ADVERTISEMENT

ಕಾರವಾರ: ಕೊಂಕಣಿಯಲ್ಲೂ ನಾಮಫಲಕ: ಸರ್ಕಾರಕ್ಕೆ ಪತ್ರ ಬರೆಯಲು ತೀರ್ಮಾನ

ಕಾರವಾರ ನಗರಸಭೆ ಠರಾವು

​ಪ್ರಜಾವಾಣಿ ವಾರ್ತೆ
Published 30 ಜೂನ್ 2022, 14:59 IST
Last Updated 30 ಜೂನ್ 2022, 14:59 IST
ಕಾರವಾರದಲ್ಲಿ ಗುರುವಾರ ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ, ಪೂರ್ಣಗೊಂಡ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ ಎಂಬ ಆರೋಪದ ವಿಚಾರದಲ್ಲಿ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ಪರಸ್ಪರ ವಾಗ್ವಾದ ಮಾಡಿದರು
ಕಾರವಾರದಲ್ಲಿ ಗುರುವಾರ ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ, ಪೂರ್ಣಗೊಂಡ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ ಎಂಬ ಆರೋಪದ ವಿಚಾರದಲ್ಲಿ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ಪರಸ್ಪರ ವಾಗ್ವಾದ ಮಾಡಿದರು   

ಕಾರವಾರ: ವಾರ್ಡ್‌ಗಳ ನಾಮಫಲಕಗಳಲ್ಲಿ ಕನ್ನಡದೊಂದಿಗೆ ದೇವನಾಗರಿ ಲಿಪಿಯಲ್ಲೂ ಹೆಸರು ಬರೆಯಲು ನಗರಸಭೆ ಗುರುವಾರ ಠರಾವು ಸ್ವೀಕರಿಸಿದೆ. ಅಲ್ಲದೇ ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದು ಅಭಿಪ್ರಾಯ ಕೇಳಲು ತೀರ್ಮಾನಿಸಿದೆ.

ನಾಮಫಲಕಗಳಲ್ಲಿ ದೇವನಾಗರಿ ಲಿಪಿಯಲ್ಲಿ ಬರೆದ ಬಳಿಕ ಉಂಟಾದ ವಿವಾದದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಅಧ್ಯಕ್ಷ ಡಾ.ನಿತಿನ್ ಪಿಕಳೆ, ‘ಸರ್ಕಾರದ ನಿಯಮದ ಪ್ರಕಾರ ಶೇ 60ರಷ್ಟು ಅಳತೆಯಲ್ಲಿ ಕನ್ನಡ ಮತ್ತು ಶೇ 40ರಷ್ಟು ಅಳತೆಯಲ್ಲಿ ದೇವನಾಗರಿ ಲಿಪಿಯಲ್ಲಿ ಹೆಸರು ಬರೆಯಲಾಗಿತ್ತು. ಅದು ಹಿಂದಿಯೂ ಅಲ್ಲ, ಮರಾಠಿಯೂ ಅಲ್ಲ’ ಎಂದರು.

ADVERTISEMENT

‘ಕನ್ನಡ ರಾಜ್ಯದ ಆಡಳಿತ ಭಾಷೆ. ಕಾರವಾರದಲ್ಲಿ ಬಹುಪಾಲು ಜನ ಕೊಂಕಣಿ ಮಾತನಾಡುತ್ತಾರೆ. ಇಲ್ಲಿನವರೂ ಕನ್ನಡಿಗರೇ. ನಾಮಫಲಕದಲ್ಲಿ ಸ್ಥಳೀಯ ಭಾಷೆಯಲ್ಲಿ ಹೆಸರು ಬರೆದ ಸಣ್ಣ ವಿಷಯವನ್ನು ಇಷ್ಟು ದೊಡ್ಡ ವಿವಾದ ಮಾಡುತ್ತಾರೆ ಎಂದು ಊಹಿಸಿರಲಿಲ್ಲ. ಇದರ ಬದಲು, ಇಲ್ಲಿನ ಯುವಕರಿಗೆ ಉದ್ಯೋಗವಕಾಶಗಳಂಥ ಗಂಭೀರ ವಿಚಾರಗಳನ್ನು ಚರ್ಚಿಸಬೇಕಿದೆ’ ಎಂದು ಹೇಳಿದರು.

‘ಕಾರವಾರ ಕರ್ನಾಟಕದ ಅವಿಭಾಜ್ಯ ಅಂಗವೇ ಆಗಿದೆ. ಹಾಗಾಗಿ ನಮಗೆ ಕನ್ನಡದ ಬಗ್ಗೆ ಹೊರಗಿನವರು ಬಂದು ಹೇಳುವ ಅಗತ್ಯವಿಲ್ಲ. ಈ ವಿಷಯ ತುಂಬ ಸೂಕ್ಷ್ಮವಿದ್ದು, ಸರ್ಕಾರಕ್ಕೆ ಪತ್ರ ಬರೆದು ಅಭಿಪ್ರಾಯ ಕೇಳೋಣ’ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಹಲವು ಸದಸ್ಯರು, ‘ಕನ್ನಡದ ಬಗ್ಗೆ ನಮಗೆ ಅಪಾರ ಅಭಿಮಾನ, ಪ್ರೀತಿಯಿದೆ. ವಾರ್ಡ್‌ಗಳ ನಾಮಫಲಕಗಳಲ್ಲಿ ಕನ್ನಡದೊಂದಿಗೆ ಕೊಂಕಣಿಯಲ್ಲೂ ಹೆಸರುಗಳು ಇರುವುದು ಅನುಕೂಲಕರ’ ಎಂದರು.

