
ಕಾರವಾರ: ನಿರೀಕ್ಷಿತ ಆದಾಯವಿಲ್ಲದೆ, ನಿರ್ವಹಣೆಗೂ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಜಲಸಾರಿಗೆ ಮಂಡಳಿ ಇಲ್ಲಿನ ವಾಣಿಜ್ಯ ಬಂದರಿನ ಅಲ್ಪ ಭಾಗವನ್ನು ಖಾಸಗಿ ಕಂಪನಿಗೆ ಲೀಸ್ ಆಧಾರದಲ್ಲಿ ನೀಡಲು ಮುಂದಾಗಿದೆ. ಆದರೆ, ಹರಾಜು ಪ್ರಕ್ರಿಯೆ ಪೂರ್ಣಗೊಳ್ಳಲು ಪದೇ ಪದೇ ವಿಳಂಬವಾಗುತ್ತಿದೆ.
ಬಂದರಿನ 175 ಮೀಟರ್ ಉದ್ದದ ಹಡಗು ಕಟ್ಟೆ (ಬರ್ತ್) ಸೇರಿದಂತೆ 2,100 ಚದರ ಮೀಟರ್ ಸಮುದ್ರ ಪ್ರದೇಶ, 10 ಸಾವಿರ ಮೆಟ್ರಿಕ್ ಟನ್ ಸರಕು ದಾಸ್ತಾನು ಸಾಮರ್ಥ್ಯದ 3,120 ಚದರ ಮೀಟರ್ ಉಗ್ರಾಣ, 3,036 ಚ.ಮೀ ವಿಸ್ತಾರದ ಸರಕು ದಾಸ್ತಾನು ಪ್ರದೇಶ ಸೇರಿದಂತೆ ಒಟ್ಟು 11,600 ಚ.ಮೀಟರ್ ಪ್ರದೇಶವನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಡಿಯಲ್ಲಿ (ಪಿಪಿಪಿ) ನಿರ್ವಹಿಸಲು ತಿಂಗಳ ಹಿಂದೆಯೇ ಹರಾಜು ಕರೆಯಲಾಗಿದೆ.
ಬಂದರಿನ ಅಲ್ಪ ಭಾಗವನ್ನು ಅಭಿವೃದ್ಧಿಪಡಿಸಿ, ನಿರ್ವಹಿಸಿ, ಹಸ್ತಾಂತರಿಸುವ ಒಪ್ಪಂದದ ಆಧಾರದಲ್ಲಿ 30 ವರ್ಷದ ಅವಧಿಗೆ ಲೀಸ್ ನೀಡಲು ಕಳೆದ ವರ್ಷ ಡಿಸೆಂಬರ್‌ನಲ್ಲಿ ಹರಾಜು ಕರೆಯಲಾಗಿತ್ತು. ಜ.29ರಂದು ಬಿಡ್ ಸಲ್ಲಿಕೆಗೆ ಅಂತಿಮ ಗಡುವು ನೀಡಲಾಯಿತು. ಈಗ ಪುನಃ ಫೆ.16ರ ವರೆಗೆ ಬಿಡ್ ಸಲ್ಲಿಕೆಗೆ ಕಾಲಾವಕಾಶ ನೀಡಿ ಅವಧಿ ವಿಸ್ತರಣೆ ಮಾಡಲಾಗಿದೆ.
‘ಬಂದರು ಪ್ರದೇಶದಲ್ಲಿ ಲೀಸ್ ಪಡೆಯುವ ಮುನ್ನ ಕೈಗೊಳ್ಳುವ ಅಭಿವೃದ್ಧಿ ಯೋಜನೆಗಳ ಬಗ್ಗೆ ಅಧ್ಯಯನ ನಡೆಸಲು ಕಾಲಾವಕಾಶಬೇಕು ಎಂದು ಖಾಸಗಿ ಕಂಪನಿಗಳ ಸಮಯಾವಕಾಶ ಕೋರಿವೆ. ಅದಕ್ಕಾಗಿ ಎರಡು ಬಾರಿ ಬಿಡ್ ಸಲ್ಲಿಕೆ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ’ ಎಂದು ಬಂದರು ಜಲಸಾರಿಗೆ ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದರು.
