಿದೆ’ ಎನ್ನುತ್ತಾರೆ ಎಸ್‍ಡಿಎಂ ಕಾಲೇಜಿನ ಕ್ರೀಡಾ ನಿರ್ದೇಶಕ ಆರ್.ಕೆ.ಮೇಸ್ತ.

ಅಂಕೋಲಾ ಪಟ್ಟಣದಲ್ಲಿರುವ ಜೈಹಿಂದ್ ಕ್ರೀಡಾಂಗಣ ಕ್ರೀಡಾ ಚಟುವಟಿಕೆಗೆ ಆಸರೆಯಾಗಿದೆ. ಇಲ್ಲಿ ಸರಿಯಾದ ನಿರ್ವಹಣೆ ಇಲ್ಲದೇ ಮತ್ತು ಸಮತಟ್ಟು ಇಲ್ಲದ ಕಾರಣಕ್ಕೆ ಮಳೆಗಾಲದಲ್ಲಿ ಮೈದಾನವು ಕೆಸರಾಗಿ ಅಥ್ಲೆಟಿಕ್ಸ್ ಸ್ಪರ್ಧೆ ನಡೆಸಲು ಅಡ್ಡಿಯಾಗುತ್ತಿದೆ ಎನ್ನುತ್ತಾರೆ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ವಿಜಯ ಕುಮಾರ್.

ಕುಮಟಾ ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಅಂಚಿಗೆ ಇರುವ ಕೆನರಾ ಎಜುಕೇಷನ್ ಸೊಸೈಟಿ ಮಾಲೀಕತ್ವದ ಮಹಾತ್ಮಾಗಾಂಧಿ ಮೈದಾನದಲ್ಲಿ ಕ್ರೀಡೆಗೆ ಕನಿಷ್ಠ ವ್ಯವಸ್ಥೆ ಇದೆ ಎಂಬ ದೂರುಗಳಿವೆ.

‘ಮೂರೂರು ರಸ್ತೆಯ ಗುಡ್ಡದ ಮೇಲೆ ಕ್ರೀಡಾ ಇಲಾಖೆ ವತಿಯಿಂದ ಸುಸಜ್ಜಿತ ಒಳಾಂಗಣ ಮೈದಾನ ಜೊತೆಗೆ ಕ್ರೀಡಾ ವಸತಿ ನಿಲಯ ನಿರ್ಮಿಸುವ ಉದ್ದೇಶ ಹೊಂದಲಾಗಿದೆ’ ಎಂದು ಶಾಸಕ ದಿನಕರ ಶೆಟ್ಟಿ ಹೇಳುತ್ತಾರೆ.

–––––––––––––––

ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ಶಾಂತೇಶ ಬೆನಕನಕೊಪ್ಪ, ಎಂ.ಜಿ.ಹೆಗಡೆ, ಎಂ.ಜಿ.ನಾಯ್ಕ, ಮೋಹನ ನಾಯ್ಕ, ಜ್ಞಾನೇಶ್ವರ ದೇಸಾಯಿ, ಸುಜಯ್ ಭಟ್, ಪ್ರವೀಣಕುಮಾರ ಸುಲಾಖೆ, ವಿಶ್ವೇಶ್ವರ ಗಾಂವ್ಕರ, ಅಜಿತ್ ನಾಯಕ.

ಮಳೆನೀರು ನಿಂತು ಕೆಸರುಗದ್ದೆಯಂತಾಗಿರುವ ಕಾರವಾರದ ಮಾಲಾದೇವಿ ಮೈದಾನದಲ್ಲಿ ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗೆ ಸಿದ್ಧಗೊಂಡಿದ್ದರು.
ಜೊಯಿಡಾದ ತಾಲ್ಲೂಕು ಕ್ರೀಡಾಂಗಣದಲ್ಲಿ ಮಳೆನೀರು ನಿಂತಿರುವುದು.
ಕಾರವಾರ ಮುಂಡಗೋಡ ಯಲ್ಲಾಪುರ ಕ್ರೀಡಾಂಗಣದಲ್ಲಿ ಸದ್ಯದಲ್ಲೇ ಶೌಚಾಲಯ ಡ್ರೆಸ್ಸಿಂಗ್ ಕೊಠಡಿ ವ್ಯವಸ್ಥೆ ಕಲ್ಪಿಸಲಾಗುವುದು ನಿರ್ದೇಶಕ
ರವಿ ನಾಯ್ಕ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ
ಜೊಯಿಡಾದಲ್ಲಿ ಕ್ರೀಡಾ ಚಟುವಟಿಕೆಯಲ್ಲಿ ಪ್ರತಿಭಾವಂತರಿದ್ದರೂ ತರಬೇತಿದಾರರು ಸೂಕ್ತ ವ್ಯವಸ್ಥೆ ಇಲ್ಲದಿರುವುದು ಸಮಸ್ಯೆಯಾಗಿದೆ
ಸುದೇಶ ಮೀರಾಶಿ ಕ್ರೀಡಾಪಟು
ಯುವಜನ ಸೇವೆ ಹಾಗೂ ಕ್ರೀಡಾ ಇಲಾಖೆ ಅರಣ್ಯ ಇಲಾಖೆಗೆ ಪ್ರಸ್ತಾವ ಸಲ್ಲಿಸಿದರೆ ಕ್ರೀಡಾಂಗಣಕ್ಕೆ 5 ಹೆಕ್ಟೇರ್‌ವರೆಗೆ ಜಾಗ ಮಂಜೂರು ಪಡೆಯಲು ಅವಕಾಶವಿದೆ
ಯೋಗೀಶ ಸಿ.ಕೆ ಹೊನ್ನಾವರ ಉಪ ಅರಣ್ಯ ಸಂರಕ್ಷಣಾಧಿಕಾರಿ

