
ಕಾರವಾರ: ರಾಜ್ಯ ಸರ್ಕಾರವು ಮುಂದಿನ ಐದು ವರ್ಷಗಳ ಅವಧಿಗೆ ರೂಪಿಸಿರುವ ಹೊಸ ಪ್ರವಾಸೋದ್ಯಮ ನೀತಿ ಭಾಗವಾಗಿ ಪರಿಷ್ಕರಿಸಿದ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ನಿರ್ಬಂಧಿತ ತಾಣಗಳನ್ನೂ ಸೇರಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
2024–29ರ ಅವಧಿಗೆ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆ ಅನುಷ್ಠಾನಕ್ಕೆ ಪ್ರವಾಸಿ ತಾಣಗಳ ಪಟ್ಟಿ ಪರಿಷ್ಕರಿಸಲಾಗಿದೆ. ಹೊಸ ಪಟ್ಟಿ ಅನ್ವಯ ಜಿಲ್ಲೆಯಲ್ಲಿನ ಅಧೀಕೃತ ಪ್ರವಾಸಿ ತಾಣಗಳ ಸಂಖ್ಯೆ 86ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲೇ ಅತಿ ಹೆಚ್ಚು ಪ್ರವಾಸಿ ತಾಣಗಳನ್ನು ಹೊಂದಿರುವ ಪಟ್ಟಿಯಲ್ಲಿ ಜಿಲ್ಲೆಯು 4ನೇ ಸ್ಥಾನದಲ್ಲಿದೆ.
ಆದರೆ, ಹೊಸ ಪಟ್ಟಿಯಲ್ಲಿ ನಿರ್ಬಂಧಿತ ಪ್ರದೇಶ ಎಂದು ಕೇಂದ್ರ ಸರ್ಕಾರದ ದೀಪಸ್ತಂಭ ಮತ್ತು ದೀಪನೌಕೆಗಳ ಮಹಾನಿರ್ದೇಶನಾಲಯ ಪರಿಗಣಿಸಿದ ‘ದೇವಗಡ ದ್ವೀಪ (ಲೈಟ್‍ಹೌಸ್ ದ್ವೀಪ)’ ಸೇರಿದೆ. ಅಲ್ಲದೆ, ಜಂಗಲ್ ಲಾಡ್ಜಸ್ ಆ್ಯಂಡ್ ರೆಸಾರ್ಟ್ ಸಂಸ್ಥೆಯ ಅಧೀನದಲ್ಲಿರುವ ಸದಾಶಿವಗಡ ಕೋಟೆಯೂ ಇದೆ. ಕೆಪಿಸಿ ಅಧೀನದಲ್ಲಿರುವ ಅಂಬಿಕಾ ನಗರದ ಸೈಕ್ಸ್ ಪಾಯಿಂಟ್ ಕೂಡ ಪಟ್ಟಿಯಲ್ಲಿದೆ.
‘ಸರ್ಕಾರ ಪ್ರಕಟಿಸಿರುವ ಅಧೀಕೃತ ಪ್ರವಾಸಿ ತಾಣಗಳ ಪಟ್ಟಿಯಲ್ಲಿರುವ ದೇವಗಡ ದ್ವೀಪಕ್ಕೆ ಪ್ರವಾಸಿಗರು ಬರದಂತೆ ಎಚ್ಚರಿಸುವ ಫಲಕ ಹಾಕಲಾಗಿದೆ. ನಿರ್ಬಂಧಿತ ಪ್ರದೇಶ ಎಂದು ಘೋಷಿಸಲಾಗಿದೆ. ಸದಾಶಿವಗಡ ಕೋಟೆಯ ದ್ವಾರ ಹೊರತುಪಡಿಸಿ, ಅಲ್ಲಿ ಕೋಟೆಯ ಪಳಿಯುಳಿಕೆಯೂ ಇಲ್ಲ. ಅಲ್ಲದೆ, ಇಲ್ಲಿಗೆ ತೆರಳಲು ಜೆಎಲ್‌ಆರ್ ನಿರ್ಬಂಧ ವಿಧಿಸುತ್ತಿದೆ. ಅಂಬಿಕಾನಗರದ ಸೈಕ್ಸ್ ಪಾಯಿಂಟ್ ವೀಕ್ಷಣೆಗೆ ಪ್ರಭಾವಿಗಳ ಹೊರತಾಗಿ, ಸಾಮಾನ್ಯ ಪ್ರವಾಸಿಗರ ವೀಕ್ಷಣೆಗೆ ಅವಕಾಶ ಸಿಗದು’ ಎನ್ನುತ್ತಾರೆ ಪ್ರವಾಸೋದ್ಯಮಿಯೊಬ್ಬರು.