‘ಹಡಕು ಕಟ್ಟೆ ಸೇರಿದಂತೆ ಬಂದರಿನ ನಿರ್ವಹಣೆಯ ಲೀಸ್ ಪಡೆದುಕೊಳ್ಳುವ ಕಂಪನಿ ಉಗ್ರಾಣ ನವೀಕರಣ ಕೆಲಸ ಕೈಗೊಳ್ಳಬೇಕು, ಬಂದರು ಧಕ್ಕೆಯ ಕಾಂಕ್ರೀಟ್ ಹಾಸಿನ ದುರಸ್ತಿ, ಸಂಪರ್ಕ ರಸ್ತೆ ಸರಿಪಡಿಸಿಕೊಳ್ಳುವ ಜೊತೆಗೆ ಇಲ್ಲಿ ಅಗತ್ಯ ಸೌಕರ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹರಾಜು ಒಪ್ಪಂದದಲ್ಲಿ ತಿಳಿಸಲಾಗಿದೆ. ಈ ಯೋಜನೆಗಳನ್ನು ಕೈಗೊಳ್ಳಲು ಕನಿಷ್ಠ ₹20 ಕೋಟಿ ವೆಚ್ಚದ ಅಂದಾಜು ಇದೆ. ಬಂದರು ವ್ಯಾಪ್ತಿಯಲ್ಲಿ ಹೂಳು ತೆಗೆಸುವ ಜವಾಬ್ದಾರಿಯನ್ನು ಕಂಪನಿಗಳೇ ಹೊತ್ತುಕೊಳ್ಳಬೇಕಿದೆ. ಹೀಗಾಗಿ ಕಂಪನಿಗಳು ತಾಂತ್ರಿಕ ಸಲಹೆಗಾರರ ಅಭಿಪ್ರಾಯ ಆಲಿಸಲು ಸಮಯಾವಕಾಶ ಕೋರುತ್ತಿರಬಹುದು’ ಎಂದೂ ಹೇಳಿದರು.
ವರ್ಷದಿಂದ ವರ್ಷಕ್ಕೆ ಬಂದರಿನಲ್ಲಿ ರಫ್ತು, ಆಮದು ಚಟುವಟಿಕೆ ಇಳಿಕೆಯಾಗುತ್ತಿದೆ. ಕಳೆದ ಮೂರು ವರ್ಷಗಳಿಂದ ಈಚೆಗೆ ವಾರ್ಷಿಕ ಆದಾಯವೂ ಇಳಿಕೆಯಾಗತೊಡಗಿದೆ.
ವಾಣಿಜ್ಯ ಬಂದರಿನ ಶೇ 35ರಷ್ಟು ಭಾಗ ಮಾತ್ರ ಖಾಸಗಿ ಕಂಪನಿಗೆ ಲೀಸ್‌ಗೆ ನೀಡಲು ಹರಾಜು ನಡೆಸಲಾಗುತ್ತಿದ್ದು ಬಿಡ್ ಸಲ್ಲಿಕೆಗೆ ಕಂಪನಿಗಳ ಕೋರಿಕೆಯಂತೆ ಸಮಯಾವಕಾಶ ವಿಸ್ತರಿಸಲಾಗಿದೆ.ವಿನಾಯಕ ನಾಯ್ಕ ಬಂದರು ಎಂಜಿನಿಯರ್
ಹೊರಗಷ್ಟೆ ಥಳಕು..ಒಳಗೇನಿಲ್ಲ ‘ವಾಣಿಜ್ಯ ಬಂದರಿನ ಪ್ರವೇಶದ್ವಾರವನ್ನು ಬಂದರು ಜಲಸಾರಿಗೆ ಮಂಡಳಿಯು ನವೀಕರಿಸುವ ಕೆಲಸ ಮಾಡುತ್ತಿದೆ. ಆದರೆ ವರ್ಷಗಳಿಂದಲೂ ಬಂದರಿನ ಹಡಗುಕಟ್ಟೆ ಸಮೀಪದಲ್ಲಿನ ಉಗ್ರಾಣ ಸರಕು ದಾಸ್ತಾನು ಪ್ರದೇಶ ಪಾಳುಬಿದ್ದಿದ್ದರೂ ದುರಸ್ತಿ ಪಡಿಸುವ ಕೆಲಸ ಆಗಿಲ್ಲ. ಸರಕು ಸಾಗಣೆಗೆ ಅಗತ್ಯ ಸಲಕರಣೆಗಳ ನಿರ್ವಹಣೆಗೂ ಅಲಕ್ಷಿಸಲಾಗುತ್ತಿದೆ. ಹೊರಗಿನಿಂದ ನೋಡಲಷ್ಟೆ ಬಂದರು ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಲಾಗುತ್ತಿದೆ’ ಎಂದು ಆಮದು–ರಫ್ತು ಚಟುವಟಿಕೆಯಲ್ಲಿ ತೊಡಗಿರುವ ಕಂಪನಿಯ ಪ್ರತಿನಿಧಿಯೊಬ್ಬರು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.