ಸಿಂಥೆಟಿಕ್ ಟ್ರ್ಯಾಕ್ ಇಲ್ಲದ ಜಿಲ್ಲೆ

ಶಿರಸಿಯಲ್ಲಿ ಜಿಲ್ಲಾ ಕ್ರೀಡಾಂಗಣ ಇದ್ದರೂ ಮೂಲಸೌಕರ್ಯದ ಕೊರತೆಯಿಂದ ಮಳೆಗಾಲದ ಸಂದರ್ಭದಲ್ಲಿ ಕೆಸರುಗದ್ದೆಯಂತಾಗಿ ಕ್ರೀಡಾಳುಗಳು ಬಿದ್ದು ಗಾಯಗೊಳ್ಳುವ ಪ್ರಸಂಗ ಪದೇ ಪದೇ ನಡೆಯುತ್ತಿದೆ.

‘ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಮಳೆಗಾಲದ ವೇಳೆ ನೀರು ಕ್ರೀಡಾಂಗಣದಲ್ಲಿ ನಿಲ್ಲದಂತೆ ವ್ಯವಸ್ಥೆ ಮಾಡಿದ್ದರೂ ಸಮರ್ಪಕವಾಗಿಲ್ಲ. ಹೀಗಾಗಿ ನೀರು ಒಳಗಡೆಯೇ ನಿಂತು ಸಮಸ್ಯೆಗೆ ಕಾರಣವಾಗಿದೆ. ಸಿಂಥೆಟಿಕ್ ಟ್ಯ್ರಾಕ್ ವ್ಯವಸ್ಥೆ ಅಳವಡಿಕೆ ಮಾಡುವಂತೆ ಸಾಕಷ್ಟು ಒತ್ತಡವಿದ್ದರೂ ಈವರೆಗೆ ಸಾಧ್ಯವಾಗಿಲ್ಲ. ಸೂಕ್ತ ತರಬೇತುದಾರರಿಲ್ಲ ಭದ್ರತೆಯಿಲ್ಲ ಕ್ರೀಡಾಕೂಟದ ಸುತ್ತ ಗಿಡಗಳು ಬೆಳೆದಿವೆ. ಜಿಮ್ ಕೂಡ ಹಳೆಯದಾಗಿದೆ’ ಎಂದು ಸ್ಪಂದನಾ ಕ್ರೀಡಾ ಅಕಾಡೆಮಿ ಅಧ್ಯಕ್ಷ ರವೀಂದ್ರ ನಾಯ್ಕ ದೂರುತ್ತಾರೆ.

ಖಾಸಗಿ ಮೈದಾನ ಅವಲಂಬನೆ

ದಾಂಡೇಲಿ ತಾಲ್ಲೂಕು ಘೋಷಣೆ ಆಗಿ 6 ವರ್ಷ ಕಳೆದರೂ ಶಾಲಾ ಕ್ರೀಡಾಕೂಟ ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟ ನಡೆಸಲು ವ್ಯವಸ್ಥಿತ ಕ್ರೀಡಾಂಗಣ ಹೊಂದಿಲ್ಲ. ಕ್ರೀಡಾಕೂಟ ನಡೆಯಬೇಕಾದರೆ ಡಿಎಫ್‍ಎ ಮೈದಾನವನ್ನು ಅವಲಂಬಿಸಬೇಕು.

ಇದು ಕ್ರೀಡೆ ಯೋಗ್ಯವಾಗಿಲ್ಲ. ಓಟದ ಸ್ಪರ್ಧೆಗೆ ಟ್ರ‍್ಯಾಕ್ ಎತ್ತರ ಜಿಗಿತ ಸೇರಿದಂತೆ ಇತರೆ ಕ್ರೀಡೆ ನಡೆಸಲು ಕಷ್ಟವಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆ ಕಾರಣಕ್ಕೆ ಮೈದಾನದಲ್ಲಿ ನೀರು ನಿಂತು ಈಚೆಗೆ ನಡೆದ ದಸರಾ ಕ್ರೀಡಾಕೂಟ ಹಾಗೂ ವಲಯಮಟ್ಟದ ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳು ಜಾರಿ ಬಿದ್ದು ಗಾಯಗಳಾದ ಉದಾಹರಣೆಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.