ನಿರ್ಬಂಧಿತ ತಾಣಗಳೂ ಪ್ರವಾಸಿ ತಾಣಗಳ ಪಟ್ಟಿಗೆ ಸೇರಿರುವ ಬಗ್ಗೆ ಪ್ರತಿಕ್ರಿಯೆಗೆ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರಿಗೆ ಕರೆ ಮಾಡಿದರೂ ಅವರು ಕರೆ ಸ್ವೀಕರಿಸಲಿಲ್ಲ.
‘ಅಂಜದೀವ್’ ಪಟ್ಟಿಯಿಂದ ಹೊರಕ್ಕೆ
ಕಾರವಾರ ಸಮೀಪದ ನೌಕಾದಳದ ವ್ಯಾಪ್ತಿಯಲ್ಲಿರುವ ಅಂಜದೀವ್ ದ್ವೀಪ ಹಲವು ವರ್ಷಗಳಿಂದ ಸರ್ಕಾರದ ಅಧೀಕೃತ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಸೇರಿತ್ತು. ಪ್ರತಿ ವರ್ಷ ಪ್ರವಾಸಿಗರ ಸಂಖ್ಯೆ ಲೆಕ್ಕ ಹಾಕುವ ವೇಳೆ ಪಟ್ಟಿಯಲ್ಲಿ ಅಂಜದೀವ್ ಕೂಡ ಸೇರುತ್ತಿತ್ತು. ಆದರೆ ಅಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಶೂನ್ಯ ಎಂದು ತೋರಿಸಲಾಗುತ್ತಿತ್ತು. ಪರಿಷ್ಕೃತ ಪಟ್ಟಿಯಲ್ಲಿ ಅಂಜದೀವ್ ದ್ವೀಪ ಕೈಬಿಡಲಾಗಿದೆ.
ತಾಣಗಳ ಸಂಖ್ಯೆ ಹೆಚ್ಚಳ
ಜಿಲ್ಲೆಯಲ್ಲಿ ಈ ಮೊದಲು ಪ್ರವಾಸೋದ್ಯಮ ಇಲಾಖೆ ಅಧೀಕೃತವಾಗಿ ಗುರುತಿಸಿದ್ದ 40 ತಾಣಗಳು ಮಾತ್ರ ಇದ್ದವು. ಅವುಗಳ ಸಂಖ್ಯೆ ಈಗ 86ಕ್ಕೆ ಏರಿಕೆಯಾಗಿದೆ. ಕಾರವಾರದ ಭೀಮಕೋಲ ಸರೋವರ ನಾಗರಮಡಿ ಜಲಪಾತ ಸೇರಿದಂತೆ ಹಲವು ತಾಣಗಳು ಪಟ್ಟಿಗೆ ಹೊಸದಾಗಿ ಸೇರ್ಪಡೆಗೊಂಡಿವೆ. ‘ಅಧಿಸೂಚಿತ ಪಟ್ಟಿಯಲ್ಲಿದ್ದ 40 ತಾಣಗಳಿಗೆ ವಾರ್ಷಿಕವಾಗಿ ಪ್ರವಾಸಿಗರ ಭೇಟಿ ಲೆಕ್ಕಾಚಾರ ಹಾಕಿದಾಗಲೇ ಸಂಖ್ಯೆ 1 ಕೋಟಿಗೂ ಹೆಚ್ಚು ದಾಟುತ್ತಿತ್ತು. ಪರಿಷ್ಕೃತ ಪಟ್ಟಿ ಪ್ರಕಾರ ತಾಣಗಳ ಸಂಖ್ಯೆ ಹೆಚ್ಚಿರುವುದರಿಂದ ಪ್ರವಾಸಿಗರ ಭೇಟಿ ಹೆಚ್ಚಲಿದೆ. ಅಲ್ಲದೆ ಪ್ರವಾಸೋದ್ಯಮ ಅಭಿವೃದ್ಧಿಗೂ ಇವು ಪೂರಕ ಆಗಲಿವೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.