ಸದಸ್ಯ ಗಣಪತಿ ನಾಯ್ಕ ಮಾತನಾಡಿ, ‘ಶಾಂತಿಯುತವಾಗಿದ್ದ ಕಾರವಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿಯಾಯಿತು. ಇಲ್ಲಿ ಹೊತ್ತಿದ ಭಾಷೆಯ ಕಿಡಿ ಭಟ್ಕಳದವರೆಗೂ ತಲುಪಿದೆ. ಕೊಂಕಣಿಯ ಪರವಾಗಿ ಸ್ಥಳೀಯ ಗ್ರಾಮ ಪಂಚಾಯಿತಿಗಳಲ್ಲಿ ಠರಾವು ಸ್ವೀಕರಿಸಲಾಗುತ್ತಿದೆ. ಈ ಬಗ್ಗೆ ತೀರ್ಮಾನಿಸಲು ಶಾಸಕಿ, ವಿಧಾನಪರಿಷತ್ ಸದಸ್ಯರು, ನಗರಸಭೆ ಸದಸ್ಯರನ್ನು ಒಳಗೊಂಡು ಸಭೆ ಮಾಡಬೇಕು’ ಎಂದು ಒತ್ತಾಯಿಸಿದರು. ‌

ಟೆಂಡರ್ ಅಕ್ರಮ ಆರೋಪ: ಗದ್ದಲ
ನಗರಸಭೆಯಲ್ಲಿ ಪೂರ್ಣಗೊಂಡ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ ಎಂಬ ಮಾಜಿ ಶಾಸಕ ಸತೀಶ ಸೈಲ್ ಅವರ ಆರೋಪವು ಸಾಮಾನ್ಯಸಭೆಯಲ್ಲಿ ಪ್ರತಿಧ್ವನಿಸಿತು.

ವಿರೋಧ ಪಕ್ಷದ ಸದಸ್ಯರ ಆರೋಪಗಳಿಗೆ ಪ್ರತಿಕ್ರಿಯಿಸಿದ ಅಧ್ಯಕ್ಷ ಡಾ.ನಿತಿನ್ ಪಿಕಳೆ, ‘ಅಭಿವೃದ್ಧಿ ಕಾಮಗಾರಿಗೆ ಎಲ್ಲರೂ ಒತ್ತಾಯಿಸುತ್ತಾರೆ. ಆದರೆ, ತುರ್ತು ಕಾಮಗಾರಿ ಮಾಡಿದ್ದರ ಬಗ್ಗೆ ಆರೋಪಿಸುತ್ತಾರೆ’ ಎಂದರು.

ಈ ವಿಚಾರದಲ್ಲಿ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ವಾಗ್ವಾದವಾಗಿ ಗದ್ದಲ ಉಂಟಾಯಿತು.

ಬಳಿಕ ಮಾತು ಮುಂದುವರಿಸಿದ ಡಾ.‍ಪಿಕಳೆ, ‘ಅಕ್ರಮವಾಗಿ ನಡೆದಿದೆ ಎಂದು ಆರೋಪಿಸುತ್ತಿರುವ ಎಲ್ಲ ಕಾಮಗಾರಿಗಳಿಗೆ ಮೂರು ತಿಂಗಳ ಹಿಂದೆ ನೀವೇ ಸಹಮತ ವ್ಯಕ್ತಪಡಿಸಿದ್ದೀರಿ. ಈಗ ಅವುಗಳನ್ನು ವಿರೋಧಿಸುವುದು ನಗರಕ್ಕೆ ಮಾಡುವ ಅನ್ಯಾಯ’ ಎಂದು ತಿರುಗೇಟು ನೀಡಿದರು.

‘ನ್ಯಾಯಾಲಯದ ಆದೇಶದ ಪ್ರಕಾರ ಕೋಡಿಬಾಗ ರಸ್ತೆಯ ಅಭಿವೃದ್ಧಿ ಮಾಡಬೇಕಿದೆ. ಇಲ್ಲಿ ಕೆಲವರ ಆಸ್ತಿ ಸರ್ವೆ ಮಾಡುವಾಗ ತಪ್ಪಾಗಿದೆ. ಹಾಗಾಗಿ ಪುನಃ ಸರ್ವೆ ಮಾಡಬೇಕು’ ಎಂದು ಸದಸ್ಯ ಮುಕ್ಬೂಲ್ ಶೇಖ್ ಒತ್ತಾಯಿಸಿದರು. ‌

ಉಪಾಧ್ಯಕ್ಷ ಪ್ರಕಾಶ ಪಿ.ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಸುಜಾತಾ ಥಾಮ್ಸೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.