ಕಾರವಾರ: ಇಲ್ಲಿನ ದಿವೇಕರ ಕಾಲೇಜು ಸಮೀಪ ಕಡಲತೀರದಲ್ಲಿ ಜಾಗ ಸಮತಟ್ಟುಗೊಳಿಸಲು ಬಂದ ತಟರಕ್ಷಕ ಪಡೆಯ (ಕೋಸ್ಟ್ ಗಾರ್ಡ್) ಅಧಿಕಾರಿಗಳು, ಸಿಬ್ಬಂದಿ ಜನವಿರೋಧದ ಕಾರಣಕ್ಕೆ ಕಾಲ್ಕಿತ್ತ ಘಟನೆ ಮಂಗಳವಾರ ನಡೆಯಿತು.
ತಟರಕ್ಷಕ ಪಡೆಗೆ ಮಂಜೂರಾಗಿರುವ 3.14 ಎಕರೆ ಜಾಗದಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ತೆರವುಗೊಳಿಸಿ, ಜಾಗಕ್ಕೆ ಬೇಲಿ ಅಳವಡಿಸುವ ಸಲುವಾಗಿ ಜೆಸಿಬಿ ಬಳಸಿ ಕಾರ್ಯಾಚರಣೆ ಆರಂಭಿಸಲಾಯಿತು. ಸ್ಥಳದಲ್ಲಿದ್ದ ಮೀನುಗಾರರು, ಸ್ಥಳೀಯರು ವಿರೋಧ ವ್ಯಕ್ತಪಡಿಸಿದರು. ಆದರೂ, ಲೆಕ್ಕಿಸದೆ ಕಾರ್ಯಾಚರಣೆ ಮುಂದುವರಿಸಲಾಯಿತು.
ಸ್ಥಳಕ್ಕೆ ಬಂದ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ, ಮೀನುಗಾರ ಮುಖಂಡ ರತನ್ ದುರ್ಗೇಕರ್ ತಟರಕ್ಷಕ ಪಡೆಗೆ ಕಡಲತೀರದಲ್ಲಿ ಜಾಗ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದರು.
‘ತಟರಕ್ಷಕ ಪಡೆಗೆ ಕಡಲತೀರದಲ್ಲಿ ಜಾಗ ನೀಡದಂತೆ ಹೋರಾಟ ನಡೆಸುತ್ತ ಬಂದಿದ್ದೇವೆ. ನೌಕಾದಳಕ್ಕೆ ತಾಲ್ಲೂಕಿನ ಹಲವು ಕಡಲತೀರಗಳನ್ನು ನೀಡಿ ಇಲ್ಲಿನ ಜನರು ಜಾಗ ಕಳೆದುಕೊಂಡಿದ್ದಾರೆ. ಇರುವ ಏಕೈಕ ಕಡಲತೀರವೂ ರಕ್ಷಣಾ ಚಟುವಟಿಕೆಗೆ ಮೀಸಲಾದರೆ ಜನರಿಗೆ ಕಡಲತೀರ ಸಿಗದಂತಾಗುತ್ತದೆ’ ಎಂದು ಮಾಧವ ನಾಯಕ ಆಕ್ಷೇಪಿಸಿದರು.
ತಟಕ್ಷಕ ಪಡೆಗೆ ಮೀಸಲಿಟ್ಟಿರುವ ಜಾಗ ಹಿಂಪಡೆಯುವಂತೆ ಜಿಲ್ಲಾಡಳಿತಕ್ಕೆ ಹಲವು ಬಾರಿ ಮನವಿ ಮಾಡಲಾಗಿದೆ. ಸದ್ಯ ಈ ಜಾಗದಲ್ಲಿ ಯಾವುದೇ ಚಟುವಟಿಕೆ ನಡೆಸಬಾರದು ಎಂದು ಒತ್ತಾಯಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ನಿಶ್ಚಲ್ ನೊರ‍್ಹೋನಾ, ‘ಸ್ಥಳೀಯರಿಂದ ವಿರೋಧ ಇರುವ ಕಾರಣಕ್ಕೆ ಜಾಗದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು. ಯಾವುದೇ ಚಟುವಟಿಕೆ ಕೈಗೊಳ್ಳುವ ಮುನ್ನ ಜಿಲ್ಲಾಡಳಿತಕ್ಕೆ, ಪೊಲೀಸರಿಗೆ ಮಾಹಿತಿ ನೀಡಿ’ ಎಂದು ತಟರಕ್ಷಕ ಪಡೆ ಅಧಿಕಾರಿಗಳಿಗೆ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.