ADVERTISEMENT

ಮೈತ್ರಿ ಅಭ್ಯರ್ಥಿ ಪರ 10 ದಿನ ಪ್ರಚಾರ

ಜೆಡಿಎಸ್ ಮುಖಂಡರ ಜೊತೆ ಹೋಗದೇ ಪ್ರತ್ಯೇಕವಾಗಿ ಮತಯಾಚನೆ: ಸತೀಶ್ ಸೈಲ್

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2019, 12:23 IST
Last Updated 10 ಏಪ್ರಿಲ್ 2019, 12:23 IST
ಸತೀಶ ಸೈಲ್
ಸತೀಶ ಸೈಲ್   

ಕಾರವಾರ:‘ಕಾಂಗ್ರೆಸ್– ಜೆಡಿಎಸ್ ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ್ ಪರಒಟ್ಟು 10 ದಿನ ಪ್ರತ್ಯೇಕವಾಗಿ ಮತಯಾಚನೆ ಮಾಡಲಿದ್ದೇವೆ. ಪಕ್ಷದ ಹಿರಿಯರ ಸಲಹೆ ಹಾಗೂ ಸೂಚನೆಯಂತೆ ಏ.11ರಿಂದಲೇ ಪ್ರಚಾರ ಕಾರ್ಯ ನಡೆಸುತ್ತೇವೆ’ ಎಂದು ಕಾಂಗ್ರೆಸ್ ಮುಖಂಡ ಸತೀಶ್ ಸೈಲ್ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾರವಾರ ತಾಲ್ಲೂಕು ಹಾಗೂ ಅಂಕೋಲಾ ತಾಲ್ಲೂಕಿನಲ್ಲಿ ತಲಾ ಐದು ದಿನ ಪ್ರಚಾರ ಮಾಡಲಿದ್ದೇವೆ. ಜೆಡಿಎಸ್ ಅಭ್ಯರ್ಥಿ ಪರ ಮತಯಾಚನೆಗೆ ಹೋಗುವ ಬಗ್ಗೆ ನನ್ನ ಬೆಂಬಲಿಗರು, ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರ ಜತೆ ಸಭೆ ಮಾಡಿ ಚರ್ಚಿಸಿದ ಬಳಿಕ ಈ ತೀರ್ಮಾನಕ್ಕೆ ಬರಲಾಗಿದೆ. ಜೆಡಿಎಸ್ ಮುಖಂಡರ ಜತೆ ಹೋಗದೇ‍ಪ್ರತ್ಯೇಕವಾಗಿ ಮತದಾರರ ಬಳಿಗೆ ಹೋಗಲು ನಿರ್ಧರಿಸಲಾಗಿದೆ’ ಎಂದು ಅವರು ಹೇಳಿದರು.

‘ಮೈತ್ರಿ ಪಕ್ಷದ ಅಭ್ಯರ್ಥಿ ಆನಂದ ಅಸ್ನೋಟಿಕರ್ ನಮ್ಮ ಮನೆಗೆ ಬಂದುಪ್ರಚಾರ ಕಾರ್ಯದಲ್ಲಿ ಜತೆಯಾಗುವಂತೆಮನವಿ ಮಾಡಿದ್ದರು. ಆಗ ನಾವೆಲ್ಲರೂ ಚರ್ಚಿಸಿ, ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಮಾತ್ರ ಸ್ಪರ್ಧಿಸಬೇಕು. ಅಲ್ಲದೇ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪರ ಕೆಲಸ ಮಾಡಬೇಕು ಎಂದು ಬೇಡಿಕೆ ಮುಂದಿಟ್ಟೆವು. ಆದರೆ, ಅವರು ಲೋಕಸಭಾ ಚುನಾವಣೆಯಲ್ಲಿ ಒಂದು ವೇಳೆ ಹಿನ್ನಡೆಯಾದರೆ ವಿಧಾನಸಭೆ ಚುನಾವಣೆಯಲ್ಲಿ ತಾವೂ ಸ್ಪರ್ಧಿಸಬೇಕಾಗುತ್ತದೆ. ಹಾಗಾಗಿ ಈ ಬೇಡಿಕೆ ಕಷ್ಟವಾದದ್ದು ಎಂದು ಹೇಳಿದರು. ಆ ಕಾರಣದಿಂದ ನಾವು ಪ್ರತ್ಯೇಕವಾಗಿ ಪ್ರಚಾರಕ್ಕೆ ಹೋಗಲು ತೀರ್ಮಾನಿಸಿದ್ದೇವೆ’ ಎಂದು ತಿಳಿಸಿದರು.

ADVERTISEMENT

‘ನಾವು ಕಾಂಗ್ರೆಸ್ ಪಕ್ಷದ ವಿಚಾರದೊಂದಿಗೆ ಇದ್ದೇವೆ. ಮೈತ್ರಿ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮುಖಂಡರಾದ ಪಕ್ಷದ ಹಿರಿಯರಾದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ದಿನೇಶ್ ಗುಂಡೂರಾವ್ ಕರೆ ಮಾಡಿ ಸೂಚಿಸಿದರು. ಆದ್ದರಿಂದ ಪ್ರಚಾರದಲ್ಲಿ ಭಾಗಿಯಾಗುತ್ತೇವೆ’ ಎಂದರು.

ಯೋಜನೆ ಹೆಸರಲ್ಲಿವಂಚನೆ’:‘ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಕೇಂದ್ರ ಸರ್ಕಾರದ ‘ಬೇಟಿ ಬಚಾವೋ ಬೇಟಿ ಪಡಾವೋ’ ಯೋಜನೆಯ ಹೆಸರಿನಲ್ಲಿ ಅರ್ಜಿಗಳನ್ನು ವಿತರಿಸಲಾಗುತ್ತಿದೆ. ಗ್ರಾಮಸ್ಥರ ಬ್ಯಾಂಕ್ ಖಾತೆಗಳಿಗೆ ₹ 2 ಲಕ್ಷ ಜಮೆಯಾಗುತ್ತದೆ ಎಂದು ನಂಬಿಸಲಾಗುತ್ತಿದೆ. ಹಿಂದಿಯಲ್ಲಿರುವ ಅರ್ಜಿಯನ್ನು ಭರ್ತಿ ಮಾಡಿ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಗ್ರಾಮ ಪಂಚಾಯ್ತಿಯವರು ಇಂಗ್ಲಿಷ್‌ನಲ್ಲಿ ದೃಢೀಕರಿಸಬೇಕು. ಚುನಾವಣೆಯ ಸಂದರ್ಭದಲ್ಲಿ ಇಂತಹ ನೂರಾರು ಅರ್ಜಿಗಳನ್ನು ಏಕಾಏಕಿ ಹಂಚಲಾಗುತ್ತಿದೆ. ಮತದಾರರನ್ನು ಸೆಳೆಯಲು ಬೋಗಸ್ ತಂತ್ರಗಳನ್ನು ಅನುಸರಿಸಲಾಗುತ್ತಿದೆ’ ಎಂದು ಸತೀಶ್ ಸೈಲ್ ದೂರಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಶಂಭು ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಮೀರ್ ನಾಯ್ಕ, ಮುಖಂಡರಾದ ಅಶೋಕ ನಾಯ್ಕ, ಪ್ರಭಾಕರ್ ಮಾಳ್ಸೇಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.