ADVERTISEMENT

ಉತ್ತರ ಕನ್ನಡ: ಮೈದಾನದಲ್ಲಿ ಅಪಾಯಕಾರಿ ‘ರಂಗಮಂದಿರ’

ಗಣಪತಿ ಹೆಗಡೆ
Published 9 ಡಿಸೆಂಬರ್ 2025, 2:55 IST
Last Updated 9 ಡಿಸೆಂಬರ್ 2025, 2:55 IST
ಕಾರವಾರದ ಮಾಲಾದೇವಿ ಮೈದಾನದಲ್ಲಿ ಈಚೆಗೆ ನಡೆದ ಪ್ರತಿಭಟನಾ ಸಮಾವೇಶದ ವೇಳೆ ಅಲ್ಲೇ ಸಮೀಪದಲ್ಲಿ ಶಿಥಿಲಾವಸ್ಥೆಯಲ್ಲಿರುವ ಜಿಲ್ಲಾ ರಂಗಮಂದಿರದ ಕಟ್ಟಡದಲ್ಲಿ ಜನರು ಆಸರೆ ಪಡೆದಿದ್ದರು
ಕಾರವಾರದ ಮಾಲಾದೇವಿ ಮೈದಾನದಲ್ಲಿ ಈಚೆಗೆ ನಡೆದ ಪ್ರತಿಭಟನಾ ಸಮಾವೇಶದ ವೇಳೆ ಅಲ್ಲೇ ಸಮೀಪದಲ್ಲಿ ಶಿಥಿಲಾವಸ್ಥೆಯಲ್ಲಿರುವ ಜಿಲ್ಲಾ ರಂಗಮಂದಿರದ ಕಟ್ಟಡದಲ್ಲಿ ಜನರು ಆಸರೆ ಪಡೆದಿದ್ದರು   

ಕಾರವಾರ: ಆಗಾಗ ಉದುರಿ ಬೀಳುವ ಸಿಮೆಂಟ್ ಚೂರುಗಳು, ಕಾಂಕ್ರೀಟ್ ಕಿತ್ತು ಸರಳುಗಳಷ್ಟೇ ಉಳಿದ ಕಂಬಗಳು... ಇಂತಹ ಅಪಾಯಕಾರಿ ಸ್ಥಿತಿಯಲ್ಲಿರುವ ಇಲ್ಲಿನ ಜಿಲ್ಲಾ ರಂಗಮಂದಿರ ಹೊರ ಆವರಣದಲ್ಲಿ ವಿದ್ಯಾರ್ಥಿಗಳು, ಜನಸಾಮಾನ್ಯರು ಬಿಸಿಲಿನಿಂದ ಪಾರಾಗಲು ಆಸರೆ ಪಡೆದುಕೊಳ್ಳುವ ಅನಿವಾರ್ಯತೆ ಇದೆ.

ಪಕ್ಕದಲ್ಲೇ ಇರುವ ಮಾಲಾದೇವಿ ಮೈದಾನದಲ್ಲಿ ಕ್ರೀಡಾಕೂಟ, ಸಮಾವೇಶ, ಸಾಂಸ್ಕೃತಿಕ ಚಟುವಟಿಕೆಗಳು ನಡೆಯುತ್ತಿರುತ್ತವೆ. ಅಲ್ಲಿ ಪಾಲ್ಗೊಂಡ ಜನರು ಬಿಸಿಲಿನ ಝಳದಿಂದ ಪಾರಾಗಲು ಶಿಥಿಲ ಕಟ್ಟಡದಲ್ಲಿ ಆಸರೆ ಪಡೆಯುತ್ತಿದ್ದಾರೆ. ಅಪಾಯಕಾರಿ ಸ್ಥಿತಿಯಲ್ಲಿರುವ ಕಟ್ಟಡದ ಕೆಳಗೆ ಜನರು ನಿಂತಿರುವುದು ಕಂಡು ಆತಂಕವಾಗುತ್ತದೆ ಎನ್ನುತ್ತಾರೆ ಸ್ಥಳೀಯರು.

‘ಜಿಲ್ಲಾ ರಂಗಮಂದಿರ ಶಿಥಿಲಗೊಂಡಿರುವ ಕಾರಣದಿಂದ ಕಾರ್ಯಕ್ರಮಗಳಿಗೆ ಬಳಕೆಗೆ ನೀಡದೆ ವರ್ಷಗಳೇ ಕಳೆದಿದೆ. ಆದರೆ, ಅದರ ಹೊರಭಾಗದಲ್ಲಿ ಜನರು ಕುಳಿತುಕೊಳ್ಳದಂತೆ ತಾತ್ಕಾಲಿಕ ತಡೆಗೋಡೆ ಅಳವಡಿಸುವ ಅಥವಾ ಎಚ್ಚರಿಕೆ ಫಲಕ ಅಳವಡಿಸುವ ಕೆಲಸ ನಡೆದಿಲ್ಲ. ಕಟ್ಟಡದ ಸ್ಥಿತಿ ಗಮನಿಸಿದರೆ ಈಗಲೋ, ಆಗಲೋ ಬೀಳುವಂತಿದೆ. ಅಂತಹ ಸ್ಥಳದಲ್ಲಿ ಕೆಲವೊಮ್ಮೆ ನೂರಾರು ಜನರು ಆಸರೆ ಕಂಡುಕೊಳ್ಳುವುದು ಅಪಾಯಕ್ಕೆ ಆಹ್ವಾನ ನೀಡಿದಂತೆ’ ಎಂದು ಸ್ಥಳೀಯ ನಿವಾಸಿ ಸುನೀಲ ನಾಯ್ಕ ಹೇಳಿದರು.

ADVERTISEMENT

‘ಶಾಲೆ, ಕಾಲೇಜುಗಳ ಕ್ರೀಡಾಕೂಟ ನಡೆಯುವ ವೇಳೆಯಲ್ಲಂತೂ ನೂರಾರು ವಿದ್ಯಾರ್ಥಿಗಳು ಇದೇ ರಂಗಮಂದಿರದ ಕಟ್ಟಡ ಬಳಕೆ ಮಾಡಿಕೊಳ್ಳುತ್ತಾರೆ. ಬಟ್ಟೆ ಬದಲಿಸಲು, ನೆರಳಿಗೆ ಕಟ್ಟಡದ ಆವರಣದಲ್ಲಿ ಸೇರುತ್ತಾರೆ. ಮೈದಾನದ ಇನ್ನೊಂದು ಬದಿಯಲ್ಲಿ ಕ್ರೀಡಾ ಇಲಾಖೆಗೆ ಸೇರಿದ ಕಟ್ಟಡ ನಿರ್ಮಾಣವಾಗುತ್ತಿದ್ದರೂ ಅದರ ಬಳಕೆಗೆ ಅವಕಾಶ ಸಿಗುತ್ತಿಲ್ಲ. ಕಟ್ಟಡ ಪೂರ್ಣಗೊಳಿಸುತ್ತಿಲ್ಲ’ ಎಂದು ಹಿರಿಯ ಕ್ರೀಡಾಪಟು ಗಿರೀಶ ನಾಯಕ ಹೇಳಿದರು.

1986ರಲ್ಲಿ ನಿರ್ಮಾಣಗೊಂಡಿದ್ದ ಜಿಲ್ಲಾ ರಂಗಮಂದಿರದ ಕಟ್ಟಡವನ್ನು 2011–12ರ ಅವಧಿಯಲ್ಲಿ ನವೀಕರಣಗೊಳಿಸಲಾಗಿತ್ತು. ಆ ಬಳಿಕ ಕಟ್ಟಡ ದುರಸ್ತಿಗೊಂಡಿರಲಿಲ್ಲ. ಏಕಕಾಲಕ್ಕೆ 600 ಮಂದಿ ಕುಳಿತುಕೊಳ್ಳಬಹುದಾದ ಆಸನ ವ್ಯವಸ್ಥೆ ಹೊಂದಿರುವ ಕಟ್ಟಡದ ಬಳಕೆ 2024ರಿಂದ ಸ್ಥಗಿತವಾಗಿದೆ. ರಂಗಮಂದಿರದ ಪ್ರವೇಶದ್ವಾರದ ಕಟ್ಟಡದ ಮೊದಲ ಮಹಡಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿ ಕಾರ್ಯನಿರ್ವಹಿಸುತ್ತಿದೆ.

ರಂಗಮಂದಿರ ಕಟ್ಟಡ ಅಪಾಯಕಾರಿ ಸ್ಥಿತಿಯಲ್ಲಿರುವ ಕುರಿತು ಎಚ್ಚರಿಸುವ ಫಲಕವನ್ನು ಹಲವು ಬಾರಿ ಅಳವಡಿಸಿದ್ದರೂ ಕಿಡಿಗೇಡಿಗಳು ಕಿತ್ತು ಹಾಕಿದ್ದಾರೆ
ಮಂಗಲಾ ನಾಯ್ಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ

ಕಟ್ಟಡ ತೆರವಿಗೆ ಸೂಚನೆ

‘ರಂಗ ಮಂದಿರ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದ್ದು ಇಡೀ ಕಟ್ಟಡ ತೆರವುಗೊಳಿಸಿ ಎಂದು 2023ರಲ್ಲಿಯೇ ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗಳನ್ನು ಒಳಗೊಂಡ ತಾಂತ್ರಿಕ ಸಲಹಾ ಸಮಿತಿ ವರದಿ ನೀಡಿದೆ. ಆದರೆ ಹೊಸ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗದ ಹೊರತು ಈಗಿನ ಕಟ್ಟಡ ತೆರವುಗೊಳಿಸುವುದು ಕಷ್ಟ. ಹೊಸ ಕಟ್ಟಡ ನಿರ್ಮಾಣಕ್ಕೆ ₹8.5 ಕೋಟಿ ವೆಚ್ಚದ ಪ್ರಸ್ತಾವ ರಾಜ್ಯ ಕಚೇರಿಗೆ ಸಲ್ಲಿಸಲಾಗಿದೆ. ಅನುಮತಿ ಸಿಕ್ಕ ಬಳಿಕ ಕಟ್ಟಡ ತೆರವುಗೊಳ್ಳಲಿದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಲಾ ನಾಯ್ಕ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.